ಬಂಟ್ವಾಳ: 2026-27 ರ ಶೈಕ್ಷಣಿಕ ಸಾಲಿಗೆ ಬಂಟ್ವಾಳ ತಾಲೂಕಿನ ಸರಕಾರಿ ಶಾಲೆಗಳಲ್ಲಿ   ಮಕ್ಕಳ ದಾಖಲಾತಿ  ಜಾಗೃತಿ ಅಂದೋಲನಕ್ಕೆ ಮೇ.15 ರಂದು ಬ್ಲಾಕ್ ಮಟ್ಟದಲ್ಲಿ ಚಾಲನೆ ನೀಡಲಾಗುವುದು ಎಂದು ಬಂಟ್ವಾಳ ಕ್ಷೇತ್ರ ಪ್ರಭಾರ ಶಿಕ್ಷಣಾಧಿಕಾರಿ ಮಾಲತಿ ಅವರು ತಿಳಿಸಿದ್ದಾರೆ
ಗುರುವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಮೇ.18 ರಂದು ಹೋಬಳಿ ಮಟ್ಟ ಹಾಗೂ ಮೇ.20 ರಂದು ಕ್ಲಸ್ಟರ್ ಮಟ್ಟದಲ್ಲು ಈ ಅಂದೋಲನ ನಡೆಯಲಿದೆ.ಕಳೆದ ನವಂಬರ್ ನಲ್ಲೇ  ಮಕ್ಕಳ ದಾಖಲಾತಿ ಕಾರ್ಯ ಚಟುವಟಿಕೆ ಆರಂಭವಾಗಿದ್ದು, ಮೇ.28 ರವರೆಗೆ ಮುಂದುವರಿಯಲಿದೆ ಎಂದರು.

ಮಕ್ಕಳ ದಾಖಲಾತಿ ಅಂದೋಲನದ ಬಗ್ಗೆ ಶಿಕ್ಷಕರು,ಪೋಷಕರು ಹಾಗೂ ಎಸ್ ಡಿಎಂಸಿ ಸಭೆಗಳಲ್ಲಿ ಜಾಗೃತಿ ಮೂಡಿಸಲಾಗಿದ್ದು,   ಮನೆ,ಮನೆ,ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಒಂದನೇ ತರಗತಿಗೆ ದಾಖಲಾಗುವ ವಯೋಮಾನದ ಮಕ್ಕಳ ಮಾಹಿತಿ ಪಡೆದುಕೊಂಡಿದ್ದಾರೆಯಲ್ಲದೆ
ಸರಕಾರಿ ಶಾಲೆಯಲ್ಲಿ ಸರಕಾರದಿಂದ ಮಕ್ಕಳಿಗೆ ಸಿಗುವಂತ ಸೌಲಭ್ಯಗಳ ಕುರಿತು ವಿವಿಧ ರೀತಿಯಲ್ಲಿ ಪ್ರಚಾರವನ್ನು ಹಮ್ಮಿಕೊಂಡಿದ್ದಾರೆ.ಮಕ್ಕಳ ದಾಖಲಾತಿ ಹೆಚ್ಚಳಕ್ಕಾಗಿ ದಾನಿಗಳು ಹಾಗೂ ಎಸ್ ಡಿಎಂಸಿ ವತಿಯಿಂದ ಎಲ್ ಕೆಜಿ ತರಗತಿ ಆರಂಭ,ಕಲಿಕಾ ಸಾಮಾಗ್ರಿಗಳ ವಿತರಣೆಗೆ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದರು.
ಬಂಟ್ವಾಳ ವಲಯದಲ್ಲಿ 42 ಕಿರಿಯ, 152 ಹಿರಿಯ ಪ್ರಾಥಮಿಕ ಶಾಲೆಗಳಿದ್ದು, 39 ಪ್ರೌಢ ಶಾಲೆಗಳು ಸೇರಿ ಒಟ್ಟು 233 ಶಾಲೆಗಳಿವೆ. 2025-26ನೇ ಸಾಲಿನಲ್ಲಿ ಬಂಟ್ವಾಳ ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 16 ಸರಕಾರಿ ಶಾಲೆಗಳು ಶೇ.100 ಫಲಿತಾಂಶ ಪಡೆದಿದೆ. ಈಗಾಗಲೇ ತಾಲೂಕಿನ ಮೂರು ಶಾಲೆಗಳಲ್ಲಿ ಸರಕಾರದ ವತಿಯಿಂದಲೇ ಎಲ್.ಕೆ.ಜಿ, ಯು.ಕೆ.ಜಿ. ಆರಂಭಿಸಲಾಗಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 60 ಶಾಲೆಗಳಿಗೆ ಎಲ್.ಕೆ.ಜಿ. ತರಗತಿ ಮಂಜೂರಾಗಿದೆ. ಇವುಗಳಲ್ಲಿ 28 ಶಾಲೆಗಳಿಗೆ ತಲಾ 1 ಲಕ್ಷ ರೂ  ಅನುದಾನ ಬಿಡುಗಡೆ ಆಗಿದೆ. ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಾಗದಂತೆ ಈ ವರ್ಷ ಕ್ರಮ ಕೈಗೊಳ್ಳಲಾಗುತ್ತದೆ ಎಂದವರು ಶಿಕ್ಷಣಾಧಿಕಾರಿ ಮಾಲತಿ ಅವರು ಮಾಹಿತಿ ನೀಡಿದರು.
ತಾಲೂಕಿನ ವಾಮದಪದವು, ಕುರ್ನಾಡು, ಕನ್ಯಾನ, ಸಿದ್ಧಕಟ್ಟೆಗಳಲ್ಲಿ ನ್ಯಾಶನಲ್ ಸ್ಕಿಲ್ ಕ್ವಾಲಿಫಿಕೇಶನ್ ಪ್ರೇಮ್ ವರ್ಕ್ ಶಾಲೆಗಳಿವೆ. ಇಲ್ಲಿ ಕೌಶಲ್ಯಾಧಾರಿತ ಶಿಕ್ಷಣ ಒದಗಿಸಲಾಗುತ್ತದೆ. ಕಲಿಕೆ, ಉದ್ಯೋಗ ಸಿದ್ಧತೆ ಹಾಗೂ ವಿಭಿನ್ನ ವೃತ್ತಿಪರ ಕಲಿಕೆಗಳಿಗೆ ಇದು ಅನುಕೂಲಕರವಾಗಿದೆ. ಬಂಟ್ವಾಳ ವಲಯದಲ್ಲಿ 6 ಪಿಎಂಶ್ರೀ ಶಾಲೆಗಳಿವೆ. ಇವು ರಾಷ್ಟ್ರೀಯ ಶಿಕ್ಷಣ ನೀತಿಯಡಿ ಮೇಲ್ದರ್ಜೆಗೇರಿಸಲಾದ ಶಾಲೆಗಳಾಗಿವೆ ಎಂದವರು ವಿವರಿಸಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಕುಮಾರ್ ಮಾತನಾಡಿ ಸರಕಾರಿ ಶಾಲೆಗಳಿಂದು ಗುಣಮಟ್ಟದ ಶಿಕ್ಷಣಕ್ಕೆ ಪೂರಕವಾದ ವಾತಾವರಣವನ್ನು ಹೊಂದಿದೆ. ದಾಖಲಾತಿ ಆಂದೋಲನದ ಮೂಲಕ ಪೋಷಕರು ಶಾಲೆ ಸೇರ್ಪಡೆಗೆ ಸಹಕರಿಸಬೇಕು ಎಂದರು.
ಬಿ.ಆರ್.ಸಿ. ವಿದ್ಯಾ ಜಿಲ್ಲಾ ವಯಸ್ಕರ ಶಿಕ್ಷಣ ಸಮನ್ವಯಾಧಿಕಾರಿ ಫಾತಿಮಾ ಬಿ, ಪೂರಕ ಮಾಹಿತಿ ನೀಡಿದರು.
ಇಸಿಒಗಳಾದ ರಮಾನಂದ ನೂಜಿಪ್ಪಾಡಿ, ಸುಧಾ ಮತ್ತು ಪ್ರತಿಮಾ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *