ಗುರುಪುರ : ಪೆರ್ಮುದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿಡ್ಡೇಲ್‌ಕೋಡಿ ಎಂಬಲ್ಲಿ ಭಾನುವಾರ ರಾತ್ರಿ ಜಿ.ಕೆ. ನೋಣಯ್ಯ ಪೂಜಾರಿ ಎಂಬವರ `ಜಿಕೆ ನಿವಾಸ’ದ ಜಗುಲಿಯಲ್ಲಿ ಮಲಗಿದ್ದ ಸಾಕುನಾಯಿ ಹೊತ್ತೊಯ್ದ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿಯು ಮಂಗಳವಾರ ಬೆಳಿಗ್ಗೆ ಮನೆಯ ಎದುರು ಬೋನು ಅಳವಡಿಸಿದ್ದಾರೆ

ರಾತ್ರಿ ವೇಳೆ ಬೋನಿನೊಳಗೆ ನಾಯಿ ಅಥವಾ ಕೋಳಿ ಇಡುವಂತೆ ಇಲಾಖೆ ಸಿಬ್ಬಂದಿಯು ಮನೆಯವರಿಗೆ ಸೂಚಿಸಿದ್ದಾರೆ. ಕಳೆದ ವರ್ಷ ಇದೇ ವೇಳೆಗೆ ಜಿ.ಕೆ ನಿವಾಸದಿಂದ ನಾಯಿ ಮರಿಯೊಂದು ನಾಪತ್ತೆಯಾಗಿದ್ದು, ಚಿರತೆ ಕೊಂಡೊಯ್ದಿರಬೇಕು ಎಂದು ಸಂಶಯ ವ್ಯಕ್ತಪಡಿಸಲಾಗಿದೆ.
ಅ. ೯ರಂದು ರಾತ್ರಿ ಸುಮಾರು ೧೧:೪೦ರ ವೇಳೆಗೆ ಮನೆಯಂಗಳಕ್ಕೆ ಬಂದ ದೊಡ್ಡ ಗಾತ್ರದ ಚಿರತೆಯು ನಾಯಿಯನ್ನು ಕಚ್ಚಿ ಕೊಂಡೊಯ್ದಿದೆ. ಈ ದೃಶ್ಯ ಮನೆಯ ಸೀಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪೆರ್ಮುದೆ ಗುಡ್ಡಕಾಡು ಪ್ರದೇಶವಾಗಿದ್ದು, ಇಲ್ಲಿ ಕಾಡುಮೃಗಗಳ ಉಪಟಳ ಜಾಸ್ತಿಯಾಗಿದೆ. ಚಿರತೆ ದಾಳಿ ಬಳಿಕ ಸ್ಥಳೀಯರು ಭಯಭೀತರಾಗಿದ್ದಾರೆ
