ಫರಂಗಿಪೇಟೆ : ಹಠಾತ್ ಪ್ರತಿಭಟನೆ
ಬಂಟ್ವಾಳ: ಇಲ್ಲಿನ ಫರಂಗಿಪೇಟೆಯ ಲೆವೆಲ್‌ಕ್ರಾಂಸಿಂಗ್ ಸಂಪರ್ಕ ರಸ್ತೆಯ ಬಳಿ ರೈಲ್ವೇ ಹಳಿಯ ದುರಸ್ತಿಯ ಹಿನ್ನಲೆಯಲ್ಲಿ ತಾತ್ಕಲಿಕವಾಗಿ ರಸ್ತೆ ಮುಚ್ಚಲಾಗಿದೆ ಎಂದು ಸೂಚನಾ ಫಲಕ ಹಾಕಿ ಒಂದು ವಾರ ಕಳೆದರೂ ಇನ್ನೂ ಸಾರ್ವಜನಿಕರು ಹಾಗೂ ವಾಹನಗಳ ಸಂಚಾರಕ್ಕೆ ರಸ್ತೆ ಮುಕ್ತಗೊಳಿಸದ ಹಿನ್ನಲೆಯಲ್ಲಿ ಸ್ಥಳೀಯ ಗ್ರಾಮಸ್ಥರು ಲೆವೆಲ್ ಕ್ರಾಸಿಂಗ್ ಬಳಿ ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಬುಧವಾರ ಸಂಜೆ ನಡೆದಿದೆ.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಉಮ್ಮರ್ ಫಾರೂಕ್, ತಾ.ಪಂ.ಮಾಜಿ ಸದಸ್ಯ ಆಸೀಫ್‌ಇಕ್ಬಾಲ್, ಪುದು ಗ್ರಾಮ ಪಂಚಾಯಿತಿ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅವರ ನೇತೃತ್ವದಲ್ಲಿ ಅಪಾರ ಸಂಖ್ಯೆಯಲ್ಲಿ ಗ್ರಾಮಸ್ಥರು ಜಮಾಯಿಸಿ ರೈಲ್ವೇ ಇಲಾಖೆಯ ನಿರ್ಲಕ್ಷ ಧೋರಣೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಫರಂಗಿಪೇಟೆಯಿಂದ ಕುಂಪಣಮಜಲು ಸಂಪರ್ಕಿಸುವ ರಸ್ತೆ ಮಧ್ಯೆ ರೈಲ್ವೇ ಲೆವೆಲ್‌ಕ್ರಾಸಿಂಗ್ ಇದ್ದು ಇದನ್ನು ದಾಟಿಕೊಂಡು ಪ್ರತಿನಿತ್ಯ ನೂರಾರು ವಾಹನಗಳು, ಸಾವಿರಾರು ಸಂಖ್ಯೆಯಲ್ಲಿ ಆ ಭಾಗದ ಗ್ರಾಮಸ್ಥರು ಹೋಗುತ್ತಾರೆ. ರೈಲ್ವೇ ಹಳಿಯ ದುರಸ್ತಿಯ ಕಾರಣ ಮೂರು ದಿನಗಳ ಕಾಲ ತಾತ್ಕಲಿಕವಾಗಿ ರಸ್ತೆ ಸಂಚಾರವನ್ನು ಮುಚ್ಚುವುದಾಗಿ ಹೇಳಿದ ರೈಲ್ವೇ ಇಲಾಖೆ ವಾರ ಕಳೆದರೂ ವಾಹನ ಸಂಚಾರಕ್ಕೆ ತಡೆ ತೆರವುಗೊಳಿಸದಿರುವುದರಿಂದ ರಸ್ತೆ ಶಾಶ್ವತವಾಗಿ ಮುಚ್ಚುವ ಹುನ್ನಾರ ನಡೆಯುತ್ತಿದೆ ಎನ್ನುವ ಶಂಕೆ ವ್ಯಕ್ತವಾದ ಹಿನ್ನಲೆಯಲ್ಲಿ ಪ್ರತಿಭಟನೆ ನಡೆಸುತಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ. ಈ ರಸ್ತೆ ಕುಂಪಣಮಜಲು, ಮೇರೆಮಜಲು, ತುಪ್ಪೆಕಲ್ಲು, ಕೋಡಿಮಜಲು, ತೇವು ಮೊದಲಾದ ಸ್ಥಳಗಳಿಗೆ ಸಂಪರ್ಕ ಕೊಂಡಿಯಾಗಿದ್ದು ಸುಮಾರು ೨ ಸಾವಿರ ಕುಟುಂಬಗಳು ಇಲ್ಲಿ ವಾಸವಾಗಿವೆ. ರೈಲ್ವೇ ಇಲಾಖೆ ವಾಹನ ಸಂಚಾರವನ್ನು ನಿರ್ಬಂದಿಸಿರುವುದರಿಂದ ಈ ಭಾಗದ ಎಲ್ಲಾ ಜನರು ತೊಂದರೆ ಪಡುವಂತಾಗಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಅಸುರಕ್ಷಿತ ಅಂಡರ್‌ಪಾಸ್:ಕಾಮಗಾರಿ ಮುಗಿಯುವವರೆಗೆ ಅಂಡರ್‌ಪಾಸ್ ಇರುವ ಬದಲಿ ರಸ್ತೆಯನ್ನು ಬಳಸುವಂತೆ ರೈಲ್ವೇ ಅಧಿಕಾರಿಗಳು ಸೂಚಿಸಿದ್ದಾರೆ, ಆದರೆ ಈ ಅಂಡರ್‌ಪಾಸ್ ರಸ್ತೆಯನ್ನೇ ಶಾಶ್ವತಗೊಳಿಸುವ ಹುನ್ನಾರವನ್ನು ರೈಲ್ವೇ ಇಲಾಖೆ ಮಾಡಿದೆ ಎನ್ನುವ ಸಂಶಯ ಗ್ರಾಮಸ್ಥರಲ್ಲಿ ವ್ಯಕ್ತವಾಗಿದೆ. ಈ ಅಂಡರ್‌ಪಾಸ್ ಅಸುರಕ್ಷಿತವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದು ಹಗಲು ಹೊತ್ತಿನಲ್ಲಿಯೇ ಈ ಅಂಡರ್‌ಪಾಸ್ ಮೂಲಕ ಹೋಗಲು ಭಯಪಡಬೇಕಾದ ಸ್ಥಿತಿ ಇದೆ, ಸಂಜೆಯ ಬಳಿಕವಂತೂ ಈ ರಸ್ತೆ ತೀವ್ರ ಅಸುರಕ್ಷಿತವಾಗಿದೆ. ಮಹಿಳೆಯರು ಮಕ್ಕಳು ಈ ಅಂಡರ್ ಪಾಸ್ ಮೂಲಕ ಹೋಗುವುದು ಅಸಾಧ್ಯ, ಮಳೆಗಾಲದಲ್ಲಿ ನೀರು ತುಂಬಿಕೊಂಡು ಜನರು ಹಾಗೂ ವಾಹನ ಸಂಚರಿಸುವುದು ಸಾಧ್ಯವಿಲ್ಲ. ಅಲ್ಲದೆ ಈ ರಸ್ತೆಯೂ ವಾಹನ ಸಂಚಾರಕ್ಕೆ ಅಯೋಗ್ಯವಾಗಿದ್ದು ರೈಲ್ವೇ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ದುರಸ್ತಿ ಕಾರ್ಯವನ್ನು ಶೀಘ್ರ ಮುಗಿಸಿ ಲೆವೆಲ್‌ಕ್ರಾಸಿಂಗ್ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ. ಮುಂದಿನ ಮೂರು ದಿನದೊಳಗಾಗಿ ಹಳಿ ದುರಸ್ತಿಕಾರ್ಯ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಿಕೊಡುವುದಾಗಿ ರೈಲ್ವೇ ಇಲಾಖೆಯ ಇಂಜಿನಿಯರ್ ದೂರವಾಣಿಯ ಮೂಲಕ ಭರವಸೆ ನೀಡಿದ ಹಿನ್ನಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಉಮ್ಮರ್ ಫಾರೂಕ್, ತಾ.ಪಂ.ಮಾಜಿ ಸದಸ್ಯ ಆಸೀಫ್‌ಇಕ್ಬಾಲ್, ಪುದು ಗ್ರಾಮ ಪಂಚಾಯಿತಿ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಉಪಾದ್ಯಕ್ಷೆ ಲೀಡಿಯಾ ಪಿಂಟೋ ಪ್ರಮುಖರಾದ ಹಾಶೀರ್ ಪೇರಿಮಾರ್, ರಿಯಾಝ್ ಕುಂಪಣಮಜಲು, ಝಾಹೀರ್ ಅಬ್ಬಾಸ್, ಇಕ್ಬಾಲ್ ಸುಜೀರ್, ಸುಕೇಶ್ ಶೆಟ್ಟಿ ತೇವು, ಇಬ್ರಾಹಿಂ ಕುಂಪಣಮಜಲು, ಪ್ರಕಾಶ್ಚಂದ್ರ ರೈ ದೇವಸ್ಯ, ಜಗ್ಗ ಕೋಡಿಮಜಲು, ಶರೀಫ್, ಸುಂದರಶೆಟ್ಟಿ ಕುಂಪಣಮಜಲು ಮೊದಲಾದವರು ಹಾಜರಿದ್ದರು.
ಫರಂಗಿಪೇಟೆ ಲೆವೆಲ್‌ಕ್ರಾಸಿಂಗ್ ಸಂಪರ್ಕ ರಸ್ತೆಯಲ್ಲಿ ಹಳಿ ರಿಪೇರಿಯ ಹಿನ್ನಲೆಯಲ್ಲಿ ವಾಹನ ಸಂಚಾರವನ್ನು ಬಂದ್‌ಗೊಳಿಸಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಈ ರಸ್ತೆಯನ್ನು ಶಾಶ್ವತವಾಗಿ ಬಂದ್ ಮಾಡುತ್ತಾರೆ ಎನ್ನುವ ಗುಮಾನಿ ಸಾರ್ವಜನಿಕವಲಯದಲ್ಲಿ ಕೇಳಿ ಬಂದಿದೆ. ಈಗಿರುವ ಅವೈಜ್ಞಾನಿಕವಾದ ಅಂಡರ್‌ಪಾಸ್ ಬಳಸುವಂತೆ ರೈಲ್ವೇ ಅಧಿಕಾರಿಗಳು ಹೇಳುತ್ತಿದ್ದು ಇದು ಮಹಿಳೆಯರಿಗೆ, ಮಕ್ಕಳಿಗೆ ಹಾಗೂ ಜನಸಾಮಾನ್ಯರಿಗೆ ಸುರಕ್ಷಿತವಾಗಿಲ್ಲ, ಮಳೆಗಾಲದಲ್ಲಿ ಆರು ತಿಂಗಳು ನೀರು ತುಂಬಿರುತ್ತದೆ ಅಲ್ಲದೆ ಸಂಪರ್ಕ ರಸ್ತೆಯೂ ಸರಿಯಾಗಿಲ್ಲ. ಆದ್ದರಿಂದ ಲೆವೆಲ್‌ಕ್ರಾಸಿಂಗ್ ಬಳಿಯೇ ಜನ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು- ಉಮ್ಮರ್ ಫಾರೂಕ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹೇಳಿದರು.