ಪೊಳಲಿ: ರಾಮಕೃಷ್ಣ ತಪೋವನದಲ್ಲಿ ಗುರುಪೂರ್ಣಿಮೆ ಆಚರಣೆ ಜು. 29ರಂದು ಬುಧವಾರ ಗುರುಪೂರ್ಣಿಮೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಹಾಗೂ ಆಧ್ಯಾತ್ಮಿಕ ಉತ್ಸಾಹದಿಂದ ಆಚರಿಸಲಾಯಿತು.

ಬೆಳಿಗ್ಗೆ 6 ರಿಂದ 10 ರವರೆಗೆ ವಿವಿಧ ಭಜನಾ ತಂಡಗಳಿಂದ ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು. ರಾಮಸಿಂಹ ಮಹಾರಾಜರು ಶ್ರೀ ರಾಮಕೃಷ್ಣ ಹೋಮವನ್ನು ನೆರವೇರಿಸಿದರು, ನಂತರ ವಿದ್ಯಾರ್ಥಿ ಹೋಮ ನಡೆಯಿತು. ಭಕ್ತರೆಲ್ಲರೂ ಸೇರಿ ಠಾಕೂರರ ಪಾದುಕೆಗಳಿಗೆ ಪುಷ್ವಾಂಜಲಿ ಅರ್ಪಿಸಿದರು. ಠಾಕೂರರಿಗೆ ಆರತಿ ಬೆಳಗಿದ ನಂತರ, ಶಾಲಾ ಮಕ್ಕಳು ಸೇರಿದಂತೆ ಎಲ್ಲಾ ಭಕ್ತರಿಗೂ ಅನ್ನಪ್ರಸಾದವನ್ನು ವಿತರಿಸಲಾಯಿತು.

ಗುರುಪೂರ್ಣಿಮೆಯು ಎಲ್ಲರಿಗೂ ಒಂದು ವಿಶೇಷ ಸಂದರ್ಭವಾಗಿದೆ ಮಾನವ ಜೀವನದ ಗುರಿಯಾದ ಶಾಶ್ವತ ಸತ್ಯದತ್ತ ಸರಿಯಾದ ಮಾರ್ಗವನ್ನು ತೋರಿಸಿಕೊಟ್ಟ ವಿವಿಧ ಸಂಪ್ರದಾಯಗಳ ಮಹಾನ್ ಗುರುಗಳಿಗೆ ಗೌರವ ಸಲ್ಲಿಸುವ ದಿನವಿದು ಎಂದು ರಾಮಕೃಷ್ಣತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಹೇಳಿದರು.

ಠಾಕೂರ್ ರಾಮಕೃಷ್ಣ ಪರಮಹಂಸರು ಎಲ್ಲರಿಗೂ ಅತ್ಯಂತ ಆದರ್ಶಪ್ರಾಯರಾದ ಗುರುಗಳು; ಅವರ ಸಂದೇಶಗಳು ಮತ್ತು ಬೋಧನೆಗಳು ಧರ್ಮ, ಜಾತಿ, ಪಂಥ, ಲಿಂಗ, ಪ್ರದೇಶ ಮುಂತಾದ ಭೇದಗಳಿಲ್ಲದೆ ಎಲ್ಲಾ ಕಾಲಕ್ಕೂ ಮತ್ತು ಎಲ್ಲರಿಗೂ ಸಾರ್ವತ್ರಿಕವಾಗಿ ಸ್ವೀಕಾರಾರ್ಹವಾಗಿವೆ.

ಠಾಕೂರ್ ಶ್ರೀ ರಾಮಕೃಷ್ಣರಲ್ಲಿ ಗುರುಶಕ್ತಿಯು ಅತ್ಯುನ್ನತ ಮಟ್ಟದಲ್ಲಿ ಅಭಿವ್ಯಕ್ತಗೊಂಡಿತ್ತು. ‘ಗುರು’ ಎಂಬ ಪದವು ಶ್ರೀ ಠಾಕೂರರ ವಿಷಯದಲ್ಲಿ ಅದರ ಸಂಪೂರ್ಣ ಅರ್ಥದಲ್ಲಿ ಅನ್ವಯಿಸುತ್ತದೆ. ತಾನು ಗುರು ಎಂಬ ಪ್ರಜ್ಞೆ ಅವರಿಗಿರಲಿಲ್ಲವಾದರೂ, ಅವರು ಆಡಿದ ಮಾತುಗಳು ಮತ್ತು ಮಾಡಿದ ಕಾರ್ಯಗಳು ಒಬ್ಬ ಗುರು ತನ್ನ ಶಿಷ್ಯರಿಗೆ ಮಾಡುವ ಕೆಲಸಗಳೇ ಆಗಿದ್ದವು – ಅಂದರೆ, ಅವರನ್ನು ಆಧ್ಯಾತ್ಮಿಕವಾಗಿ ಜಾಗೃತಗೊಳಿಸುವುದು ಮತ್ತು ಬಂಧನದಿಂದ ಮುಕ್ತಗೊಳಿಸುವುದು ಎಂಬುವುದಾಗಿದೆ ಎಂದರು
