Published On: Wed, May 2nd, 2018

ಸಿಎಂ ಸಿದ್ದರಾಮಯ್ಯಗೆ ಮುಳುವಾದ ದಲಿತರ ಕಡೆಗಣನೆ!

siddu22

ರಾಜ್ಯದ ಮುಖ್ಯಮಂತ್ರಿಯಾಗಿ ಸುಮಾರು 40 ವರ್ಷಗಳ ನಂತರ ಮೊದಲ ಬಾರಿಗೆ 5 ವರ್ಷಗಳ ಅವಧಿಯನ್ನು ಯಶಸ್ವಿಯಾಗಿ ಪೂರೈಸಿರುವ ಮಾನ್ಯ ಸಿದ್ದರಾಮಯ್ಯನವರು ಬೀಗುತ್ತಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗಿದ್ದು, ಅಧಿಸೂಚನೆ ಹೊರಡಿಸುವುದೊಂದೇ ಬಾಕಿ ಇದೆ. ಅಲ್ಲದೆ “ರಾಜ್ಯದ ಮುಖ್ಯಮಂತ್ರಿಯಾಗಿ ಜನಮೆಚ್ಚುವ ಆಡಳಿತ ನೀಡಿದ್ದೇವೆ ಮುಂದಿನ ಸರಕಾರವು ನಮ್ಮದೇ ಮುಂದಿನ ಮುಖ್ಯಮಂತ್ರಿಯೂ ನಾನೇ” ಎಂದು ಬೀಗುತ್ತಿರುವ ಮಾನ್ಯ ಸಿದ್ದರಾಮಯ್ಯನವರು ರಾಜ್ಯಾದ್ಯಂತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರೊಡನೆ ಒಂದು ಸುತ್ತಿನ ಪ್ರಚಾರವನ್ನು ಮುಗಿಸಿ ಬಂದಿದ್ದಾರೆ.

ದ್ದರಾಮಯ್ಯನವರು ಅವರು ಮಾಧ್ಯಮಗಳೊಂದಿಗೆ ಮಾತನಾಡುವಾಗ “ನಾನು ಕುಮಾರಸ್ವಾಮಿಯವರನ್ನು ಕೇಳಿ ರಾಜಕಾರಣ ಮಾಡಬೇಕಿಲ್ಲ, ಯಾವ ಕ್ಷೇತ್ರಕ್ಕೂ ನಾನು ವಲಸೆ ಹೋಗಲ್ಲ, ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಸ್ಪರ್ಧಿಸುತ್ತೇನೆ” ಎಂದು ಹೇಳಿದ್ದರೂ ಕೂಡ ಅವರಲ್ಲಿ ಕ್ಷೇತ್ರದ  ವಿಚಾರದಲ್ಲಿ ಆತಂಕದ ಗೆರೆಗಳು ಮೂಡಿರುವುದು ಅವರ ಮುಖದಲ್ಲಿ ಸ್ಪಷ್ಟವಾಗಿದೆ.

2005ರಲ್ಲಿ ದೇವೆಗೌಡರ ಜೊತೆಗಿನ ಭಿನ್ನಾಭಿಪ್ರಾಯದಿಂದ ಜೆಡಿಎಸ್ ನಿಂದ ಹೊರಬಂದು ಸಿದ್ದರಾಮಯ್ಯನವರು  ತಮ್ಮದೇ ಆದ ಅಹಿಂದ ಹೆಸರಿನ ಸಂಘಟನೆಯನ್ನು ಕಟ್ಟಿ ಅದನ್ನು ಎಬಿಪಿಜೆಡಿ ಯ ಹೆಸರಿನಲ್ಲಿ ರಾಜಕೀಯ ಸಂಘಟನೆಯನ್ನು ಪುನರುಜ್ಜೀವನ ಗೊಳಿಸುವ ಪ್ರಯತ್ನ ಮಾಡಿ ನಂತರ ಪ್ರಾದೇಶಿಕ ಪಕ್ಷಗಳನ್ನು  ಕಟ್ಟಿ ಯಶಸ್ವಿಯಾದ ಉದಾಹರಣೆಗಳು ರಾಜ್ಯದಲ್ಲಿ ಕಾಣದೆ ಇರುವುದನ್ನು ಮನಗಂಡು ಸ್ವತಂತ್ರ/ ಪಕ್ಷ ರಾಜಕಾರಣ ಸಾಧ್ಯಾಸಾಧ್ಯತೆಗಳನ್ನು ಮನಗಂಡು ಅಂತಿಮವಾಗಿ ಕಾಂಗ್ರೆಸ್ ತೆಕ್ಕೆಗೆ ಸರಿಯುವುದೇ ಸೂಕ್ತ ಎಂದು ಭಾವಿಸಿ 2006 ರಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ನಂತರ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಹುರಿಯಾಳಾಗಿ ಸ್ಪರ್ಧಿಸಿದರು.

ಕೈ ಹಿಡಿದ ದಲಿತ ಮತ್ತು ಹಿಂದುಳಿದವರು: 2006 ರಲ್ಲಿ ನಡೆದ ಉಪಚುನಾವಣೆಯು ಪಕ್ಷಗಳ ನಡುವೆ ನಡೆದ ಚುನಾವಣೆಯಾಗಿರದೆ, ಸಿದ್ದರಾಮಯ್ಯ ಮತ್ತು ದೇವೇಗೌಡರ ನಡುವಿನ ಹಣಾಹಣಿಯಾಗಿತ್ತು . ಆ ಸಂದರ್ಭದಲ್ಲಿ ಬಹಳ ಜಾಣ ನಡೆ ತೋರಿದ ಸಿದ್ದರಾಮಯ್ಯ, ಹಿಂದುಳಿದವರು, ದಲಿತರು ಅಲ್ಪಸಂಖ್ಯಾತರ, ಜನಬೆಂಬಲ ಪಡೆದು ಅತಿ ಕಡಿಮೆ ಅಂತರದ 257 ಮತಗಳ ಅಂತರದಿಂದ ಬಹಳ ಪ್ರಾಯಾಸದ ಗೆಲುವನ್ನು ಪಡೆದರು. ಅಂದು ನಡೆದ ಚುನಾವಣೆಯಲ್ಲಿ ಅಹಿಂದ ಮತಗಳು ಚದುರದಂತೆ ಹಲವು ಪಕ್ಷಗಳು ಅಭ್ಯರ್ಥಿಗಳನ್ನು ಹಾಕದಂತೆ ಕೋರಿದರು. ಅಂತೆಯೇ ದಲಿತರ ಪಾರ್ಟಿ ಎಂದೇ ಬಿಂಬಿತವಾದ  ಬಿಎಸ್ಪಿಯೂ ಕೂಡ ಅಭ್ಯರ್ಥಿಯನ್ನು ಹಾಕದೆ ಸಿದ್ದರಾಮಯ್ಯನವರನ್ನು ಬೆಂಬಲಿಸಿ ಅವರ ಗೆಲುವಿಗೆ ಸಹಕರಿಸಿತು. ನಂತರ ನಡೆದ ಬೆಳವಣಿಗೆಗಳಲ್ಲಿ ಸಿದ್ದರಾಮಯ್ಯನವರು 2013ರ ಚುನಾವಣೆಯಲ್ಲಿ ವರುಣಾ ಕ್ಷೇತ್ರಗಳಿಂದ ಜಯಗಳಿಸಿ ರಾಜ್ಯದ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದರು.

ಸಿಎಂ ಆದ ಬಳಿಕ ನಾನು ಕೂಡ ದಲಿತನೇ ಎಂದು ದಲಿತ ಮುಖ್ಯಮಂತ್ರಿಯ ವಿಚಾರವೆತ್ತಿದ ದಲಿತ ಸಂಘಟನೆಗಳಿಗೆ ಉತ್ತರಿಸಿ ಪ್ರಮಾಣ ವಚನ ಸ್ವೀಕರಿಸಿದ ಸಿದ್ದರಾಮಯ್ಯನವರು ತಮ್ಮ ಆಡಳಿತದ ಪ್ರತಿಯೊಂದು ಹಂತಗಳಲ್ಲಿ ಕೂಡ ದಲಿತ ವಿರೋಧಿಯಾಗಿ ನಡೆದುಕೊಂಡರು. ಇದಕ್ಕೆ ಹಲವು ಸಾಕ್ಷಿಗಳು ಕೂಡ ಇವೆ. ತಾವು ಸಿಎಂ ಆದ ಬಳಿಕ ಜಾತೀವಾರು ಜನಗಣತಿಯನ್ನು ನಡೆಸಲು ಹಿಂದುಳಿದ ಆಯೋಗದ ಮೂಲಕ ಆದೇಶಿಸಿದರು. ನಂತರ ಗಣತಿ ಕಾರ್ಯ ಪೂರ್ಣಗೊಂಡು ವರದಿ ಸಿದ್ದಗೊಂಡಿದ್ದರೂ ಕೂಡ ಅದನ್ನು ಸಂಪುಟದ ಮುಂದೆ ಬಾರದಂತೆ ಬಹಳ ಯಶಸ್ವಿಯಾಗಿ ತಡೆದರು. ದಲಿತ ಸಿಎಂ ವಿಚಾರದಲ್ಲಿ ಪರಮೇಶ್ವರ್ ತನಗೆ ಎದುರಾಳಿಯಾಗುವುದನ್ನು ಗ್ರಹಿಸಿ ಅವರು ಕೊರಟಗೆರೆಯಲ್ಲಿ ಸೋಲುವಂತೆ ನೋಡಿಕೊಂಡರು. ನಂತರ ಅವರನ್ನು ಉಪಮುಖ್ಯಮಂತ್ರಿ ಮಾಡಲು ಸುತರಾಂ ಒಪ್ಪದೆ ಸಂಪುಟಕ್ಕೂ ಸೇರಿಸಲು ಇಷ್ಟವಿಲ್ಲದೆ ಹೈಕಮಾಂಡ್ ಆದೇಶದ ಬಳಿಕ ಗೃಹ ಮಂತ್ರಿ ಮಾಡಿಕೊಂಡರು. ಮತ್ತು ಖರ್ಗೆ ವಿಚಾರದಲ್ಲಿ ಬಹಳ ವ್ಯವಸ್ಥಿತವಾಗಿ ಮುಖ್ಯಮಂತ್ರಿ ರೇಸ್ ನಿಂದ ಹೊರದೂಡಿ ಕೆಂದ್ರಕ್ಕೆ ಸೀಮಿತವಾಗುವಂತೆ ಮಾಡಿ ಅವರ ಪುತ್ರನನ್ನು ಮಂತ್ರಿ ಮಾಡಿ ಮತ್ತೊಬ್ಬ ದಲಿತ ನಾಯಕ ಶ್ರಿನಿವಾಸ್ ಪ್ರಸಾದ್ ರವರ ಸ್ಥಾನಕ್ಕೆ ಖರ್ಗೆ ಪುತ್ರನನ್ನು ರೀಪ್ಲೇಸ್ ಮಾಡಲಾಗಿದೆ ಎಂದು ಹೇಳಿ ಪ್ರಸಾದರ ಸೀನಿಯಾರಿಟಿಯನ್ನು ಕಡೆಗಣಿಸಿದರು. ಇದರಿಂದ ಬೇಸತ್ತ ಪ್ರಸಾದರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದು ತಿಳಿದ ವಿಷಯ.

ಕೆಪಿಎಸ್ಸಿಗೆ ನಡೆದ ಪರೀಕ್ಷಾ ಅಕ್ರಮದಲ್ಲಿ ಸರಿಯಾದ ನಿಲುವನ್ನು ತಾಳದೆ ಹಿಂದುಳಿದ ಮತ್ತು ದಲಿತ ಪ್ರತಿಭಾನ್ವಿತ ಅಭ್ಯರ್ಥಿಗಳಿಗೆ ಉದ್ಯೋಗವು ಗಗನ ಕುಸುಮವಾಗುವಂತೆ ಮಾಡಿ ಒಟ್ಟಾರೆ ಪರೀಕ್ಷೆಯನ್ನೇ ಅಕ್ರಮ ಎಂದು ಘೋಷಿಸಿದ್ದರು. ನಂತರದ ಸುಪ್ರೀಂ ಕೋರ್ಟ್ ಭಡ್ತಿ ಮೀಸಲಾತಿ ವಿಚಾರದಲ್ಲಿ ದಲಿತರ ವಿರೋಧವಾಗಿ ಬಂದ ಆದೇಶವನ್ನು ಇದುವರೆಗೂ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸದೆ ಇರುವುದು ದಲಿತರ  ದೌರ್ಭಾಗ್ಯವೇ ಸರಿ.

ಇವೆಲ್ಲದರ ನಡುವೆ 2006 ಉಪಚುನಾವಣೆಯಲ್ಲಿ ಅಭ್ಯರ್ಥಿ ಹಾಕದೆ ಬೆಂಬಲಿಸಿದ ಬಿಎಸ್ಪಿಯು 2013ರಲ್ಲಿ ಗೆಲ್ಲುವ ಕ್ಷೇತ್ರವೆಂದೇ ಬಿಂಬಿತವಾಗಿದ್ದ  ಕೊಳ್ಳೇಗಾಲದಲ್ಲಿ ಹಣದ ತೈಲಿಯನ್ನು ಹರಿಸಿ ಬಿಎಸ್ಪಿಯ ಅಭ್ಯರ್ಥಿಯನ್ನು ಸೋಲುವಂತೆ ಮಾಡಿ ತಮಗೆ ಉಪಕಾರ ಮಾಡಿದವರಿಗೆ ಪ್ರತ್ಯುಪಕಾರ ಮಾಡುವ ಗುಣವಿಲ್ಲವೆಂದು ತೋರಿದರು. ಅಲ್ಲದೆ ನಾನು ಸಾಮಾಜಿಕ  ನ್ಯಾಯದ ಪರ ಎಂದು ಹೇಳಿಕೊಂಡೇ ಬಂದ ಸಿದ್ದರಾಮಯ್ಯ ರಾಜ್ಯದ ನಂ.1 ವಿದ್ಯಾರ್ಥಿ ಸಂಘಟನೆ ಎಂದೇ ಪೊಲೀಸ್ ಗುಪ್ತದಳದಿಂದ ಪರಿಗಣಿಸಲ್ಪಟ್ಟಿರುವ ಬಿವಿಎಸ್ ವಿದ್ಯಾರ್ಥಿಗಳು 2016ರಲ್ಲಿ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಗೆ ಒತ್ತಾಯಿಸಿ ಪ್ರೀಡಂ ಪಾರ್ಕ್ ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಲಕ್ಷಾಂತರ ವಿದ್ಯಾರ್ಥಿಗಳ ಮೇಲೆ ಲಾಠೀ ಚಾರ್ಜ್ ನಡೆಸಿ ನೂರಾರು ವಿದ್ಯಾರ್ಥಿಗಳ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿ ಜೈಲಿಗೆ ತಳ್ಳಿದರು. ಅಲ್ಲದೆ ಬಜೆಟ್ ನಲ್ಲಿ ಮೊದಲ ಬಾರಿಗೆ ಎಸ್ಸಿ/ ಎಸ್ಟಿ ಜನಸಂಖ್ಯೆಗೆ ಅನುಸಾರ ಬಜೆಟ್ ನ ಹಣವನ್ನು ಹಂಚಿಕೆ ಮಾಡಿದ ಸಿದ್ದರಾಮಯ್ಯ ಅದನ್ನು ಖರ್ಚು ಮಾಡಿದ್ದು ಮಾತ್ರ ಬೆಂಗಳೂರಿನ ಚರ್ಚ್ ಸ್ಟ್ರೀಟ್ ನ ರಸ್ತೆಗಳಿಗೆ ಗ್ರಾನೈಟ್ ಹಾಕಲು , ಮೆಟ್ರೋ ಕಾಮಗಾರಿಗೆ, ಪ್ಲೈ ಓವರ್ ಗಳಿಗೆ  ಮತ್ತು ಸಾಲಮನ್ನಾ ಯೋಜನೆಗಳಿಗೆ . ಈಗೆ ಪ್ರತಿ ಹಂತದಲ್ಲೂ ದಲಿತರ ಹೆಸರು ಹೇಳಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರ ಮೂಗಿಗೆ ತುಪ್ಪ ಸವರಿದ್ದೇ ಬಂತು ಅವರ ಬವಣೆಗಳಂತೂ ನೀಗಲಿಲ್ಲ.

ಇದರಿಂದ ಸಂಘಟಿತವಾದ ದಲಿತ ಸಮುದಾಯ ಬಿಎಸ್ಪಿಯ ಅಡಿಯಲ್ಲಿ ಬಹಳ ಮಜಬೂತಾಗಿ ಸಂಘಟಿತವಾಗಿದೆ. ಹಳೇ ಮೈಸೂರು ಭಾಗದಲ್ಲಿ ಬಹಳ ಹಿಂದಿನಿಂದಲೂ ದಲಿತರಲ್ಲಿ ಪ್ರಭಾವಶಾಲಿಯಾಗಿ ಮೂಡಿ ಬರುತ್ತಿದ್ದ ಬಿಎಸ್ಪಿ ಈ ಬಾರಿ ತಳಮೂಲದ ಸಂಘಟನೆಯಿಂದಾಗಿ ತನ್ನ ಬಲವನ್ನು ನೂರ್ಮಡಿಸಕೊಂಡಿದೆ. ಅಲ್ಲದೆ ಬಿಎಸ್ಪಿಯ ವಿದ್ಯಾರ್ಥಿ ಸಂಘಟನೆ ಎಂದೇ ತಿಳಿದು ಬಂದಿರುವ ಬಿವಿಎಸ್ ಎಂಬ ಶಿಸ್ತುಬದ್ದ ವಿದ್ಯಾರ್ಥಿ ಸಂಘಟನೆ ಕೂಡ ರಾಜ್ಯದಲ್ಲಿ ಬಹಳ ಪ್ರಭಾವ ಶಾಲಿಯಾಗಿದ್ದು, ತನ್ನ  ಶಕ್ತಿಯನ್ನು ಹೆಚ್ಚಿಸಿಕೊಂಡಿದೆ. ಈ ಎಲ್ಲಾ ಕಾರಣಗಳಿಂದ ಸಿದ್ದರಾಮಯ್ಯನವರಿಗೆ ದಲಿತರ ಮತಗಳು ಚಲಾವಣೆಯಾಗುವುದು ಅಸಾಧ್ಯವೇ ಸರಿ. ಈ ವಿಷಯವಾಗಿ ವರದಿಗಾರ ಕ್ಷೇತ್ರ ಸಂದರ್ಶನ ಮಾಡಿದಾಗ ಕಾಂಗ್ರೆಸ್ ನ ಹೆಸರು ಹೇಳಲಿಚ್ಚಿಸದ  ನಾಯಕನು ಕೂಡ ಬಿಎಸ್ಪಿಯ ಪ್ರಗತಿಯನ್ನು ಒಪ್ಪಿಕೊಂಡಿದ್ದು ದಲಿತರು ಈ ಬಾರಿ ಕಾಂಗ್ರೆಸ್ ನಿಲುವು ತಳೆದರೆ ನಮ್ಮ ಅಭ್ಯರ್ಥಿ ಗೆಲುವು ಮರೀಚಿಕೆ ಎಂದು ಹೇಳಿದರು.

ಅಲ್ಲದೆ ಸಿದ್ದರಾಮಯ್ಯನವರ ಹಲವು ನಿಲುವುಗಳಿಂದಾಗಿ ಹಿಂದುಳಿದವರ ಮತಗಳು ಈಗಾಗಲೇ ಹಿಂದುತ್ವದ ಹೆಸರಿನಲ್ಲಿ ಬಿಜೆಪಿಯಲ್ಲಿ ಬಂಧಿಯಾಗಿರುವುದು ಕಂಡು ಬರುತ್ತದೆ. ಕಾಂಗ್ರೆಸ್ ನ ಮೃದು ಹಿಂದುತ್ವದ ಕಾರಣದಿಂದಾಗಿ ಅಲ್ಪಸಂಖ್ಯಾತರು ಕಾಂಗ್ರೆಸ್ ನಿಂದ ದೂರ ಸರಿದಿರುವುದು ಕೈಗನ್ನಡಿಯಷ್ಟೇ ಸತ್ಯ. ಮತ್ತು ಲಿಂಗಾಯುತ ಸಮುದಾಯ ಕೂಡ ಲಿಂಗಾಯುತ ಧರ್ಮದ ವಿಚಾರದಲ್ಲಿ ಹೊಡೆದಿರುವುದರಿಂದ ಅವರು ಕೂಡ ಬೇಸತ್ತು ತಮ್ಮ ಆಸ್ಮಿತೆಯ ಮತ್ತು ಲಿಂಗಾಯುತ ಅಭ್ಯರ್ಥಿಯನ್ನು ಮುಖ್ಯಮಂತ್ರಿ ಮಾಡುವ ಸಲುವಾಗಿ  ಬಿಜೆಪಿಯ ಅಡಿಯಲ್ಲಿ ಸಂಘಟಿತವಾಗಿದೆ.

ಅಲ್ಲದೆ ಲಗಾಯ್ತಿನಿಂದಲೂ  ದೊಡ್ಡ ಗೌಡರ ಸಾಂಗತ್ಯದಲ್ಲಿದ್ದ ಕಾಲದಿಂದಲೂ ಲಿಂಗಾಯುತರು ಕೈಬಿಟ್ಟರೂ ಕೈಬಿಡದೆ ಕಾಪಾಡಿದ ಒಕ್ಕಲಿಗರು ಕೂಡ ಸಿದ್ದರಾಮಯ್ಯನವರ ಮೇಲೆ ಮುನಿಸಿಕೊಂಡಿದ್ದಾರೆ. ಇದಕ್ಕೆ ಕಾರಣ ಹಲವು. ಜೆಡಿಎಸ್ ತ್ಯಜಿಸಿ ದೊಡ್ಡ ಗೌಡರ ವಿರುದ್ಧ ತೊಡೆ ತಟ್ಟಿರುವುದು ಒಂದಾದರೆ “ಗೌಡರಿಗೆ ತಮ್ಮ ಮಕ್ಕಳನ್ನು ಸಿಎಂ ಮಾಡುವುದೇ ಗೌಡರ ಜ್ಯಾತ್ಯಾತೀತತೆ” ಎಂದು ಹೋದಲ್ಲಿ ಬಂದಲ್ಲಿ ಹೇಳಿಕೆ ನೀಡುತ್ತಾ ಒಕ್ಕಲಿಗರನ್ನು ಕೆರಳಿಸಿದ್ದಾರೆ. ಅಲದ್ಲೆ ತಮ್ಮ ಪಕ್ಷದ ರಾಷ್ಟ್ರಾಧ್ಯಕ್ಷ ರಾಹುಲ್ ಬಾಯಲ್ಲಿ ಕೂಡ ‘ಜೆಡಿಎಸ್ ಬಿಜೆಪಿಯ ಬಿ- ಟೀಮ್” ಎಂದು ಹೇಳಿಸಿ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ ಮತ್ತು “ಹಾಸನದಲ್ಲಿ ದೇವೇಗೌಡರ ಮಕ್ಕಳನ್ನು ಗೆಲ್ಲಿಸಿದ್ದು ಸಾಕು” ಎಂದು ಹೇಳಿ ಇಕ್ಕಟ್ಟಿಗೆ ಸಿಲುಕಿದ್ದಾರೆ. ಅಲ್ಲದೆ ತಮ್ಮ  ಕ್ಷೇತ್ರದ ಹಾಲಿ ಜೆಡಿಸ್ ಅಭ್ಯರ್ಥಿಯು ಒಂದು ಕಾಲದ ಸಿದ್ದರಾಮಯ್ಯನವರ  ಆಪ್ತ ಜಿ.ಟಿ ದೇವೇಗೌಡ ಕೂಡ ಸಕ್ರಿಯವಾಗಿ ಕೆಲಸ ಮಾಡಿ ಒಕ್ಕಲಿಗರನ್ನು ಸಂಘಟಿಸಿ  “ಕುಮಾರಣ್ಣನ್ನು ಸಿಎಂ  ಮಾಡುವ ಸಲುವಾಗಿ ನನ್ನನ್ನು ಗೆಲ್ಲಿಸಿ” ಎಂದು ಸಿದ್ದರಾಮಯ್ಯ ನವರ ಏಟುಗಳಿಗೆ ಎದುರೇಟು ನೀಡುತ್ತಾ ರಣೋತ್ಸಾಹ ತೋರುತ್ತಿದ್ದಾರೆ.

ಸಿದ್ದರಾಮಯ್ಯನವರು ತಾವು ಈಗ ಪ್ರತಿನಿಧಿಸುತ್ತಿರುವ ಕ್ಷೇತ್ರವನ್ನು ತಮ್ಮ ಹಿರಿಯ ಮಗನ ಅಕಾಲಿಕ ಮರಣದಿಂದಾಗಿ ಅನಿವಾರ್ಯವಾಗಿ ರಾಜಕಾರಣ ತಿಳಿಯದಿದ್ದರೂ ಅಪ್ಪನ ಒತ್ತಾಯಕ್ಕೆ ಮಣಿದು ರಾಜಕೀಯಕ್ಕೆ ಬಂದಿರುವ ಮಗ ಡಾ.ಯತಿಂದ್ರರವರಿಗೆ ವರುಣಾ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದಾರೆ. ತಾವು ಹಿಂದೆ ಗೆದ್ದಿರುವ ಚಾಮುಂಡೇಶ್ವರಿ ನೋಡಿದರೆ ಈಗ ಮುನಿದಿರುವುದು ಸ್ಪಷ್ಟವಾಗಿ ಗೋಚರವಾಗಿದೆ. ಅಲ್ಲದೆ ಸಾಂಪ್ರದಾಯಿಕ ದಲಿತರು ಕೂಡ ಜೆಡಿಎಸ್ ನೊಂದಿಗೆ ಮಹಾ ಮೈತ್ರಿ ಮಾಡಿಕೊಂಡಿರುವುದು ಕೂಡ ತಮ್ಮ ದೋಣಿ ದೊಡ್ಡ ತೂತಾಗಿರುವುದನ್ನು ಎತ್ತಿ ತೋರಿಸುತ್ತಿದೆ . ಈ ಎಲ್ಲಾ ಕಾರಣಗಳಿಂದಾಗಿ ಸಿದ್ದರಾಮಯ್ಯ ಯಾವ ಕ್ಷೇತ್ರದಲ್ಲಿ ಚುನಾವಣೆ ಎದುರಿಸುವುದು ಎಂಬ ಗೊಂದಲದಲ್ಲಿದ್ದಾರೆ . ಒಂದು,  ಮಗನ ಸುರಕ್ಷತೆಗೆ ಆಧ್ಯತೆ ನೀಡಿ, ತಾವು ಚಾಮುಂಡೇಶ್ವರಿಯಲ್ಲೇ ಚುನಾವಣೆ ಎದುರಿಸುವುದು ಎಂದು ನಿರ್ಧಿರಿಸಿದಲ್ಲಿ ಸೋಲು ಎಂಬುವುದು ಬರಸಿಡಿಲಿನಂತೆ ಅಪ್ಪಳಿಸುವುದು ಶತಸಿದ್ಧ.  ಇಲ್ಲವೇ ಕ್ಷೇತ್ರ ತೊರೆಯುವುದು ಅಥವಾ ಸುರಕ್ಷಿತ ಕ್ಷೇತ್ರವನ್ನು ಹುಡುಕುವುದು ಸಿದ್ದರಾಮಯ್ಯನವರಿಗೆ ಅನಿವಾರ್ಯವಾಗಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter