ಕೈಕಂಬ : ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್, ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ದಕಜಿಪಂ, ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಮಂಗಳೂರು ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ `ಜ್ಞಾನ ರಥ-ಜ್ಞಾನ ಪಥ’ ಪುಸ್ತಕಾಧರಿತ ಪ್ರಬಂಧ, ಭಾಷಣ, ಶ್ಲೋಕ ಕಂಠಪಾಠ ಮತ್ತು ಚಿತ್ರಕಲಾ ಸ್ಪರ್ಧೆಯು ವಾಮಂಜೂರಿನ ಎಸ್‌ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆಯಲ್ಲಿ ನಡೆಯಿತು.

ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ಪತಂಜಲಿ ಯೋಗ ಪ್ರತಿಷ್ಠಾನ ಮಂಗಳೂರು ಇದರ ಅಧ್ಯಕ್ಷ ಏಕನಾಥ ಬಾಳಿಗ ಮಾತನಾಡಿ, ಮಕ್ಕಳಿಗೆ ಎಳೆಯ ಪ್ರಾಯದಲ್ಲಿ ಸಿಗುವ ಉತ್ತಮ ಸಂಸ್ಕಾರ, ಸಂಸ್ಕೃತಿ, ಆಚಾರ-ವಿಚಾರದಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಪ್ರತಿವರ್ಷ ಹೊರತರುವ ನೈತಿಕ ಮೌಲ್ಯಾಧರಿತ ಪುಸ್ತಕ ಓದುವಂತೆ ಮಕ್ಕಳಿಗೆ ಪ್ರೇರಣೆ ನೀಡುತ್ತಿರುವುದು ಶ್ಲಾಘನೀಯ. ಮಕ್ಕಳ ಮನಸ್ಸು ಹಾಲಿನಂತೆ ಶುಭ್ರವಾಗಿರುತ್ತದೆ. ಅವರನ್ನು ಬೆಳೆಸುವ ರೀತಿಯಲ್ಲಿ ಅವರ ಭವಿಷ್ಯ ಅಡಗಿದೆ ಎಂದರು.

ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ನಿರ್ದೇಶಕ ಡಾ. ಐ. ಶಶಿಕಾಂತ ಜೈನ್ ಪ್ರಾಸ್ತಾವಿಕ ಮಾತನಾಡಿ, ಧರ್ಮಸ್ಥಳದ ನೂರಾರು ಜನೋಪಯೋಗಿ ಕಾರ್ಯಕ್ರಮಗಳಲ್ಲಿ ಮೌಲ್ಯಾಧರಿತ ಪುಸ್ತಕ ಪ್ರಕಟಣೆ ಸೇರಿದ್ದು, ಅವುಗಳ ಓದುವಿಕೆಯಿಂದ ಮಕ್ಕಳು ಪ್ರತಿಭಾವಂತರಾಗುತ್ತಿದ್ದಾರೆ ಎಂದರು.

ಶಾಲಾ ಆಡಳಿತಾಧಿಕಾರಿ ನರೇಶ್ ಮಲ್ಲಿಗೆಮಾಡು ಅಧ್ಯಕ್ಷತೆ ವಹಿಸಿದ್ದು, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ವಿಠಲ ವಾಗ್ಮೋರೆ ಉಪಸ್ಥಿತರಿದ್ದರು. ಪ್ರಾಥಮಿಕ ಶಾಲಾ ಹಿರಿಯ ಶಿಕ್ಷಕಿ ಹರಿಣಾಕ್ಷಿ ಸ್ವಾಗತಿಸಿದರು. ಸಹ ಶಿಕ್ಷಕ ಗಂಗಾಧರ ನಿರೂಪಿಸಿದರೆ, ಯೋಗ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಶೇಖರ ಕಡ್ತಲ ವಂದಿಸಿದರು.

By suddi9

Leave a Reply

Your email address will not be published. Required fields are marked *