ಬೊಂಡಾಲ ಶ್ರೀ ಕೋದಂಡರಾಮ ನೂತನ ಭಜನಾ ಮಂದಿರದ ಲೋಕಾರ್ಪಣೆ
ಬಂಟ್ವಾಳ: ಇಲ್ಲಿಗೆ ಸಮೀಪದ ಬೊಂಡಾಲದಲ್ಲಿ ನೂತನವಾಗಿ ನಿರ್ಮಾಣಗೊಂಡ ಕೋದಂಡರಾಮ ಭಜನಾ ಮಂದಿರದಲ್ಲಿ ಶ್ರೀ ಕೋದಂಡರಾಮ ದೇವರ ಪುನರ್ ಪ್ರತಿಷ್ಠಾಪನೆಯು ಶ್ರೀ ಶಂಕರ್ ಭಟ್ ನಾಗ್ತಿಮಾರ್ ಮತ್ತು ನರಹರಿ ಪರ್ವತದ ಅರ್ಚಕರಾದ ಪರಮೇಶ್ವರ ಮಯ್ಯರ ನೇತೃತ್ವದಲ್ಲಿ ವೈದಿಕ ವಿಧಿ ವಿಧಾನಗಳೊಂದಿಗೆ ಲೋಕಾರ್ಪಣೆಗೊಂಡಿತು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ ಭಟ್ ಕಲ್ಲಡ್ಕ ಅವರು ದೀಪ ಪ್ರಜ್ವಲನೆಗೈದು ಮಂದಿರದ ಉದ್ಘಾಟನೆಗೈದು ಮಾತನಾಡಿ, ಸನಾತನ ಹಿಂದೂ ಧರ್ಮದ ಪುನರುತ್ಥಾನಕ್ಕೆ ಭಜನಾ ಮಂದಿರಗಳು ದಾರಿ ದೀಪವಾಗಿದೆ. ಬೊಂಡಾಲ ಎಂಬ ಹಳ್ಳಿ ಪ್ರದೇಶದ ಭಜನಾ ಮಂದಿರದಲ್ಲಿ ೬೦ ವರ್ಷಗಳಿಂದ ನಿರಂತರ ಭಜನಾ ಸಂಕೀರ್ತನ ನಡೆಯುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಈ ರಾಮ ಮಂದಿರವು ಪರಿಸರದ ಹಿಂದು ಭಕ್ತರಿಗೆ ದೊಡ್ಡ ಆಸ್ತಿಯಾಗಿದ್ದು, ಶ್ರೀ ರಾಮನ ಜೀವನ ಮೌಲ್ಯಗಳನ್ನು ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಯಾವುದೇ ಪರಿಸ್ಥಿತಿಗೂ ವಿಚಲಿತರಾಗದೆ.ಏಕಾಗ್ರತೆಯಿಂದ ಜೀವನ ಸಾಧನೆ ಮಾಡಲು ರಾಮಾಯಣ ಸಹಕಾರಿಯಾಗಲಿದ್ದು ಪ್ರತಿ ಮನೆಯಲ್ಲೂ ನಿತ್ಯ ಭಜನೆ ನಡೆದಾಗ ಹಿಂದೂ ಸಮಾಜ ಸಂಘಟಗೊಳ್ಳುತ್ತದೆ ಎಂದರು.
ನೂತನ ಮಂದಿರದ ನಿರ್ಮಾಣದ ರೂವಾರಿ ಭಾಸ್ಕರ್ ಬೊಂಡಾಲ ಹಾಗೂ ಶ್ರೀಮತಿ ದುರ್ಗಾ, ಹಿರಿಯರಾದ ಸಂಜೀವ ಪುಷ್ಪ, ಪಧ್ಮನಾಭ ಜಯಂತಿ, ಉಮಾನಾಥ ನಾಯಕ್, ಭಾಸ್ಕರ ನಾಯಕ್, ಮಾಜಿ ಪುರಸಭಾ ಸದಸ್ಯರಾದ ಜನಾರ್ಧನ ಬೊಂಡಾಲ, ಹಿರಿಯ ಭಜನಾ ಸಂಕೀರ್ತನರಾದ ಶಿವರಾಂ ಪುತ್ತೂರು, ಚೇತನ್ ಟೈಲರ್ ಹಾಗೂ ಎಂ.ಎನ್.ಕುಮಾರ್ ಮುಂತಾದವರು ಉಪಸ್ಥಿತರಿದ್ದರು. ೧೭ ತಂಡಗಳಿಂದ ಅಹೋ ರಾತ್ರಿ ಭಜನಾ ಸಂಕೀರ್ತನೆ ನಡೆಯಿತು.