ಅಡಕೆ ಎಲೆ ಹಳದಿ ಸಂತ್ರಸ್ತ ರೈತರ ಸ್ವಯಂಘೋಷಿತ ಅರ್ಜಿಯ ಆಧಾರದಲ್ಲಿ ವರದಿ ಬಿಡುಗಡೆ, ಹಕ್ಕೊತ್ತಾಯ ಮಂಡನೆ
ಬಂಟ್ವಾಳ: ಅಡಕೆ ಎಲೆ ಹಳದಿ ಸಂತ್ರಸ್ತ ರೈತರ ಸ್ವಯಂಘೋಷಿತ ಅರ್ಜಿಯ ಆಧಾರದಲ್ಲಿ ವರದಿ ಬಿಡುಗಡೆ ಮತ್ತು ಹಕ್ಕೊತ್ತಾಯ ಮಂಡನೆ ಹಾಗೂ ತಾಂತ್ರಿಕ ಕಾರ್ಯಾಗಾರ ಬಿ.ಸಿ.ರೋಡಿನ ಹೋಟೆಲ್ ರಂಗೋಲಿ ಸಭಾಂಗಣದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ರೈತಸಂಘ, ಯುವ ಘಟಕ ಮತ್ತು ಪೃಥ್ವಿ ಪ್ರತಿಷ್ಠಾನ ಆಶ್ರಯದಲ್ಲಿ ನಡೆಯಿತು.
ಈ ಸಂದರ್ಭ ಕೃಷಿ ಆರ್ಥಿಕ ತಜ್ಞ ಮತ್ತು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ ಪ್ರಕಾಶ್ ಕಮ್ಮರಡಿ ದಿಕ್ಸೂಚಿ ವಿಷಯ ಮಂಡನೆ ಮಾಡಿದರು. ಅಡಕೆ ಎಲೆ ಹಳದಿ ರೋಗದ ವ್ಯಾಪ್ತಿ ವಿಸ್ತಾರಗಳನ್ನು ವಿವರಿಸಿದ ಅವರು ಪ್ರಸ್ತುತ ಸನ್ನಿವೇಶದಲ್ಲಿ ಬೆಳೆಗಾರ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿವರಿಸಿದರು.
ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ವಹಿಸಿದ್ದರು. ಕರ್ನಾಟಕ ರಾಜ್ಯ ರೈತಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ, ಹಣಕಾಸು ಮತ್ತು ಆರ್ಥಿಕ ತಜ್ಞ ಜೀವಿ ಸುಂದರ್, ಕರ್ನಾಟಕ ರಾಜ್ಯ ರೈತ ಸಂಘದ ಯುವ ಘಟಕದ ರಾಜ್ಯ ಸಂಚಾಲಕ ಆದಿತ್ಯನಾರಾಯಣ ಕೊಲ್ಲಾಜೆ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡೀಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮನಾಥ ಶೆಟ್ಟಿ ಬಾಳ್ತಿಲ, ಪ್ರಾಂತ ರೈತಸಂಘದ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಸಾಲ್ಯಾನ್, ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ವಿಟ್ಲ, ಜಿಲ್ಲಾ ಕಾರ್ಯದರ್ಶಿ ಡಿ.ಕೆ.ಶಾಹುಲ್ ಹಮೀದ್, ಪ್ರಮುಖರಾದ ನಾರಾಯಣಸ್ವಾಮಿ ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಪ್ರಾಸ್ತಾವಿಕವಾಗಿ ಮಾತನಾಡಿ, ಸುಳ್ಯ, ಮಲೆನಾಡು ಭಾಗಗಳಲ್ಲಿ ಸುಮಾರು ಆರು ಸಾವಿರ ಹೆಕ್ಟೇರ್ ವಿಸ್ತೀರ್ಣಕ್ಕೆ ಎಲೆ ಹಳದಿ ರೋಗವಿದ್ದು, ಸಮಸ್ಯೆಗೊಳಗಾದ ರೈತರಿಗೆ ಆರ್ಥಿಕ ಪುನಶ್ಚೇತನ ಅಗತ್ಯವಾಗಿದೆ ಎಂದರು.