ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನ: ನೂತನ ಶಿಲಾಮಯ ಮೆಟ್ಟಿಲಿನ ಲೋಕಾರ್ಪಣೆ
ಬಂಟ್ವಾಳ: ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನಕ್ಕೆ ಸಂಬಂಧಪಟ್ಟ ಶಾಂತಿಗುಡ್ಡೆ ಶ್ರೀ ರಕ್ತೇಶ್ವರೀ ದೈವವು ಜಾತ್ರೆಯ ಸಂದರ್ಭದಲ್ಲಿ ವಲಸರಿ ಇಳಿದು ಬರುವುದಕ್ಕೆ ನೂತನವಾಗಿ ನಿರ್ಮಿಸಿದ ಶಿಲಾಮಯ ಮೆಟ್ಟಿಲಿನ ಲೋಕಾರ್ಪಣಾ ಸಮಾರಂಭವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು.ದೇವಸ್ಥಾನದ ತಂತ್ರಿಗಳಾದ ದಿನೇಶಕೃಷ್ಣ ತಂತ್ರಿ ವರ್ಕಾಡಿ ಅವರ ನೇತೃತ್ವದಲ್ಲಿ ಪ್ರಧಾನ ಅರ್ಚಕ ಶಂಕರನಾರಾಯಣ ಹೊಳ್ಳ, ಪುರೋಹಿತ ವಿಜಯಕೃಷ್ಣ ಐತಾಳ್ ಪುಂಜೂರು, ಅರ್ಚಕ ಜಯರಾಮ ಕಾರಂತ ಅವರು ವೈದಿಕ ವಿಧಿ ನೆರವೇರಿಸಿದರು. ಡಿ. ೮ರ ರಾತ್ರಿ ವಾಸ್ತುಪೂಜೆ, ಮಂಗಳವಾರ ಬೆಳಗ್ಗೆ ಪ್ರಾರ್ಥನೆ, ಲೋಕಾರ್ಪಣೆ, ಮಹಾಪೂಜೆ ನಡೆದು ಮೆಟ್ಟಿಲುಗಳ ಸೇವಾರ್ಥಿಗಳಿಗೆ ಮಹಾಪ್ರಸಾದ ವಿತರಿಸಲಾಯಿತು.

ಸಮಾರಂಭದಲ್ಲಿ ಕಲ್ಕೊಟ್ಟೆ ರತ್ನಾ ಮತ್ತು ರಾಮಣ್ಣ ಶೆಟ್ಟಿ ಮನೆಯವರಿಂದ ಶ್ರೀ ರಕ್ತೇಶ್ವರೀ ದೈವಕ್ಕೆ ಸೇವಾರೂಪವಾಗಿ ಬೆಳ್ಳಿಯ ಖಡ್ಸಲೆಯನ್ನು ಸಮರ್ಪಿಸಲಾಯಿತು. ಲೋಕಾರ್ಪಣೆಯಲ್ಲಿ ಮಾವಂತೂರು ಶ್ರೀ ಬ್ರಹ್ಮಬಲಾಂಡಿ ಕ್ಷೇತ್ರದ ಗಡಿಪ್ರಧಾನರಾದ ದುರ್ಗಾದಾಸ್ ಶೆಟ್ಟಿ ಮಾವಂತೂರು, ಬಿ.ಸಿ.ರೋಡು ರಬ್ಬರ್ ಮತ್ತು ಜೇನು ವ್ಯವಸಾಯಗಾರರ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಗುಣಶೇಖರ ಪೂಜಾರಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ ಬದಿಗುಡ್ಡೆ ಮೊದಲಾದ ಗಣ್ಯರು, ಆಡಳಿತ, ಜೀರ್ಣೋದ್ಧಾರ ಸಮಿತಿ ಪ್ರಮುಖರು ಪಾಲ್ಗೊಂಡಿದ್ದರು.



