ಅನಧಿಕೃತ “ನಾಯಿ ಬಿಸ್ಕಿಟ್ ” ತಯಾರಿ ಘಟಕ್ಕೆ ಬೀಗ
ಬಂಟ್ವಾಳ: ತಾಲೂಕಿನ ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಡ್ಮಣ್ಣ್ ಪೈಕ ಎಂಬಲ್ಲಿ ಅನಧಿಕೃತ ಶೆಡ್ ವೊಂದರಲ್ಲಿ ನಡೆಯುತ್ತಿದ್ದ “ನಾಯಿ ಬಿಸ್ಕಿಟ್ ” ತಯಾರಿ ಘಟಕದಿಂದ ವಿಪರೀತ ದುರ್ವಾಸನೆ ಬೀರಿ ಪರಿಸರದ ಸ್ವಾಸ್ಥ್ಯ ಕೆಡಿಸುತ್ತಿದ್ದ ಹಿನ್ನಲೆಯಲ್ಲಿ ರಾತ್ರಿ ಸ್ಥಳೀಯರು ನಡೆಸಿದ ಪ್ರತಿಭಟನೆಗೆ ಮಣಿದ ಬಂಟ್ವಾಳ ತಾ.ಪಂ.ಅಧಿಕಾರಿಗಳು ಮಂಗಳವಾರ ಬೀಗ ಜಡಿದಿದ್ದಾರೆ.

ಕೊಡ್ಮಣ್ಣು ಪೈಕ ಎಂಬಲ್ಲಿರುವ ಶಾಲೆ ಮತ್ತು ವಸತಿ ಪರಿಸರದಲ್ಲಿ ಸಂಸ್ಥೆಯೊಂದು ನಾಯಿಗಳ ಆಹಾರವಾದ ಬಿಸ್ಕಿತ್ ತಯಾರಿಸುವ ಘಟಕವೊಂದು ಹಲವು ಸಮಯದಿಂದ ಕಾರ್ಯಾಚರಿಸುತ್ತಿದ್ದು,ಶೆಡ್ ನಂತಿರುವ ಈ ಘಟಕಕ್ಕೆ ಪುದು ಗ್ರಾಮ ಪಂಚಾಯಿತ್ ಈ ಹಿಂದೆ ಪರವಾನಿಗೆ ನೀಡಿತ್ತು ಎನ್ನಲಾಗಿದೆ.

ಘಟಕದ ಪರವಾನಿಗೆಯ ಅವಧಿ ಪೂರ್ಣಗೊಂಡು ವರ್ಷವೇ ಕಳೆದಿದ್ದು,ಇದೀಗ ಅನಧಿಕೃತವಾಗಿ ನಾಯಿ ಬಿಸ್ಕಿತ್ ತಯಾರಿ ನಡೆಯುತ್ತಿದೆಯೆನ್ನಲಾಗಿದೆ.

ಇಲ್ಲಿ ಬಿಸ್ಕಿತ್ ತಯಾರಿಗೆ ಕೋಳಿ, ಗೋವಿನ ಸಹಿತ ವಿವಿಧ ಪ್ರಾಣಿಗಳ ತ್ಯಾಜ್ಯಗಳನ್ನು ಮಿಶ್ರಣಗೊಳಿಸಲಾಗುತ್ತಿದ್ದು,ರಾತೋರಾತ್ರಿ ಈ ತ್ಯಾಜ್ಯಗಳನ್ನು ಘಟಕದಲ್ಲಿ ತಂದು ಶೇಖರಿಸಲಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ರೀತಿ ತಂದು ಶೇಖರಿಸಲಾಗುತ್ತಿರುವ ತ್ಯಾಜ್ಯದ ರ್ದುವಾಸನೆ ಇಡೀ ಪರಿಸರವನ್ನು ಅವರಿಸುವುದರಿಂದ ಸ್ಥಳೀಯರು ಮೂಗುಮುಚ್ಚಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತಲ್ಲದೆ ಜನರ ಆರೋಗ್ಯದ ಮೇಲು ದುಪ್ಪರಿಣಾಮ ಬೀರುತ್ತಿತ್ತು ಎಂದು ದೂರಲಾಗಿದೆ.
ಇದಕ್ಕೆ ಅನುಮತಿ ನೀಡುವ ಸಂದರ್ಭದಲ್ಲಿ
ಗ್ರಾ.ಪಂ.ಕೂಡ ಇದರ ಬಗ್ಗೆ ಪರಾಮರ್ಶಿಸದಿರುವುದು, ಪರವಾನಿಗೆಯ ಅವಧಿ ಕಳೆದರೂ ಕಳೆದೊಂದು ವರ್ಷದಿಂದ ಅನಧಿಕೃತವಾಗಿ ಈ ಘಟಕ ಮುಂದುವರಿದಿರುವುದು ಹಾಗೂ ಮಾಂಸದ ತ್ಯಾಜ್ಯಗಳನ್ನು ತಂದು ಶೇಖರಿಸುವ ಮೂಲಕ ಗ್ರಾಮಸ್ಥರ ಆರೋಗ್ಯದ ಮೇಲೆ ಚೆಲ್ಲಾಟವಾಡುವ ಗ್ರಾ.ಪಂ.ನ ಧೋರಣೆಯ ಬಗ್ಗೆ ಆಕ್ರೋಶಿತರಾದ ಸ್ಥಳೀಯರು ಸೋಮವಾರ ರಾತ್ರಿ ಘಟಕದ ಮುಂದೆ ಹಠಾತ್ ಪ್ರತಿಭಟನೆ ನಡೆಸಿದ್ದಾರೆ.
ಈ ಬಗ್ಗೆ ಸುದ್ದಿ ತಿಳಿದ ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಇಲ್ಲಿ ತ್ಯಾಜ್ಯದಿಂದ ಬೀರುವ ದುರ್ವಾಸನೆಯ ಬಗ್ಗೆ ತಾ.ಪಂ.ಇಒ ಹಾಗೂ ಗ್ರಾ.ಪಂ.ಗೆ ವಿವರಿಸಿದರಲ್ಲದೆ ಘಟಕವನ್ನು ಮುಚ್ಚುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವ ಭರವಸೆಯ ಹಿನ್ನಲೆಯಲ್ಲಿ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ವಾಪಾಸ್ ತೆಗೆದುಕೊಂಡರು.
ಅಧಿಕಾರಿಗಳ ದಂಡು ಸ್ಥಳಕ್ಕೆ ದೌಡು:
ಮಂಗಳವಾರ ಬೆಳಿಗ್ಗೆ ಬಂಟ್ವಾಳ ತಾ.ಪಂ.ಕಾರ್ಯ ನಿರ್ವಾಹಣಾಧಿಕಾರಿ,ಆರೋಗ್ಯ ಅಧಿಕಾರಿಗಳು, ಗ್ರಾಮ ಪಂಚಾಯತ್ ಪಿ.ಡಿ.ಓ, ಗ್ರಾ.ಪಂ.ಅಧ್ಯಕ್ಷರು,ಉಪಾಧ್ಯಕ್ಷರು
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು, ಆಶಾ ಕಾರ್ಯಕರ್ತೆಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಈ ಸಂದರ್ಭ ಸ್ಥಳದಲ್ಲಿ ಬರುತ್ತಿದ್ದ ಅಸಹ್ಯಕರವಾದ ರ್ದುವಾಸನೆಯಿಂದ ಕಂಗೆಟ್ಟ ತಾ. ಪಂ. ಕಾರ್ಯನಿರ್ವಹಣಾಧಿಕಾರಿಯವರು ಪರವಾನಿಗೆ ಅವಧಿ ಬಳಿಕವು ಅನಧಿಕೃತವಾಗಿ ಘಟಕವನ್ನು ಮುಂದುವರಿಸಿದ ಸಂಸ್ಥೆಯ ಮಾಲಕರನ್ನು ಹಾಗೂ ಕ್ರಮಕೈಗೊಳ್ಳದ ಗ್ರಾ.ಪಂ.ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡರಲ್ಲದೆ ತಕ್ಷಣ ಘಟಕ ವನ್ನು ಮುಚ್ಚುವಂತೆ ಗ್ರಾ.ಪಂ.ಗೆ ಆದೇಶಿಸಿದರು.
ಅದರಂತೆ ಅನಧಿಕೃತ ನಾಯಿ ಬಿಸ್ಕಿತ್ ತಯಾರಿ ಘಟಕಕ್ಕೆ ಬೀಗ ಜಡಿಯಲಾಗಿದೆ.