ಗ್ರಾ.ಪಂ.ನಾಗರಿಕರ ಕೈಗೆ ಸುಲಭವಾಗಿ ಸಿಗುವ ಸರಕಾರ : ಶಾಸಕ ರಾಜೇಶ್ ನಾಯ್ಕ್ ಅಮ್ಟಾಡಿ ಗ್ರಾ.ಪಂ. 13 ಲಕ್ಷ ವೆಚ್ಚದ ಕಟ್ಟಡ ಉದ್ಘಾಟನೆ
ಬಂಟ್ವಾಳ:ಗ್ರಾಮೀಣ ಪ್ರದೇಶದಲ್ಲಿ ಅರ್ಹ ಫಲಾನುಭವಿಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರ ವಿವಿಧ ಯೋಜನೆಗಳನ್ನು ತಲುಪಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತಿರುವ ಗ್ರಾಮ ಪಂಚಾಯಿತಿಗಳು ನಾಗರಿಕರಿಗೆ ಸುಲಭವಾಗಿ ಕೈಗೆ ಸಿಗುವ ಸರಕಾರವಾಗಿದೆ ಎಂದು ಶಾಸಕ ರಾಜೇಶ ನಾಯ್ಕ್ ಉಳಿಪಾಡಿ ಹೇಳಿದ್ದಾರೆ.

ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮ ಪಂಚಾಯಿತಿನಲ್ಲಿ ಉದ್ಯೋಗ ಖಾತರಿ ಯೋಜನೆ ಮತ್ತು ಪಂಚಾಯಿತಿ ನಿಧಿಯಡಿ ರೂ 13 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ‘ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ’ ( ಎನ್ ಆರ್ ಎಲ್ ಎಂ) ಕಟ್ಟಡವನ್ನು ಮಂಗಳವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಜಯ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ ಸೀಮಿತ ಅನುದಾನದಲ್ಲಿ ಗುಣಮಟ್ಟದ ಕಟ್ಟಡ ರಚನೆಯಾಗಿದೆ’ ಎಂದರು. ಬೂಡ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ, ‘ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ತಾಯಂದಿರ ಪಾತ್ರ ಹಿರಿದು’ ಎಂದರು.
ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ.ಪೂಜಾರಿ, ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ಮಲ್ಲಿಕಾ ವಿ.ಶೆಟ್ಟಿ, ತಾಲೂಕು ಎನ್ ಆರ್ ಎಲ್ ಎಂ ವ್ಯವಸ್ಥಾಪಕ ಪ್ರದೀಪ್ ಕಾಮತ್, ಪಿಡಿಒ ಗೋಕುಲ್ ದಾಸ್ ಭಕ್ತ ಉಪಸ್ಥಿತರಿದ್ದರು. ಇದೇ ವೇಳೆ 27 ಮಂದಿ ಅರ್ಹ ಫಲಾನುಭವಿಗಳಿಗೆ ಚೆಕ್ ಹಸ್ತಾಂತರಿಸಲಾಯಿತು.
ಗ್ರಾ.ಪಂ.ಉಪಾಧ್ಯಕ್ಷೆ ಮೋಹಿನಿ, ಮಾಜಿ ಅಧ್ಯಕ್ಷ ಹರೀಶ ಶೆಟ್ಟಿ ಪಡು, ಗುತ್ತಿಗೆದಾರ ಕ್ಸೇವಿಯರ್ ಡಿಸೋಜ ಮತ್ತಿತರರು ಇದ್ದರು.
ಒಕ್ಕೂಟ ಮುಖ್ಯ ಬರಹಗಾರರಾದ ವನಿತಾ ಗಣೇಶ್ ಸ್ವಾಗತಿಸಿ, ಗ್ರಾ.ಪಂ.ಕಾರ್ಯದರ್ಶಿ ಕೆ.ನಿತ್ಯಾನಂದ ವಂದಿಸಿದರು. ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ ಕಾರ್ಯಕ್ರಮ ನಿರೂಪಿಸಿದರು