ಗುರುಪುರ : ಸೇವಾ ಬ್ರಿಗೇಡ್(ರಿ) ಗುರುಪುರ ಇದರ ವತಿಯಿಂದ ೮ನೇ ವರ್ಷದ `ಆಟಿಡ್ ಕೆಸರ್‌ಡೊಂಜಿ ದಿನ’ ಗುರುಪುರ ಕುಕ್ಕುದಕಟ್ಟೆಯ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದ ಬಂಡಿ ಗದ್ದೆಯಲ್ಲಿ ಆ. ೯ರಂದು ಅದ್ದೂರಿಯಿಂದ ಜರುಗಿತು.

ದೀಪ ಬೆಳಗಿಸಿ, ತೆಂಗಿನ ಹಿಂಗಾರ ಅರಳಿಸಿ ಕಾರ್ಯಕ್ರಮ ಉದ್ಘಾಟಿಸಿದ ಮೂಳೂರು ಶ್ರೀ ಮುಂಡಿತ್ತಾಯ ದೈವಸ್ಥಾನದ ವೈದ್ಯನಾಥ ದರ್ಶನ ಪಾತ್ರಿ ಚಂದ್ರಹಾಸ ಕೌಡೂರು ಅವರು ಮಾತನಾಡಿ, ಆಟಿ ತಿಂಗಳಲ್ಲಿ ತುಳುನಾಡ ಸಂಸ್ಕೃತಿ ಬಿಂಬಿಸುವ ಹಲವು ಕಾರ್ಯಕ್ರಮಗಳು ಅಲ್ಲಲ್ಲಿ ನಡೆಯುತ್ತವೆ. ನಿರಂತರ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸೇವಾ ಬ್ರಿಗೇಡ್ ಕಳೆದ ೮ ವರ್ಷಗಳಿಂದ ಈ ಕಾರ್ಯಕ್ರಮ ಆಯೋಜಿಸುತ್ತಿದೆ. ಇವರಿಂದ ಇಲ್ಲಿ ನಿರಂತರ ಕೆರ‍್ಡೊಂಜಿ ದಿನ ಕಾರ್ಯಕ್ರಮ ನಡೆಯುವಂತಾಗಲಿ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಮಣಿಪಾಲ ಎಂಐಟಿಯಲ್ಲಿ ಹಿರಿಯ ಪ್ರೊಫೆಸರ್ ಆಗಿರುವ ಗುರುಪುರ ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ, ಗಡಿಕಾರ ಡಾ. ರವಿರಾಜ ಶೆಟ್ಟಿ ಕಾರಮೊಗರುಗುತ್ತು ಅವರು ಮಾತನಾಡಿ, ತುಳುನಾಡಿನಲ್ಲಿ ಕೃಷಿ ಮುಗಿದ ಬಳಿಕ ಕೃಷಿಯಲ್ಲಿ ತೊಡಗಿಸಿಕೊಂಡವರು ಕೆಸರು ಗದ್ದೆಗಳಲ್ಲಿ ಜಲಕ್ರೀಡೆ ನಡೆಸುತ್ತಿದ್ದರು. ಅದರ ಪಡಿಯಚ್ಚು ಆಟಿಡ್ ಕೆರ‍್ಡೊಂಜಿ ದಿನವಾಗಿದ್ದು, ಯುವ ಪೀಳಿಗೆಯಲ್ಲಿ ಆಟಿ ತಿಂಗಳು ನೆನಪಿನಲ್ಲಿ ಉಳಿಯುವಂತೆ ಮಾಡುವ ಪ್ರಯತ್ನವಾಗಿ ಇಂತಹ ಕಾರ್ಯಕ್ರಮಗಳಲ್ಲಿ ತುಳುನಾಡ ಜನಪದ ಕ್ರೀಡೆ, ತಿಂಡಿ-ತಿನಸುಗಳಿಗೆ ಮಹತ್ವ ನೀಡಲಾಗಿದೆ ಎಂದರು.

ಮಳೂರು ಶ್ರೀ ಮುಂಡಿತ್ತಾಯ ದೈವಸ್ಥಾನದ ಧೂಮಾವತಿ ದರ್ಶನ ಪಾತ್ರಿ ತನಿಯಪ್ಪ ಪೂಜಾರಿ ಶುಭ ಹಾರೈಸಿದರು. ಸೇವಾ ಬ್ರಿಗೇಡ್ ಗೌರವಾಧ್ಯಕ್ಷರಾದ ಪುರಂದರ ಮಲ್ಲಿ ಮತ್ತು ರಮಾನಂದ ಶೆಟ್ಟಿ, ಸೀತಾರಾಮ ಪೂಜಾರಿ, ರವೀಂದ್ರ ಶೆಟ್ಟಿ ಬೆಳ್ಳೂರುಗುತ್ತು ಹಾಗೂ ಸೇವಾ ಬ್ರಿಗೇಡ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸ್ವಾಗತಿಸಿದ ಜಯಪ್ರಕಾಶ್ ಭಂಡಾರಿ ವಂದಿಸಿದರು.

ಕೆಸರು ಗದ್ದೆಯಲ್ಲಿ ಮಕ್ಕಳು, ಮಹಿಳೆಯರು ಮತ್ತು ಪುರುಷರಿಗಾಗಿ ಸೋಗೆ ಎಳೆಯುವ ಸ್ಪರ್ಧೆ, ವಾಲಿಬಾಲ್, ನೀರಾಟ, ಓಟ ಮತ್ತಿತರ ಜನಪದ ಕ್ರೀಡೆ ಆಯೋಜಿಸಲಾಗಿದ್ದರೆ, ಮನಧ್ಯಾಹ್ನ ಆಟಿ ತಿಂಗಳ ವಿಶೇಷ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಸಮಾರೋಪ ಸಮಾರಂಭದಲ್ಲಿ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
