ದಶಂಬರ್ 21 ರಂದು ಕಲ್ಲಡ್ಕ ಶ್ರೀರಾಮದಲ್ಲಿ ಹೊನಲು ಬೆಳಕಿನ ಕ್ರೀಡೋತ್ಸವ ಸಂಸದ ಯದುವೀರ್ ಸಹಿತ ಹಲವಾರು ಗಣ್ಯರು ಭಾಗಿ
ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಹೊನಲು ಬೆಳಕಿನ ಶಾರೀರಿಕ ಹಾಗೂ ಸಾಂಸ್ಕೃತಿಕ ವೈವಿಧ್ಯಮಯ ಕ್ರೀಡೋತ್ಸವವು ದಶಂಬರ್ 21 ರಂದು ಸಂಜೆ 6 ಗಂಟೆಯ ಬಳಿಕ ಹನುಮಾನ್ ನಗರದ ವಿಶಾಲ ಮೈದಾನದಲ್ಲಿ ನಡೆಯಲಿದ್ದು, ಈ ಬಾರಿ ವಿಶೇಷ ಅತಿಥಿಯಾಗಿ ಮೈಸೂರು ಸಂಸ್ಥಾನ ರಾಜವಂಶಸ್ಥರು,ಸಂಸದರು ಆದ ಯದುವೀರ ಕೃಷ್ಣದತ್ತ ಒಡೆಯರ್ ಭಾಗವಹಿಸಲಿದ್ದಾರೆ ಎಂದು ಪುತ್ತೂರು ಶ್ರೀ ವಿವೇಕಾಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ತಿಳಿಸಿದ್ದಾರೆ.

ಶುಕ್ರವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ನಿರಂತರ ಎರಡೂವರೆ ತಾಸುಗಳ ಕಾಲ ನಡೆಯಲಿರುವ ಈ ಕ್ರೀಡೋತ್ಸವದಲ್ಲಿ ವಿಶೇಷ ಚೇತನ ಮಕ್ಜಳು ಸೇರಿದಂತೆ ಶಿಶುಮಂದಿರ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪ.ಪೂ. ಹಾಗೂ ಪದವಿ ತರಗತಿಗಳ ಒಟ್ಟು 4000 ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲಿದ್ದಾರೆ ಎಂದರು.
ವಿದ್ಯಾರ್ಥಿಗಳಿಂದ ಪಥಸಂಚಲನ, ಶಿಶುನೃತ್ಯ, ಘೋಷ್ ವಾದನ, ಜಡೆಕೋಲಾಟ, ನಿಯುದ್ಧ, ದೀಪಾರತಿ, ಯೋಗಾಸನ, ಪ್ರಾಥಮಿಕ ವಿದ್ಯಾರ್ಥಿಗಳ ಸಾಮೂಹಿಕ ಪ್ರದರ್ಶನ, ನೃತ್ಯ ಭಜನೆ, ಮಲ್ಲಕಂಬ, ಘೋಷ್‌ಟಿಕ್‌ಟಿಕ್ ಪ್ರದರ್ಶನ, ನೃತ್ಯ ವೈವಿಧ್ಯ, ದ್ವಿಚಕ್ರ-ಏಕಚಕ್ರಸಮತೋಲನ, ಬೆಂಕಿ ಸಾಹಸ, ಕೇರಳದ ಚೆಂಡೆ ವಾದ್ಯ, ಕಾಲ್ಚಕ್ರ, ಕೂಪಿಕಾ ಸಮತೋಲನ, ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ರಾಷ್ಟ್ರೀಯ ಭಾವೈಕ್ಯತೆಯನ್ನು ಸಾರುವ ಆಕರ್ಷಕ ಸಾಮೂಹಿಕ ರಚನೆ ಸೇರಿದಂತೆ 19 ವೈಶಿಷ್ಟ್ಯಪೂರ್ಣ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ ಎಂದು ಅವರು ವಿವರಿಸಿದರು.
ಸಂಜೆ ನಿಗದಿತ ಸಮಯ 6.15 ಕ್ಕೆ ಪ್ರದರ್ಶನ ಆರಂಭವಾಗಲಿದ್ದು, ಚಿತ್ರನಟ, ನಿರ್ಮಾಪಕ ಪ್ರಕಾಶ್ ಬೆಳವಾಡಿ, ಉದ್ಯಮಿಗಳಾದ ಮನೋಜ್ ಸಿಂಗ್, ಸೀಮಾ ಬಿ.ಆರ್. ಶೆಟ್ಟಿ, ಡಾ. ವಿಜಯ ಜಿ.ಕಲಾಂತ್ರಿ, ಸಿ.ರವಿಕಾಂತ್, ಸಂಪತ್ ಶೆಟ್ಟಿ, ಪತ್ರಕರ್ತ ಉಮೇಶ್ ರಘುವಂಶಿ, ಡಾ.ಶಿಶಿರ್ ಶೆಟ್ಟಿ ಸಹಿತ ವಿವಿಧ ಕ್ಷೇತ್ರದ ಪ್ರಮುಖರು, ಗಣ್ಯರು ಸಹಿತ 100 ಕ್ಕು ಅಧಿಕ ಮಂದಿ ಅತಿಥಿಗಳು ಕ್ರೀಡೋತ್ಸವದಲ್ಲಿ ಭಾಗವಹಿಸುವರು ಎಂದು ಡಾ. ಭಟ್ ಮಾಹಿತಿ ನೀಡಿದರು.
ಶ್ರೀರಾಮ ವಿದ್ಯಾ ಸಂಸ್ಥೆಯಲ್ಲಿ ಮಾನವೀಯ ಮೌಲ್ಯಗಳೊಂದಿಗೆ ವಿದ್ಯಾರ್ಥಿಗಳಲ್ಲಿ ದೈಹಿಕ,ಬೌದ್ದಿಕ,ಅದ್ಯಾತ್ಮಿಕ ಸಾಮಥ್ಯ೯ವನ್ನು ಬೆಳೆಸುವುದರೊಂದಿಗೆ ರಾಷ್ಟ್ರೀಯ ಚಿಂತನೆಯ ಸಂಸ್ಕಾರ ನೀಡುವ ಸಂಕಲ್ಪದೊಂದಿಗೆ ಬೆಳೆದುಬಂದಿದೆ ಎಂದ ಅವರು ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾದ ಶಿಕ್ಷಣವನ್ನು ಮೊದಲಿನಿಂದಲೂ ಬೋಧಿಸಲಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ರಸಾದ್ ಕಾಯರ್ ಕಟ್ಟೆ ಮತ್ತಿತರರು ಉಪಸ್ಥಿತರಿದ್ದರು



