ಬಜಪೆ: ಹವ್ಯಾಸಿಯಾಗಿಯಷ್ಟೇ ಅಲ್ಲ, ವೃತ್ತಿ ಕಲಾವಿದನಾಗಿ ಯಕ್ಷಗಾನಕ್ಕಾಗಿ ಒದ್ದಾಡುತ್ತಿದ್ದ, ಕಲೆಯಿಂದಲೇ ನಮ್ಮ ಬದುಕು ಎಂದು ನಂಬಿಕೊಂಡಿದ್ದ ಅಶೋಕ ಕೊಲಕಾಡಿ ದುರಂತ ಅಂತ್ಯ ಕಂಡಿರುವುದು ನಂಬಲಾಗದ ಸತ್ಯ.
ಕಲಿತದ್ದು ಬಿಕಾಂ, ಮೂಲ್ಕಿಯ ವಿಜಯಾ ಕಾಲೇಜಿನಲ್ಲಿ. ಶಾಲಾ ದಿನಗಳಿಂದಲೇ ನಾಟಕ, ಯಕ್ಷಗಾನದ ಹುಚ್ಚು. ಪುತ್ತೂರು ಮೇಳದ ಅಷ್ಟಮಂಗಳ ಪ್ರಸಂಗದಲ್ಲಿ ವೃತ್ತಿ ಕಲಾವಿದರಾಗಿ ಸೇರ್ಪಡೆಗೊಂಡು ಪ್ರಸಿದ್ಧಿಗೆ ಬಂದರು.
ಕೊಲಕಾಡಿಯ ಶಿವಪ್ಪ ಹಾಗೂ ಸುಮತಿ ದಂಪತಿಗಳ ಸುಪುತ್ರನಾಗಿ ಜನಿಸಿದ ಇವರು ಯಕ್ಷಗಾನ ಹಾಗೂ ನಾಟಕ ರಂಗದಲ್ಲಿ ಬಹುಬೇಡಿಕೆಯ ಕಲಾವಿದರಾಗಿದ್ದರು. ಒಂದು ಸಾವಿರದ ಇನ್ನೂರಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದ ಇವರು ಶಿಲ್ಪಾ, ಕಡೀರಮಗೆ, ಅಜ್ಜಿಗೇರ‍್ಲಾ ಇಜ್ಜಿ, ಒರ ಪೋಪನಾ, ಏಪ ಸುಧಾರುವರಾ ನಾಟಕಗಳಲ್ಲಿ ನೂರಾರು ಬಾರಿ ಕಥಾನಾಯಕಿಯಾಗಿ ಅಭಿನಯಿಸಿ ಜನಪ್ರಿಯರಾದವರು. ವಿಜಯಾ ಕಲಾವಿದರು, ಪಂಜಿನಡ್ಕ, ಕೆರೆಕಾಡು ಇತ್ಯಾದಿ ನಾಟಕ ತಂಡಗಳಲ್ಲಿ ನಟನಾಗಿ ಪ್ರಸಿದ್ದಿಯಾಗಿದ್ದರು.
ashok kolakadi3

 

ashok kolakadi1 (1)

ashok kolakadi 2ಹವ್ಯಾಸಿಯಾಗಿ ಯಕ್ಷಗಾನ ರಂಗದಲ್ಲಿ ಮಿಂಚುತ್ತಿದ್ದ ಇವರು ಕಾಲೇಜು ಬಳಿಕ ಪುತ್ತೂರು, ಎಡನೀರು, ಮಂಗಳಾದೇವಿ, ಕದ್ರಿ, ಕುಂಟಾರು ಮೇಳಗಳಲ್ಲಿ ಕಲಾವಿದರಾಗಿ ದುಡಿದರು. ಬಪ್ಪನಾಡು ಮೇಳದ ಸಂಚಾಲಕರಾಗಿಯೂ ಎರಡು ವರ್ಷಗಳ ಕಾಲ ಮೇಳ ನಡೆಸಿದ ಅನುಭವಿ. ಪ್ರಸ್ತುತ ಹೊಯ್ಗೆಗುಡ್ಡೆ ಉಮಾಮಹೇಶ್ವರ ಮೇಳವನ್ನು ಜೊತೆಗೆ ಚಿಕ್ಕ ಮೇಳವನ್ನು ಶಂಭುಕುಮಾರ್ ಜೊತೆಗೆ ನಡೆಸುತ್ತಿದ್ದರು. ಅನೇಕ ಯಕ್ಷಗಾನ, ನಾಟಕ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪುರಸ್ಕೃತರಾದ ಇವರು ಕಲಾಸಕ್ತ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಗತಿಯನ್ನೂ ನಡೆಸಿದವರು. ತಾಳಮದ್ದಲೆ ರಂಗದಲ್ಲೂ ಬೆಳಗುತ್ತಿದ್ದ ಅವರು ಶನಿಪೂಜೆಯಲ್ಲಿ ಅಲೋಲಿಕೆ, ಸುಶೀಲೆ, ಪದ್ಮಾವತಿಯಾಗಿ ಅತ್ಯುತ್ತಮವಾಗಿ ಪಾತ್ರ ನಿರ್ವಹಿಸುತ್ತ, ಬಹುಬೇಡಿಕೆಯನ್ನು ಪಡೆದಿದ್ದರು. ಸತ್ಯಹರಿಶ್ಚಂದ್ರದಲ್ಲಿ ಇವರ ಚಂದ್ರಮತಿ ಪ್ರೇಕ್ಷಕರ ಕಣ್ಣಲ್ಲಿ ನೀರು ಬರಿಸುವಷ್ಟು ಮನೋಜ್ಞವಾಗಿರುತ್ತಿತ್ತು.
ಬದುಕಿಗಾಗಿ ಹೋರಾಡುತ್ತ, ಯಕ್ಷಗಾನ ಕ್ಯಾಸೆಟ್, ಸಿಡಿ, ಟಿಕೇಟು ಆಟಗಳ ಸಂಘಟನೆ, ಯಕ್ಷಗಾನ ಮೇಳ ಹೀಗೆ ಜೀವದ ಗೆಳೆಯ ಶಂಭುಕುಮಾರ್ ಜೊತೆಗೂಡಿ ಮಾಡಿದ ಪ್ರಯತ್ನಗಳು, ಉದ್ಯೋಗಗಳು ಒಂದೆರಡಲ್ಲ. ಜೊತೆಗೆ ಆಟಕೂಟ ನಾಟಕಗಳಲ್ಲಿ ನಿದ್ದೆಗೆಟ್ಟು ಸದಾ ಸಕ್ರಿಯರಾಗಿಯೇ ಇರುತ್ತಿದ್ದ ಅಶೋಕರಿಗೆ ಕಳೆದ ಜನವರಿಯಲ್ಲಷ್ಟೇ ಮದುವೆಯಾಗಿತ್ತು.
ಮಳೆಗಾಲ ಆರಂಭವಾಗುತ್ತಿದ್ದಂತೆ ಚಿಕ್ಕಮೇಳವನ್ನು ಹುಟ್ಟುಹಾಕಿ ಎರಡು ತಂಡಗಳಲ್ಲಿ ಸಂಜೆ ಹೊತ್ತು ಮನೆಮನೆಗೆ ಮೇಳ ಕರೆದೊಯ್ಯುತ್ತಿದ್ದ ಇವರು ದೀಪಾವಳಿಯ ಹೊತ್ತಿಗೆ ಅಂದರೆ ಇತರ ಮೇಳಗಳು ಹೊರಡುವ ಹೊತ್ತಿಗೆ ಚಿಕ್ಕಮೇಳದ ಪ್ರದರ್ಶನ ನಿಲ್ಲಿಸುತ್ತಿದ್ದರು. ಅದರಂತೆ ಇನ್ನು ಒಂದೆರಡು ದಿನಗಳಲ್ಲಿ ಈ ವರುಷದ ಚಿಕ್ಕ ಮೇಳ ತನ್ನ ಪ್ರದರ್ಶನವನ್ನು ನಿಲ್ಲಿಸಬೇಕಿತ್ತು. ಆದರೆ ಅಶೋಕ ಕೊಲಕಾಡಿ ತಮ್ಮ ಬದುಕನ್ನು ನಿಲ್ಲಿಸಿದ್ದಾರೆ. ನಡುಗೋಡು ಕೊಡೆತ್ತೂರು ಬಳಿ ಸೋಮವಾರ ಸಂಜೆ ನಾಲ್ಕೈದು ಮನೆಗಳಲ್ಲಿ ಚಿಕ್ಕಮೇಳದ ಪ್ರದರ್ಶನ ನೀಡುತ್ತ ಹೋಗುತ್ತಿದ್ದಂತೆ ಹಾದಿಮಧ್ಯೆ ಹಾವೊಂದು ಕಡಿದಿದೆ. ಬಹುಶ ಆ ಸಂದರ್ಭ ಹೆದರಿರಬೇಕು. ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭ ಎರಡು ದಶಕಗಳ ಯಕ್ಷಪಯಣವನ್ನಷ್ಟೇ ಅಲ್ಲ, ಬದುಕಿನ ಪುಸ್ತಕವನ್ನೇ ಮುಚ್ಚಿ ಹೊರಟು ಹೋಗಿದ್ದಾರೆ. ಅತ್ಯಂತ ಪ್ರತಿಭಾನ್ವಿತ, ದುರದೃಷ್ಟಗಳ ಮಧ್ಯೆ ಬದುಕಿಗಾಗಿ ಪ್ರಯತ್ನಗಳನ್ನು ಮಾಡುತ್ತ ಸಾಧನೆಗಳನ್ನು ಗೈಯುತ್ತಿದ್ದ ಮೂವತ್ತೆಂಟರ ಪ್ರತಿಭಾನ್ವಿತ ಯುವಕ ಅಶೋಕ ಕೊಲಕಾಡಿ ಇನ್ನು ನೆನಪು ಮಾತ್ರ.
ದೀಪಾವಳಿಯ ಹೊತ್ತಿಗೆ ಯಕ್ಷಬೆಳಕಿನ ಒಂದು ಕಿರಣ ದಿಗಂತದೊಂದಿಗೆ ಲೀನವಾಗಿದೆ.

By suddi9

Leave a Reply

Your email address will not be published. Required fields are marked *