ಜಾತ್ರೆ ಕಳೆದು ತೇರು ಬಿಚ್ಚುವ ಸಮಯ
ಸುದ್ದಿ9ಕೈಕಂಬ: ಜಾತ್ರೆಯ ಸಮಯ ರಥೋತ್ಸವಕ್ಕೆ ಕಳೆ ನೀಡುವುದು ಸಿಂಗರಗೊಂಡ ತೇರು. ವಿವಿಧ ಬಣ್ಣದ ಪತಾಕೆಗಳಿಂದ ಕಂಗೊಳಿಸುವ ತೇರು ಕಟ್ಟುವುದು ಮತ್ತು ಬಿಚ್ಚುವುದೂ ಒಂದು ಕಲೆ. ತೇರ ಸಿಂಗಾರ ನೋಡಲೆಂದೇ ಜನರು ಜಾತ್ರೆಗೆ ರಂಗು ತುಂಬುತ್ತಾರೆ. ತೇರಿನ ಬಣ್ಣದ ಅಲಂಕಾರ ಕಂಡು ಭಕ್ತಿ-ಭಾವದಿಂದ ಪುನೀತರಾಗುತ್ತಾರೆ.
ಪೊಳಲಿ ರಾಜರಾಜೇಶ್ವರಿ ದೇವಿಯ ಚೆಂಡು ಹಾಗೂ ತೇರು ನಾಲ್ಕೂರಲ್ಲಿ ಪ್ರಸಿದ್ಧ. ಬರೋಬ್ಬರಿ ಒಂದು ತಿಂಗಳ ಕಾಲ ನಡೆಯುವ ಜಾತ್ರೆಯ ಅಂತಿಮ ದಿನಗಳು ಮುಗಿದ ತರುವಾಯ ಕಟ್ಟಿರುವ ತೇರನ್ನು ಬಿಚ್ಚಿರುವ ಕೆಲಸ ನಡೆಯುತ್ತದೆ. ತೇರು ಕಟ್ಟುವ ಕೆಲಸಗಾರರು ತಮ್ಮ ಕೆಲಸಕ್ಕೆ ಹಾಜರಾಗುತ್ತಾರೆ. ದೇವಳದ ಎದುರಿನ ಬಯಲಿನಲ್ಲಿ ತೇರು ಬಿಚ್ಚುವ ಕಾಯಕ ಪ್ರಾರಂಭಗೊಳ್ಳುತ್ತದೆ.
ಪತಾಕೆಗಳನ್ನು ಎಸೆಯುವಂತಿಲ್ಲ:
ತೇರು ಕಟ್ಟುವಾಗ ಬಳಸುವ ಪತಾಕೆಗಳು, ಬಿದಿರಿನ ಕೋಲು ಹಾಗೂ ಅದಕ್ಕೆ ಬಳಸುವ ಹುರಿಹಗ್ಗವನ್ನು ಎಸೆಯುವಂತಿಲ್ಲ. ತೇರಿನ ಸಾಮಾಗ್ರಿಗಳನ್ನು ಮುಂದಿನ ಬಾರಿಗೆ ಜೋಪಾನವಾಗಿ ದಾಸ್ತಾನಿರಿಸಬೇಕಾಗುತ್ತದೆ. ಮತ್ತೆ ಮುಂದಿನ ಬಾರಿ ತೇರು ಕಟ್ಟುವಾಗ ಇದನ್ನು ಬಳಸಲಾಗುತ್ತದೆ. ತೇರು ಕಟ್ಟುವ ಮತ್ತು ಬಿಚ್ಚುವ ಕಾಮರ್ಿಕರಿಗೇ ಮತ್ತೆ ಮುಂದಿನ ಬಾರಿ ತೇರು ಕಟ್ಟುವ ಹೊಣೆಗಾರಿಕೆಯೂ ಇರುತ್ತದೆ.
ಪೊಳಲಿ ಜಾತ್ರೆ ತಿಂಗಳ ಕಾಲ ಸಾಂಗವಾಗಿ ನೆರವೇರುವುದರಿಂದ 15 ದಿನಗಳ ನಂತರ ತೇರು ಕಟ್ಟಲು ಶುರುಮಾಡುತ್ತಾರೆ. ಜಾತ್ರೆಯ ಕೊನೆಯ ಚೆಂಡಿನ ಮೊದಲೇ ತೇರು ಸಿಂಗರಗೊಂಡು ಸಿದ್ಧವಾಗಿರುತ್ತದೆ. ಪ್ರಾರಂಭದ ಚೆಂಡಿನಿಂದ ಕೊನೆಯ ಚೆಂಡಿನವರೆಗೆ ಸಣ್ಣ-ಮಧ್ಯಮ-ದೊಡ್ಡ ಗಾತ್ರದ ಹತ್ತಾರು ತೇರುಗಳನ್ನು ಎಳೆಯುವುದು ಇಲ್ಲಿನ ಪದ್ಧತಿಯಾಗಿ ಬೆಳೆದು ನಿಂತಿದೆ.
ಪೊಳಲಿ ರಾಜರಾಜೇಶ್ವರಿ ದೇವಳದ ಚೆಂಡು ಎಷ್ಟರಮಟ್ಟಿಗೆ ಪ್ರಸಿದ್ಧಿ ಪಡೆದಿದೆಯೇ ಅಷ್ಟೇ ಪ್ರಸಿದ್ಧಿ ಇಲ್ಲಿನ ತೇರು ಕೂಡಾ. ಜಾತ್ರೆಯ ಸಂದರ್ಭದಲ್ಲಿ ಜನಮನ ಸೆಳೆಯುವ ಇಲ್ಲಿನ ತೇರು ಬಿಚ್ಚಿದ ಬಳಿಕ ದೇವಳದ ಚೆಂಡಿನ ಗದ್ದೆ ಖಾಲಿಯಾಗುತ್ತದೆ. ಜನರು ಮತ್ತೆ ಮುಂದಿನ ಬಾರಿ ತೇರಿನ ದಾರಿ ಕಾಯುತ್ತಾರೆ.