ಕರ್ನಾಟಕದಂತೆ ಕೇಂದ್ರ ಸರ್ಕಾರದ ಗ್ಯಾರಂಟಿ ಯೋಜನೆಗಳು ಇಂಡಿಯಾ ಕೂಟಕ್ಕೆ ವರದಾನ; ರಮಾನಾಥ ರೈ
ಮುಂಬಯಿ: ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ ಮುಂಬಯಿ-ಕರ್ನಾಟಕದ ಜನತೆಯ ಜನ್ಮಭೂಮಿ-ಕರ್ಮಭೂಮಿಯ ರೈಲು, ವಿಮಾನ, ಬಸ್ ಪ್ರಯಾಣದ ತೊಂದರೆ ನಿಭಾಯಿಸಲಿದೆ. ಕರ್ನಾಟಕದಂತೆ ಕೇಂದ್ರ ಸರ್ಕಾರದ ಗ್ಯಾರಂಟಿ ಯೋಜನೆಗಳು ಇಂಡಿಯಾ ಕೂಟಕ್ಕೆ ವರದಾನವಾಗಲಿದೆ ಎಂದು ಕರ್ನಾಟಕದ ಸರ್ಕಾರದ ಮಾಜಿ ಸಚಿವ ಬಿ.ರಮಾನಾಥ ರೈ ತಿಳಿಸಿದರು.
ಬುಧವಾರ ಅಂಧೇರಿ ಪೂರ್ವದ ಚಕಲಾ ಇಲ್ಲಿನ ಹೊಟೇಲ್ ಸಾಯಿ ಪ್ಯಾಲೇಸ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳಲ್ಲಿ ಎನ್‌ಡಿಎ ಸರ್ಕಾರವು ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಲು ವಿಫಲವಾಗಿದೆ. ಜನಪರ ಸೇವೆಯ ಬದಲಾಗಿ ಜನವಿರೋಧಿ ಧೋರಣೆಗಳು ಮತ್ತು ಸರ್ಕಾರಿ ಸೊತ್ತನ್ನು ಖಾಸಾಗಿಕರಣ ಗೊಳಿಸಿರುವುದು ಎನ್‌ಡಿಎ ಸಾಧನೆಯಾಗಿದೆ ಎಂದರು.
ಬೃಹನ್ಮುಂಬಯಿ ಹಾಗೂ ಮಹಾರಾಷ್ಟ್ರದಲ್ಲೆಡೆ ೨೦೨೪ನೇ ಸಾಲಿನ ಲೋಕಸಭೆಗೆ ಸ್ಪರ್ಧಿಸಿದ ಇಂಡಿಯಾ ಮೈತ್ರಿಕೂಟಕ್ಕೆ ಮತ ನೀಡಿ ಅಧಿಕಾರಕ್ಕೆ ತರುವಂತೆ ಮುಂಬಯಿವಾಸಿ ಮತದಾರರಲ್ಲಿ ಮನವಿ ಮಾಡಿದರು.
ಇದೇ ವೇಳೆ ಉಪಸ್ಥಿತರಿದ್ದ ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ ಮುಂಬಯಿ ದೊಡ್ಡ ಸಂಖ್ಯೆಯಲ್ಲಿ ತುಳುಕನ್ನಡಿಗರನ್ನು ಹೊಂದಿದ ಮಹಾನಗರವಾಗಿದೆ. ಅದರಲ್ಲೂ ಕರ್ನಾಟಕದ ಕರಾವಳಿಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೊಟೇಲು ಉದ್ಯಮದಿಂದ ಎಲ್ಲಾ ಕ್ಷೇತ್ರಗಳಲ್ಲೂ ಮಿಂಚಿದವರಾಗಿದ್ದಾರೆ. ಅಭಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೈನ್ ಸ್ವಿಚ್ ಮುಂಬಯಿಗರಾಗಿದ್ದಾರೆ ಎಂದರು.
ಕರ್ನಾಟಕದಲ್ಲಿ ಮಹಾರಾಷ್ಟ್ರ ಮಾದರಿ ಆಪರೇಷನ್ ಬಗೆಗಿನ ಮಹಾರಾಷ್ಟ್ರ ಮುಖ್ಯಮಂತ್ರಿ ಏಕ್‌ನಾಥ್ ಶಿಂಧೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಲೋಕಸಭಾ ಚುನಾವಣೆಯ ನಂತರ ಶಿಂಧೆ ಸರ್ಕಾರವೇ ಪತನವಾದರೂ ಅಚ್ಚರಿಪಡಬೇಕಾಗಿಲ್ಲ ಎಂದರು.
ಕರ್ನಾಟಕದ ಜನತೆ ಇಂಡಿಯಾ ಅಭ್ಯಥಿಗಳ ಪರವಾಗಿದ್ದು ರಾಷ್ಟ್ರದಾದ್ಯಂತ ಅಭೂತಪೂರ್ವ ಬೆಂಬಲ ಲಭಿಸುತ್ತಿದೆ. ಮೋದಿಯವರ ಸುಳ್ಳು ರಾಜಕಾರಣದ ಬಗ್ಗೆ ಜನತೆ ಎಚ್ಚೆಚ್ಚುಕೊಂಡಿದ್ದು ಈ ಬಾರಿ ಇಂಡಿಯಾ ಮೈತ್ರಿಕೂಟವೇ ಅಧಿಕಾರಕ್ಕೆ ಬರುವ ಎಲ್ಲಾ ಲಕ್ಷಣಗಳಿವೆ. ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಕಾಂಗ್ರೇಸ್ ಸಾರಥ್ಯದ ಇಂಡಿಯಾ ಕನಸು ನನಸಾಗಲಿದೆ ಎಂದರು.
ಮಹಾರಾಷ್ಟ್ರ ಸರ್ಕಾರದ ಮಾಜಿ ಸಚಿವ ಸುರೇಶ್ ಎಸ್.ಶೆಟ್ಟಿ, ಮಾಜಿ ಎಂಎಲ್‌ಸಿ ಐವಾನ್ ಡಿ’ಸೋಜಾ, ಮುಂಬಯಿ ಕಾಂಗ್ರೆಸ್ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಜಾನೆಟ್ ಎಲ್.ಡಿ’ಸೋಜಾ, ಕೆಪಿಸಿಸಿ ಸದಸ್ಯ ಪಿಯೂಸ್ ಎಲ್.ರೋಡ್ರಿಗಸ್, ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬೇಬಿ ಕುಂದರ್ , ಆಲ್ ಇಂಡಿಯಾ ಕಿಸಾನ್ ಕಾಂಗ್ರೇಸ್ ನ ರಾಷ್ಟ್ರೀಯ ಜೊತೆ ಸಂಯೋಜಕ ಸುರೇಶ್ ಶೆಟ್ಟಿ ಯೆಯ್ಯಾಡಿ, ವಿಫುಲ್ ರೋಡ್ರಿಗಸ್, ಸಂತೋಷ್ ಶೆಟ್ಟಿ ಮರೋಲ್, ಐವಾನ್ ಡಿ’ಸೋಜಾ ನಕ್ರೆ, ಜಯಕರ್ ಶೆಟ್ಟಿ ಸಿದ್ಧಕಟ್ಟೆ, ಪದ್ಮನಾಭ ಎಸ್.ಪಯ್ಯಡೆ, ರವಿ ಎಸ್.ಶೆಟ್ಟಿ, ಡೆನ್ಜಿಲ್ ಅಲ್ಲಿಪಾದೆ ಮತ್ತಿತರರು ಹಾಜರಿದ್ದರು.