ಕೈಕಂಬ : ಬಜ್ಪೆ-ಬಿ. ಸಿ. ರೋಡ್ ರಾಜ್ಯ ಹೆದ್ದಾರಿಯ ಗುರುಪುರಕ್ಕೆ ಹತ್ತಿರದ ಪೊಳಲಿ ದ್ವಾರದಿಂದ ಅನತಿ ದೂರದಲ್ಲಿ ಕಡಿದಾದ ತಿರುವಿನಲ್ಲಿ ಆ. ೪ರಂದು ಬೆಳಿಗ್ಗೆ ಭಾರೀ ಪ್ರಮಾಣದಲ್ಲಿ ಗುಡ್ಡದ ಮಣ್ಣು ಹಾಗೂ ಮುರ ಬಂಡೆಕಲ್ಲು ಕುಸಿದು ಬಿದ್ದಿದ್ದು, ದುರಸ್ತಿ ಕಾರ್ಯ ನಡೆಯುತ್ತಿದ್ದ ವೇಳೆ ಈ ಮಾರ್ಗದ ಎಲ್ಲ ಬಸ್ ಸಂಚಾರ ರದ್ದುಗೊಳಿಸಲಾಗಿತ್ತು.

ರಸ್ತೆಗೆ ಹೊಂದಿಕೊಂಡಿರುವ ಎತ್ತರದ ಗುಡ್ಡದಿಂದ ಮಣ್ಣು ಮತ್ತು ಮುರ ಬಂಡೆಕಲ್ಲು ಕುಸಿದಿದೆ. ಮೇಲ್ಭಾಗದಲ್ಲಿ ಸಡಿಲ ಮಣ್ಣಿನಲ್ಲಿದ್ದ ಕೆಲವು ಬೃಹತ್ ಮರಗಳು ರಸ್ತೆಗೆ ಕುಸಿಯುವ ಹಂತ ತಲುಪಿವೆ. ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದ ಮೆಸ್ಕಾಂ ಸೆಕ್ಷನ್ ಅಧಿಕಾರಿ ದೇವಿಪ್ರಸಾದ್ ಅವರ ನೇತೃತ್ವದ ಮೆಸ್ಕಾಂ ಸಿಬ್ಬಂದಿಯು ವಿದ್ಯುತ್ ಕಂಬಗಳಿಗೆ ಅಪಾಯ ತಂದೊಡ್ಡಬಹುದಾಗಿದ್ದ ಕೆಲವು ಮರ ಕಡಿದು ಹಾಕಿದ್ದಾರೆ. ಈ ವೇಳೆ ಸುತ್ತಲ ಪ್ರದೇಶದಲ್ಲಿ ವಿದ್ಯುತ್ ಸ್ಥಗಿತಗೊಂಡಿತ್ತು. ದ್ವಾರದ ಬಳಿ ಬಜ್ಪೆ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ವಾಹನ ಸಂಚಾರ ಸ್ಥಗಿತಗೊಳಿಸಿದ್ದರು.

ಮಧ್ಯಾಹ್ನದ ಹೊತ್ತಿಗೆ ರಾಜ್ಯ ಹೆದ್ದಾರಿಯಲ್ಲಿ ಬಸ್ ಸಂಚಾರ ಪುನರ್ ಆರಂಭಗೊಂಡಿದೆ. ಈ ಘಟನೆ ಬೆಳಿಗ್ಗಿನ ಹೊತ್ತು ಸಂಭವಿಸಿದ್ದರಿಂದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರಿಗೆ ತೊಂದರೆ ಉಂಟಾಯಿತು. ಗುರುಪುರ ಕೈಕಂಬ ಹಾಗೂ ಪೊಳಲಿಗೆ ಬಸ್ ಸೇವೆ ಸೀಮಿತಗೊಳಿಸಲಾಗಿದ್ದು, ಮರ, ಮಣ್ಣು ತೆರವಿನ ಬಳಿಕ ವಾಹನ ಸಂಚಾರ ಸುಗಮಗೊಂಡಿದೆ.
