ಕಂಬಳ ಕ್ಷೇತ್ರದ ನವೀನ್ಚಂದ್ರ ಆಳ್ವರ ಪುತ್ರ, ಉದ್ಯಮಿ ನದಿಗೆ ಹಾರಿ ಆತ್ಮಹತ್ಯೆ
ಗುರುಪುರ : ವಾಮಂಜೂರು ತಿರುವೈಲುಗುತ್ತು ನಿವಾಸಿ, ತಿರುವೈಲು ಕಂಬಳ ಸಂಘಟಕ ನವೀನ್ಚಂದ್ರ ಆಳ್ವ ತಿರುವೈಲುಗುತ್ತು ಅವರ ಹಿರಿಯ ಪುತ್ರ, ಹೋಟೆಲ್ ಉದ್ಯಮಿ ಅಭಿಷೇಕ್ ಯಾನೆ ಅಭಿ(೨೯) ಅವರು ಮೂಲ್ಕಿಗೆ ಹತ್ತಿರದ ಶಾಂಭವಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಶುಕ್ರವಾರ ತಿರುವೈಲುಗುತ್ತಿನ ಪಕ್ಕದ ತೋಟದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.

ಆತ್ಮಹತ್ಯೆಗೆ ಕಾರಣಗಳು ಇನ್ನಷ್ಟೇ ತಿಳಿದು ಬರಬೇಕಿದೆ. ಬುಧವಾರ ಸಂಜೆ ನದಿಗೆ ಹಾರಿರುವ ಸಾಧ್ಯತೆ ಇದ್ದು, ಗುರುವಾರ ಅಭಿಷೇಕ್ ಬಳಸುತ್ತಿದ್ದ ಕಾರು ಶಾಂಭವಿ ನದಿ ಸೇತುವೆ ಪಕ್ಕದಲ್ಲಿ ಇರುವುದು ಕಂಡು ಬಂತು. ಬಳಿಕ ತಂದೆ ನವೀನ್ಚಂದ್ರ ಆಳ್ವ ಅವರು ಪಡುಬಿದ್ರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಗುರುವಾರ ಸಂಜೆ ನದಿಯಲ್ಲಿ ಶವಕ್ಕಾಗಿ ಹುಡುಕಾಟ ನಡೆಸಲಾಗಿದ್ದು, ಶುಕ್ರವಾರ ಮುಂಜಾನೆ ಶಾಂಭವಿ ನದಿಯ ಕುದ್ರುವಿನ ಬಳಿ ಶವ ಪತ್ತೆಯಾಗಿದೆ. ಪಡುಬಿದ್ರೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಧ್ಯಾಹ್ನ ಸುಮಾರು ೨ ಗಂಟೆಗೆ ವಾಮಂಜೂರು ತಿರುವೈಲಿನಲ್ಲಿರುವ ನವೀನ್ಚಂದ್ರ ಆಳ್ವ ತಿರುವೈಲುಗುತ್ತು ಅವರ ಮನೆಗೆ ಪುತ್ರ ಅಭಿಷೇಕ್ ಅವರ ಶವ ತರಲಾಯಿತು. ಮೃತದೇಹದ ಅಂತ್ಯ ಸಂಸ್ಕಾರ ಮನೆಗೆ ಹತ್ತಿರದ ತೋಟದಲ್ಲಿ ನಡೆಯಿತು. ಸಾವಿರಾರು ಅಭಿಮಾನಿಗಳು ಇದ್ದರು.
ಅಭಿಷೇಕ್ನ ಸಹೋದರ, ತಾಯಿ, ಕುಟುಂಬಿಕರು, ನವೀನ್ಚಂದ್ರ ಆಳ್ವ, ಸಹೋದರ ಮನಪಾ ವಿಪಕ್ಷ ಮಾಜಿ ನಾಯಕ ಪ್ರವೀಣ್ಚಂದ್ರ ಆಳ್ವ ತಿರುವೈಲುಗುತ್ತು, ಕೆಎಂಎಫ್ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ, ಕಂಬಳ ಕ್ಷೇತ್ರದ ಗಣ್ಯರು, ರಾಜಕೀಯ ನಾಯಕರು ಆಗಮಿಸಿದ್ದರು.



