ಮುಂಬಯಿ: ರಾಣಿ ಅಬ್ಬಕ್ಕ ತುಳು ಮ್ಯೂಸಿಯಂ ಮತ್ತು ಅಧ್ಯಯನ ಕೇಂದ್ರ, ಸಂಚಯಗಿರಿ (ಬಿ.ಸಿ.ರೋಡ್) ಹಾಗೂ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ (ಇಎಫ್‌ಎ) ಸಹಯೋಗದಲ್ಲಿ ತುಳುನಾಡುನಲ್ಲಿ ಮರೆಯಾಗುತ್ತಿರುವ ಆಹಾರ ಸಂಸ್ಕೃತಿ ಎಂಬ ವಿಷಯದ ಕುರಿತು ವಿಶೇಷ ವಿಚಾರ ಸಂಕಿರಣವು ಇದೇ ಆಗಸ್ಟ್ 09ರ (ಭಾನುವಾರ) ಬೆಳಿಗ್ಗೆ 9:30ರಿಂದ ಸಂಜೆ 5:30ರ ವರೆಗೆ ರಾಣಿ ಅಬ್ಬಕ್ಕ ತುಳು ಮ್ಯೂಸಿಯಂ ಮತ್ತು ಅಧ್ಯಯನ ಕೇಂದ್ರದಲ್ಲಿ ನಡೆಯಲಿದೆ.
ಈ ಯೋಜನೆಗೆ ಟಾಟಾ ಟ್ರಸ್ಟ್‌ಸ್‌ನ ಸಹಯೋಗದಲ್ಲಿ ನಡೆಯಲಿದೆ ರಾಣಿ ಅಬ್ಬಕ್ಕ ತುಳು ಮ್ಯೂಸಿಯಂ ಮತ್ತು ಅಧ್ಯಯನ ಕೇಂದ್ರದ ಸಂಸ್ಥಾಪಕರು ಮತ್ತು ಮುಖ್ಯ ನವೀನ್

ಆಹಾರ ಸಂಸ್ಕೃತಿಯ ಆಳವಾದ ಅಧ್ಯಯನ:
ಆಹಾರವು ಪ್ರತಿಯೊಬ್ಬ ಜೀವಿಯ ಬದುಕಿನ ಅವಿಭಾಜ್ಯ ಅಂಗವಾಗಿದೆ. ಮಾನವ ವಿಕಾಸದ ಇತಿಹಾಸವನ್ನು ಅಧ್ಯಯನ ಮಾಡಿದ ವಿಜ್ಞಾನಿಗಳ ಪ್ರಕಾರ, ಆಹಾರದ ಅನ್ವೇಷಣೆಯೇ ಮಾನವನನ್ನು ಬೇಟೆಗಾರ ಜೀವನದಿಂದ ಕೃಷಿ ಆಧಾರಿತ ನೆಲೆಸಿದ ಸಮಾಜವಾಗಿ ರೂಪುಗೊಳ್ಳಲು ಕಾರಣವಾಯಿತು. ನಾಗರಿಕತೆಗಳ ಬೆಳವಣಿಗೆಯೊಂದಿಗೆ ಆಹಾರ ಉತ್ಪಾದನೆ, ವ್ಯಾಪಾರ ಮತ್ತು ವಿವಿಧ ಸಂಸ್ಕೃತಿಗಳ ನಡುವಿನ ಸಂಪರ್ಕ ಹೆಚ್ಚಾಗಿ, ವಿಭಿನ್ನ ಆಹಾರ ಪದ್ಧತಿಗಳ ವಿನಿಮಯಕ್ಕೂ ದಾರಿಯಾಯಿತು. ಭಾರತವು ವೈವಿಧ್ಯಮಯ ಆಹಾರ ಸಂಸ್ಕೃತಿಗಳ ನಾಡಾಗಿದ್ದು, ಪ್ರತಿಯೊಂದು ಪ್ರದೇಶವೂ ತನ್ನದೇ ಆದ ವಿಶಿಷ್ಟ ಪಾಕಪದ್ಧತಿಯನ್ನು ಹೊಂದಿದೆ. ಪಶ್ಚಿಮ ಘಟ್ಟಗಳು, ಅರಬ್ಬಿ ಸಮುದ್ರ, ಆರು ತಿಂಗಳ ಮಳೆಗಾಲ ಹಾಗೂ ಅನೇಕ ನದಿಗಳ ಆಶೀರ್ವಾದ ಪಡೆದ ತುಳುನಾಡಿನಲ್ಲಿ ವರ್ಷಕ್ಕೆ ಮೂರು ಬಾರಿ ಭತ್ತ ಬೆಳೆಯುವುದರಿಂದ ಅಕ್ಕಿಯೇ ಪ್ರಮುಖ ಆಹಾರವಾಗಿದೆ.
ತುಳುನಾಡಿನ ಆಹಾರ ವೈವಿಧ್ಯ
ಕಾಲಕ್ರಮೇಣ ಈ ಪ್ರದೇಶಕ್ಕೆ ವಲಸೆ ಬಂದ ವಿವಿಧ ಸಮುದಾಯಗಳು, ಪೋರ್ಚುಗೀಸರು, ಬ್ರಿಟಿಷರ ಪ್ರಭಾವ, ಭೂಸುಧಾರಣಾ ಕ್ರಮಗಳು ಹಾಗೂ ಆಧುನಿಕ ಬೇಕರಿಗಳು, ಹೋಟೆಲ್ಗಳು ಮತ್ತು ಪ್ಯಾಕೇಜ್ ಆಹಾರ ಸಂಸ್ಕೃತಿಯ ಬೆಳವಣಿಗೆಯಿಂದ ತುಳುನಾಡಿನ ಸಾಂಪ್ರದಾಯಿಕ ಆಹಾರ ಪದ್ಧತಿಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬಂದಿವೆ.

ತುಳು ತಿಂಗಳಾದ ಕರ್ಕಾಟಕ (ಆಟಿ) ಅವಧಿಯಲ್ಲಿ ಎದುರಾಗುತ್ತಿದ್ದ ಆಹಾರದ ಕೊರತೆಯನ್ನು ಎದುರಿಸಲು ಬೇಸಿಗೆಯಲ್ಲಿಯೇ ಹಣ್ಣು-ತರಕಾರಿಗಳನ್ನು ಸಂರಕ್ಷಿಸುವುದು, ಸ್ಥಳೀಯ ಸೊಪ್ಪು ಹಾಗೂ ಕಾಡು ಸಸ್ಯಗಳನ್ನು ಬಳಸಿಕೊಂಡು ಪೌಷ್ಟಿಕ ಆಹಾರ ತಯಾರಿಸುವ ವಿಶಿಷ್ಟ ಸಂಪ್ರದಾಯವನ್ನು ತುಳುವರು ಬೆಳೆಸಿಕೊಂಡಿದ್ದಾರೆ.
ಈ ವಿಚಾರ ಸಂಕಿರಣವು ಕೇವಲ ಆಹಾರೋತ್ಸವವಲ್ಲ; ಆಹಾರದ ಇತಿಹಾಸ, ಪರಿಸರ, ಸಂಸ್ಕೃತಿ, ಸಾಂಪ್ರದಾಯಿಕ ಅಡುಗೆ ಪಾತ್ರೆಗಳು ಹಾಗೂ ಆರೋಗ್ಯದ ಜ್ಞಾನವನ್ನು ಸಮಗ್ರವಾಗಿ ಪರಿಚಯಿಸುವ ಪ್ರಯತ್ನವಾಗಿದೆ.
ಸಂಶೋಧನಾ ಯೋಜನೆಯ ಭಾಗ
ಈ ಕಾರ್ಯಕ್ರಮವು ಅರವಿಂದ್ ಕೆ. ಅವರ ಪರಿಕಲ್ಪನೆಯಡಿ, ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ (ಇಎಫ್‌ಎ) ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ಆರ್ಕೈವ್ಸ್ ಮತ್ತು ಮ್ಯೂಸಿಯಂಸ್ ಯೋಜನೆಯ ಭಾಗವಾಗಿದೆ. ರಾಣಿ ಅಬ್ಬಕ್ಕ ತುಳು ಮ್ಯೂಸಿಯಂನಲ್ಲಿ ಸಂರಕ್ಷಿಸಲಾಗಿರುವ ದೈನಂದಿನ ಬಳಕೆಯ ವಸ್ತುಗಳ ಮೂಲಕ ತುಳುವರ ಕೃಷಿ ಪದ್ಧತಿ, ಆಹಾರ ಸಂಸ್ಕೃತಿ ಹಾಗೂ ಸಾಂಪ್ರದಾಯಿಕ ಅಡುಗೆ ಪಾತ್ರೆಗಳ ಮಹತ್ವವನ್ನು ದಾಖಲಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.
ಕಳೆದ ಮೂರು ದಶಕಗಳಿಂದ ರಾಣಿ ಅಬ್ಬಕ್ಕ ತುಳು ಮ್ಯೂಸಿಯಂ ಮತ್ತು ಅಧ್ಯಯನ ಕೇಂದ್ರವು ತುಳುನಾಡಿನ ಇತಿಹಾಸ, ಸಂಸ್ಕೃತಿ ಮತ್ತು ಜೀವನಶೈಲಿಯನ್ನು ದೈನಂದಿನ ಬಳಕೆಯ ವಸ್ತುಗಳ ಮೂಲಕ ದಾಖಲಿಸಿ ಸಂರಕ್ಷಿಸುವ ಕಾರ್ಯವನ್ನು ನಿರಂತರವಾಗಿ ನಡೆಸುತ್ತಿದ್ದು, ಈ ಸಂಸ್ಥೆಯ ಸ್ಥಾಪಕರಾದ ಡಾ. ತುಕರಾಮ ಪೂಜಾರಿ ಅವರ ಕನಸಿನ ಕೂಸಾಗಿದೆ.
ಉದ್ಘಾಟನಾ ಸಮಾರಂಭ
ಬೆಳಿಗ್ಗೆ 09:30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್‌ಸ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಮೆನಕಾ ರೋಡ್ರಿಗಸ್ ಹಾಗೂ ರಾಣಿ ಅಬ್ಬಕ್ಕ ತುಳು ಮ್ಯೂಸಿಯಂ ಮತ್ತು ಅಧ್ಯಯನ ಕೇಂದ್ರದ ಸಂಸ್ಥಾಪಕ ಡಾ| ತುಕರಾಮ ಪೂಜಾರಿ ಉಪಸ್ಥಿತರಿದ್ದು ಉದ್ಘಾಟನಾ ಕಾರ್ಯಕ್ರಮ ನೆರವೇರಿಸಲಿದ್ದಾರೆ. ಅಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕರಾದ ಪ್ರೊ| ಬಿ.ಶಿವರಾಮ ಶೆಟ್ಟಿ ಅವರು ಮುಖ್ಯ ಉಪನ್ಯಾಸ ನೀಡಲಿದ್ದಾರೆ.
ಮೊದಲ ಅಧಿವೇಶನ ತುಳುವ ಸಮಾಜ ಮತ್ತು ಆಹಾರ ಸಂಸ್ಕೃತಿ
ಬೆಳಿಗ್ಗೆ ೧೧ ಗಂಟೆಗೆ ನಡೆಯುವ ಮೊದಲ ಅಧಿವೇಶನದಲ್ಲಿ ತುಳುನಾಡಿನ ಆಹಾರ ಸಂಸ್ಕೃತಿಯ ವೈಶಿಷ್ಟ್ಯ, ಸ್ಥಳೀಯ ಆಹಾರ ಸಂಗ್ರಹಣೆ, ಕೃಷಿ ಹಾಗೂ ಸಂರಕ್ಷಣಾ ಪದ್ಧತಿಗಳ ಕುರಿತು ಚರ್ಚೆ ನಡೆಯಲಿದೆ.
ಈ ಅಧಿವೇಶನದಲ್ಲಿ ಕಾಸರಗೋಡು ಗಡಿನಾಡಿನ ಲೇಖಕಿ ಹಾಗೂ ಸಂಶೋಧಕಿ ರಾಜಶ್ರೀ ಟಿ.ರೈ ಪೆರ್ಲ ಅವರು ತುಳುವರ ಆಹಾರ ಸಂಪ್ರದಾಯದ ಕುರಿತು ಮಾತನಾಡಲಿದ್ದು, ಯೂಟ್ಯೂಬ್ನಲ್ಲಿ ಜನಪ್ರಿಯ ಅಡುಗೆ ವಾಹಿನಿ ನಡೆಸುತ್ತಿರುವ ಆಹಾರ ತಜ್ಞ ಸುದರ್ಶನ ಭಟ್ ಬೇಡ್ರಾಡಿ ಅವರು ಸಾಂಪ್ರದಾಯಿಕ ಅಡುಗೆ ವಿಧಾನಗಳು ಹಾಗೂ ಪ್ರಾದೇಶಿಕ ಪಾಕವೈವಿಧ್ಯವನ್ನು ಪರಿಚಯಿಸಲಿದ್ದಾರೆ.
