ಬಂಟ್ವಾಳ : ಭರತನಾಟ್ಯವು ಕೇವಲ ನೃತ್ಯಕಲೆಯಲ್ಲ, ಸಂಸ್ಕಾರ, ಶಿಸ್ತು ಹಾಗೂ ಗುರು-ಶಿಷ್ಯ ಪರಂಪರೆಯನ್ನು ಉಳಿಸಿ ಬೆಳೆಸುವ ಪ್ರಬಲ ಮಾಧ್ಯಮವಾಗಿದೆ. ಗುರು-ಹಿರಿಯರನ್ನು ಗೌರವಿಸುವ ಸಂಸ್ಕಾರವನ್ನು ಬೆಳೆಸುವ ಜತೆಗೆ, ಆರೋಗ್ಯ ಮತ್ತು ಮಾನಸಿಕ ಸ್ಥೈರ್ಯವನ್ನು ವೃದ್ಧಿಸುವ ಶಕ್ತಿ ಈ ಕಲೆಯಲ್ಲಿದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳ ಅವರು ನುಡಿದರು.

ಶುಕ್ರವಾರ ಸಂಜೆ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆದ ಕಲ್ಲಡ್ಕದ ಕಲಾನಿಕೇತನ ಸಂಸ್ಥೆಯ ‘ರಜತ ಕಲಾಯಾನ’ದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನಗೈದ ಶ್ರೀಗಳು
ಯುವಜನತೆಯಲ್ಲಿ ಕ್ಷೀಣಿಸುತ್ತಿರುವ ಸಂಸ್ಕಾರ ಮೌಲ್ಯಗಳನ್ನು ಉಳಿಸಲು ಹಾಗೂ ಮಕ್ಕಳಲ್ಲಿ ಧಾರ್ಮಿಕತೆ ಮತ್ತು ರಾಷ್ಟ್ರೀಯ ಪ್ರಜ್ಞೆಯನ್ನು ಬೆಳೆಸಲು ಭರತನಾಟ್ಯ ಸಹಕಾರಿಯಾಗಿದೆ.ಈ
ಸಂಸ್ಥೆಯ ಮೂಲಕ ಇನ್ನಷ್ಟು ಉತ್ತಮ ಕಲಾವಿದರು ರೂಪುಗೊಳ್ಳಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾದ
ಡಾ. ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ, ಭಾರತದಲ್ಲಿ ಜನಿಸಿರುವುದೇ ನಮ್ಮ ಸೌಭಾಗ್ಯ. ಇತರ ದೇಶಗಳಲ್ಲಿಯೂ ಹಾಡು ಮತ್ತು ನೃತ್ಯಗಳಿದ್ದರೂ, ಭಾರತೀಯ ಭರತನಾಟ್ಯವು ಹೃದಯಕ್ಕೆ ವಿಶಿಷ್ಟ ಕಂಪನವನ್ನು ನೀಡುವುದರ ಜತೆಗೆ ಮಾನಸಿಕ ಶಕ್ತಿಯನ್ನೂ ತುಂಬುತ್ತದೆ. ಭರತನಾಟ್ಯದಲ್ಲಿ ಹಿನ್ನೆಲೆ ಗಾಯಕರ ಪಾತ್ರವೂ ಅತ್ಯಂತ ಮಹತ್ವದ್ದಾಗಿದೆ. ಕಲಾನಿಕೇತನ ಸಂಸ್ಥೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ತರಬೇತಿ ಪಡೆದಿರುವುದು ಹೆಮ್ಮೆಯ ಸಂಗತಿ. ಸಂಸ್ಥೆ ಇನ್ನಷ್ಟು ವಿದ್ಯಾರ್ಥಿಗಳಿಗೆ ಕಲೆಯ ಬೆಳಕು ನೀಡುವುದರ ಜತೆಗೆ ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಲಿ ಎಂದು ಹಾರೈಸಿದರು.
ಪುತ್ತೂರಿನ ವಿಶ್ವಕಲಾನಿಕೇತನ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ಅಂಡ್ ಕಲ್ಚರ್ (ರಿ.) ಸಂಸ್ಥೆಯ ನಿರ್ದೇಶಕಿ, ಕರ್ನಾಟಕ ಕಲಾಶ್ರೀ ವಿದುಷಿ ನಯನಾ ವಿ. ರೈ ಅವರು ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.
ಪುತ್ತೂರಿನ ವಿಶ್ವಕಲಾನಿಕೇತನ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ಅಂಡ್ ಕಲ್ಚರ್ (ರಿ.) ಸಂಸ್ಥೆಯ ನಿರ್ದೇಶಕಿ, ಕರ್ನಾಟಕ ಕಲಾಶ್ರೀ ವಿದುಷಿ ನಯನಾ ವಿ. ರೈ ಅವರು ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.
ಗೋವಾದ ಶಿರೋಡಾದ ಗೋಮಂತಕ್ ಆಯುರ್ವೇದ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಪ್ರಾಂಶುಪಾಲರಾದ
ಡಾ. ನೀಲೇಶ್ ಪಿ. ಕೊರ್ಡೆ ಉಪಸ್ಥಿತರಿದ್ದರು.
ಇದೇ ವೇಳೆ ಕಲಾನಿಕೇತನದಲ್ಲಿ ತರಬೇತಿ ಪಡೆದು ವಿದ್ವತ್ ಪದವಿ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ನಿರ್ದೇಶಕಿ, ಗುರು ವಿದುಷಿ ವಿದ್ಯಾ ಮನೋಜ್ ಸ್ವಾಗತಿಸಿದರು. ವಿದುಷಿ ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು. ಲಕ್ಷ್ಮಣ್ ಅಗ್ರಬೈಲು ವಂದಿಸಿದರು. ಬಳಿಕ ಸಂಸ್ಥೆಯ ವಿದ್ಯಾರ್ಥಿಗಳಿಂದ ಪುಷ್ಪಾಂಜಲಿ, ರಾಮ ರಾಮಾಯಣ, ಕೃಷ್ಣಾ ಲೀಲೆ, ಮಹಿಷಮರ್ಧಿನಿ, ಅಯಗಿರಿನಂದಿನಿ, ತಿಲ್ಲಾಣ ನೃತ್ಯ ರೂಪಕ ನಡೆಯಿತು.
