ಇಸ್ಲಾಮಾಬಾದ್: ಮೇ 26ರಂದು ನರೇಂದ್ರ ಮೋದಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಬರಲು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಆಗಮಿಸಲಿದ್ದಾರೆ. ಈ ಹಿಂದೆ, ಭಾರತದ ಯಾವುದೇ ಪ್ರಧಾನಿಯ ಪ್ರಮಾಣವಚನ ಸಮಾರಂಭದಲ್ಲಿ ಪಾಕ್ ಮುಖ್ಯಸ್ಥರೊಬ್ಬರ ಉಪಸ್ಥಿತಿ ಇರಲಿಲ್ಲ.

2008ರಲ್ಲಿ ಮುಂಬೈ ದಾಳಿ ಘಟನೆ ನಡೆದ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಸ್ವಲ್ಪ ಹದಗೆಟ್ಟಿದೆ. ಗಡಿಭಾಗದಲ್ಲಿ ಪಾಕಿಸ್ತಾನ ನಿರಂತರವಾಗಿ ಕ್ಯಾತೆ ತೆಗೆಯುತ್ತಿದೆ. ಇದರಿಂದಾಗಿ ಎರಡೂ ರಾಷ್ಟ್ರಗಳ ಶಾಂತಿ ಮಾತುಕತೆಯ ಪ್ರಕ್ರಿಯೆಗೆ ಅಡ್ಡಿಯಾಗುತ್ತಲೇ ಇದೆ.
ಈ ಹಿನ್ನೆಲೆಯಲ್ಲಿ, ಪಾಕ್ ಪ್ರಧಾನಿಯನ್ನ ಸಮಾರಂಭಕ್ಕೆ ಆಹ್ವಾನಿಸುವ ನರೇಂದ್ರ ಮೋದಿಯ ನಿರ್ಧಾರ ನಿಜಕ್ಕೂ ದಿಟ್ಟವಾಗಿದೆ. ಪಾಕಿಸ್ತಾನ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದೆ.
ಆದರೆ, ವಾಜಪೇಯಿ ಆಡಳಿತದಲ್ಲಿ ಲಾಹೋರ್’ಗೆ ಬಸ್ ಬಿಟ್ಟು ಶಾಂತಿ ಪ್ರಯತ್ನಕ್ಕೆ ಭಾರತ ಮುಂದಾದರೂ ಪಾಕಿಸ್ತಾನೀಯರು ಕಾರ್ಗಿಲ್ ಯುದ್ಧ ಮಾಡಿ ಬೆನ್ನಿಗೆ ಚೂರಿ ಹಾಕಿದ್ದರು. ಈಗಲೂ ಪಾಕಿಸ್ತಾನ ಅಂಥದ್ದೇ ಕೆಲಸ ಮಾಡಿದರೆ ಎಂಬ ಅನುಮಾನ ಹುಟ್ಟದೇ ಇರುವುದಿಲ್ಲ.
ಒಟ್ಟಿನಲ್ಲಿ, ಮೋದಿ ಅವಧಿಯಲ್ಲಾದರು ಭಾರತ ಮತ್ತು ಪಾಕಿಸ್ತಾನ ನಡುವೆ ನಿಜವಾಗಿಯೂ ಶಾಂತಿ ವಾತಾವರಣ ನಿರ್ಮಾಣವಾದೀತೆಂದು ಆಶಿಸೋಣ.
