ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಚೀನಾದ ಅಧ್ಯಕ್ಷ ಜಿನ್‌ಪಿಂಗ್ 3ನೇ ಅವಧಿಗೆ ಮರು ಆಯ್ಕೆ
ಬೀಜಿಂಗ್: ಚೀನಾದ (China) ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Xi Jinping) ಅವರು ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ದಾಖಲೆಯ 3ನೇ ಅವಧಿಗೆ ಭಾನುವಾರ ಮರು ಆಯ್ಕೆಯಾಗಿದ್ದಾರೆ.
ಪಕ್ಷದ ಅಧಿಕೃತ ನಿವೃತ್ತಿಯ ವಯಸ್ಸು 68 ಆಗಿದ್ದರೂ 69 ವರ್ಷದ ಜಿನ್‌ಪಿಂಗ್ ಈಗಾಗಲೇ 10 ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ್ದಾರೆ. ಆದರೂ ಮತ್ತೆ 5 ವರ್ಷದ ಅವಧಿಗೆ ಕಾಂಗ್ರೆಸ್‌ನಿಂದ 1 ದಿನದ ಮುಂಚಿತವಾಗಿಯೇ ಪ್ರಬಲ ಕೇಂದ್ರ ಸಮಿತಿಗೆ ಆಯ್ಕೆಯಾಗಿದ್ದಾರೆ.
ಚೀನಾದ 2ನೇ ನಾಯಕ ಪ್ರೀಮಿಯರ್ ಲಿ ಕೆಕಿಯಾಂಗ್ ಸೇರಿದಂತೆ ಹಲವು ಹಿರಿಯ ನಾಯಕರು ಈಗಾಗಲೇ ನಿವೃತ್ತರಾಗಿದ್ದಾರೆ. ಅವರಾರಿಗೂ ಕೇಂದ್ರ ಸಮಿತಿಗೆ ಪ್ರವೇಶಿಸಲು ಸಾಧ್ಯವಾಗದೇ ಹೋಗಿದ್ದು, ಇದೀಗ ಚೀನಾದ ರಾಜಕೀಯ ಹಾಗೂ ಸರ್ಕಾರ ಹಾದಿ ತಪ್ಪುವ ಭೀತಿಯಲ್ಲಿದೆ.
ಕೋವಿಡ್ ಹಾವಳಿಯ ಹಿನ್ನೆಲೆ ಕಠಿಣ ಕ್ರಮಗಳನ್ನು ಜಾರಿಗೊಳಿಸಿದ್ದ ಸರ್ಕಾರದ ವಿರುದ್ಧ ಚೀನಾದ ಜನತೆ ಕೆಲ ದಿನಗಳ ಹಿಂದೆ ಅಲ್ಲಲ್ಲಿ ಪ್ರತಿಭಟಿಸಿರುವುದಾಗಿ ವರದಿಯಾಗಿದೆ. ಕ್ಸಿ ಜಿನ್‌ಪಿಂಗ್‌ರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವಂತೆ ಒತ್ತಡ ಹಾಕಲಾಗಿದೆ ಎಂದೂ ಹೇಳಲಾಗಿದೆ. ಆದರೂ ಅಂತಹ ಯಾವುದೇ ಸರ್ಕಾರಿ ವಿರೋಧಿ ಚಟುವಟಿಕೆಗಳು ನಡೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೀಗ 3ನೇ ಅವಧಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಜಿನ್‌ಪಿಂಗ್ ಪಕ್ಷದ ಸಂಸ್ಥಾಪಕ ಮಾವೋ ಝೆಡಾಂಗ್ ನಂತರದ ಅತ್ಯಂತ ಶಕ್ತಿಶಾಲಿ ನಾಯಕರಾಗಿ ಹೊರಹೊಮ್ಮಿದ್ದಾರೆ.