ಗುರುಪುರ ಬಿಲ್ಲವ ಸಂಘದಲ್ಲಿ ಉಚಿತ ವೈದ್ಯಕೀಯ ಶಿಬಿರ
ಗುರುಪುರ : ಬಿಲ್ಲವ ಸಮಾಜ ಸೇವಾ ಸಂಘ(ರಿ), ಸ್ಫೂರ್ತಿ ಬಿಲ್ಲವ ಮಹಿಳಾ ಘಟಕ ಗುರುನಗರ ಗುರುಪುರ ಹಾಗೂ ಸನ್ಮತಿ ಚಾರಿಟೇಬಲ್ ಟ್ರಸ್ಟ್(ರಿ)ಮಂಗಳೂರು ಮತ್ತು ಯೇನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ಸಹಯೋಗದಲ್ಲಿ ಡಿ. ೭ರಂದು ಗುರುಪುರದ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ಉಚಿತ ವೈದ್ಯಕೀಯ ಮಹಿಳಾ ಯೋಗಕ್ಷೇಮ, ದಂತ ಮತ್ತು ನೇತ್ರ ತಪಾಸಣಾ ಶಿಬಿರ ನಡೆಯಿತು.

ದೀಪ ಬೆಳಗಿಸಿ ಶಿಬಿರ ಉದ್ಘಾಟಿಸಿದ ಗುರುಪುರದ ಡಾ. ಯೋಗೀಶ್ ತಂತ್ರಿ ಮಾತನಾಡಿ, ಆರೋಗ್ಯ ಒಂದಿದ್ದರೆ ಉಳಿದೆಲ್ಲ ಭಾಗ್ಯ ಇದ್ದಂತೆ. ಆರೋಗ್ಯ ಕೆಟ್ಟಾಗ ಮಾತ್ರ ಈ ಭಾಗ್ಯದ ನಿಜವಾದ ಅರ್ಥ ತಿಳಿಯುತ್ತದೆ. ಎಲ್ಲರೂ ಆರೋಗ್ಯದ ಬಗ್ಗೆ ನಿಯಮಿತ ಕಾಳಜಿ ವಹಿಸಬೇಕು ಎಂದರು.

ಸನ್ಮತಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಕುಶಲಾ ಐ., ಮಾತನಾಡಿ, ಟ್ರಸ್ಟ್ ವತಿಯಿಂದ ಮಂಗಳೂರಿನಲ್ಲಿ ಇಂತಹ ಶಿಬಿರ ಆಯೋಜಿಸುತ್ತಿದ್ದೇವೆ. ಹುಟ್ಟೂರಿನ ಜನರಿಗೆ ವೈದ್ಯಕೀಯ ತಪಾಸಣಾ ಶಿಬಿರ ಆಯೋಜಿಸುವ ಕನಸು ಕಂಡಿದ್ದು, ಅದೀಗ ನನಸಾಗಿದೆ. ಗ್ರಾಮೀಣ ಪ್ರದೇಶದವರಿಗೆ ಉಚಿತ ವೈದ್ಯಕೀಯ ಸೇವೆ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಶಿಬಿರಕ್ಕೆ ಮಹತ್ವ ನೀಡಲಾಗಿದೆ. ಮಹಿಳೆಯರ ಸಹಿತ ಎಲ್ಲರೂ ಇದರ ಪ್ರಯೋಜನ ಪಡೆಯಬೇಕು ಎಂದರು.
ಶಿಬಿರದ ಮಹತ್ವದ ಬಗ್ಗೆ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಮಹಾಬಲ ಅಮೀನ್ ಮಾಹಿತಿ ನೀಡದರೆ, ಯೇನಪೋಯ ಆಸ್ಪತ್ರೆಯ ಶಿಬಿರ ಆಯೋಜಕ ಶಮೀರ್ ಅವರು ಆಸ್ಪತ್ರೆಯಿಂದ ಸಿಗಲು ವೈದ್ಯಕೀಯ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.
ಸ್ಫೂರ್ತಿ ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷೆ ವಿನೋದಾ ಡಿ. ಅಂಚನ್, ಯೇನಪೋಯ ಆಸ್ಪತ್ರೆಯ ಡಾ. ಆರ್ಯನ್, ಡಾ. ಆಲ್ಫಿಯಾ, ಡಾ. ಸಿರಸ್ ಉಪಸ್ಥಿತರಿದ್ದರು. ಸ್ವಾಗತಿಸಿ ನಿರೂಪಿಸಿದ ಸಂಘದ ಸದಸ್ಯ ಯಶವಂತ ಕೋಟ್ಯಾನ್ ವಂದಿಸಿದರು.
ಶಿಬಿರದಿಂದ ಮಹಿಳೆಯರ ಸಹಿತ ಹಲವು ಪುರುಷರು ಮತ್ತು ಮಕ್ಕಳು ಪ್ರಯೋಜನ ಪಡೆದುಕೊಂಡರು. ದಂತ, ಕಣ್ಣು, ಬಿಪಿ-ಶುಗರ್, ಮಧುಮೇಹ ಮತ್ತು ಸಾಮಾನ್ಯ ವೈದ್ಯಕೀಯ ತಪಾಸಣೆ ವ್ಯವಸ್ಥೆಗೊಳಿಸಲಾಗಿದ್ದು, ಅಗತ್ಯವಿದ್ದವರಿಗೆ ಉಚಿತ ಕನ್ನಡಕ ವಿತರಿಸಲಾಯಿತು.



