ಬಂಟ್ವಾಳ: ನಿಯಮಬಾಹಿರವಾಗಿ ಕಾರ್ಯಾಚರಿಸುತ್ತಿರುವ ಬ್ರಹ್ಮರಕೂಟ್ಟು ಟೋಲ್ ಗೇಟ್ ತೆರವಿನ ಕುರಿತು ಹಲವು ಹೇಳಿಕೆಗಳು ಬರುತ್ತಿದ್ದರೂ ಅಧಿಕೃತವಾಗಿ ಇನ್ನೂ ಯಾರೂ ಯಾವಾಗ ತೆರವಾಗುತ್ತದೆ ಎಂದು ಘೋಷಿಸಿಲ್ಲ. ಈ ನಡುವೆ ಟೋಲ್ ಬಳಿ ನವೀಕರಣ ಕೆಲಸ ಕಾರ್ಯಗಳೂ ನಡೆಯುತ್ತಿರುವುದು ಕಂಡು ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ರಾಜಕೀಯರಹಿತವಾಗಿ 24 ತಾಸುಗಳ ಹಗಲು-ರಾತ್ರಿ ಧರಣಿ ನವೆಂಬರ್ 17ರ ಬೆಳಗ್ಗೆ 9.30ರಿಂದ 18ರ ಬೆಳಗ್ಗೆ 9.30ರವರೆಗೆ ನಡೆಸಲಿದೆ ಎಂದುಟೋಲ್ ಗೇಟ್ ತೆರವು ಹೋರಾಟ ಸಮಿತಿಯ ಗೌರವಾಧ್ಯಕ್ಷರಾದ ಮಾಜಿ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.

ಶುಕ್ರವಾರ ಸಂಜೆ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು,ಜಿಲ್ಲೆಯ ಹೆದ್ದಾರಿಗಳಲ್ಲಿ ಬೇಕಾಬಿಟ್ಟಿ ಟೋಲ್ ಗೇಟ್ ಗಳನ್ನು ತೆರೆಯಬಾರದು. ಅಂತರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂಬ ಬೇಡಿಕೆಯನ್ನು ಮಂಡಿಸಲಾಗಿದೆ. ಟೋಲ್ ಅವಧಿ ಮುಗಿದರೂ ಅದು ಮುಂದುವರಿಯುತ್ತಿರುವುದು ಕಂಡುಬಂದಿದ್ದು, ಯಾರೊಬ್ಬ ಸಾರ್ವಜನಿಕರೂ ಅದು ಮುಂದುವರಿಯಬೇಕು ಎಂದು ಹೇಳುತ್ತಿಲ್ಲ. ಯಾರಿಗೂ ಬೇಡವಾದ ಟೋಲ್ ತೆರವುಗೊಳಿಸುವುದೇ ಸೂಕ್ತ ಎಂದು ರೈ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆದ್ದಾರಿ ಕಾಮಗಾರಿ ನಡೆಯುವ ವೇಳೆ ಹಲವು ಸಮಸ್ಯೆಗಳು ಉಂಟಾಗಿದ್ದು ಅವುಗಳನ್ನೆಲ್ಲಾ ಜನರು ಸಹಿಸಿಕೊಂಡಿದ್ದಾರೆ, ಇನ್ನು ಟೋಲ್ ಕಟ್ಟುವುದೂ ದುಬಾರಿಯಾಗುತ್ತಿದ್ದು ಅತ್ಯಂತ ಅವೈಜ್ಞಾನಿಕವೂ ಆಗಿದೆ ಎಂದು ಹೇಳಿದ ಅವರು ಈಗಾಗಲೇ ಎರಡು ಹೋರಾಟಗಳನ್ನು ನಡೆಸಲಾಗಿದ್ದು, ಮುಂದಿನ ಭಾಗವಾಗಿ ಟೋಲ್ ಮುಚ್ಚುವವರೆಗೂ ಹೋರಾಟ ಮುಂದುವರಿಯಲಿದೆ ಎಂದರು.
ಸಮಿತಿಯ ಸಂಚಾಲಕ ಬಿ.ಶೇಖರ್ ಮಾತನಾಡಿ, ನಾವು ಪ್ರಚಾರಕ್ಕೋಸ್ಕರ ಹೋರಾಟವನ್ನು ಮಾಡುತ್ತಿಲ್ಲ. ಟೋಲ್ ಮುಚ್ಚಲಾಗುವುದು ಎಂಬ ಮಾತುಗಳು ಬಂದಿವೆಯೇ ಹೊರತು, ಯಾವಾಗ ಮುಚ್ಚಲಾಗುತ್ತದೆ ಎಂಬ ನಿರ್ದಿಷ್ಟ ದಿನಾಂಕವನ್ನಾಗಲೀ ಗಡುವನ್ನು ಪ್ರಾಧಿಕಾರವಾಗಲಿ ಅಥವಾ ಸಂಬಂಧಪಟ್ಟವರಾಗಲೀ ಟೋಲ್ ತೆರವು ಕುರಿತು ಲಿಖಿತ ಆದೇಶವನ್ನು ಒದಗಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ಅಧ್ಯಕ್ಷರಾದ ಮೋಹನ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್,ಸದಸ್ಯ ಮಹಮ್ಮದ್ ನಂದಾವರ ಮತ್ತಿತರರು ಉಪಸ್ಥಿತರಿದ್ದರು.
