ಬಜ್ಪೆ: ಬಜ್ಪೆ ಠಾಣಾ ವ್ಯಾಪ್ತಿಯ ಪಡುಪೆರಾರ ಬ್ರಹ್ಮ ಬಲಾಂಡಿ ದೈವಸ್ಥಾನದ ಸಮೀಪ ಆಟದ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ಯುವಕರ ಮೇಲೆ ಭಿನ್ನಕೋಮಿಗೆ ಸೇರಿದ ಯುವಕರು ದಾಳಿ ನಡೆಸಿ ಹೊಡೆದಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಬಜ್ಪೆ ಠಾಣಾ ಎಸ್.ಐ. ರಮೇಶ್ ಹಾನಾಪುರ ನೇತೃತ್ವದ ಪೊಲೀಸ್ ತಂಡ ಇಬ್ಬರನ್ನು ವಶಕ್ಕೆ ಪಡೆದುಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಬಂಧಿತರನ್ನು ಬಡಕಬೈಲ್ ನಿವಾಸಿ ಮುನೀರ್(17), ಕರಿಯಂಗಳ ನಿವಾಸಿ ಮುಹಮ್ಮದ್ ಶಬೀಬ್(20) ಎಂದು ಹೆಸರಿಸಲಾಗಿದೆ.
ಘಟನೆಯ ವಿವರ: ಆದಿತ್ಯವಾರ ಸಂಜೆ ಮೈದಾನದಲ್ಲಿ ಸ್ಥಳೀಯ ಯುವಕರು ಕ್ರಿಕೆಟ್ ಆಡುತ್ತಿದ್ದು ಈ ವೇಳೆ ಮುನೀರ್, ಶಬೀಬ್ ಹಾಗೂ ಇತರ ಎಂಟು ಮಂದಿಯ ತಂಡ ಬೈಕ್ಗಳಲ್ಲಿ ಆಗಮಿಸಿ ಏಕಾಏಕಿ ಯುವಕರ ಮೇಲೆ ಮರದ ಸೋಂಟೆ, ಪಂಚ್ನಿಂದ ಹಲ್ಲೆ ನಡೆಸಿತ್ತು. ಈ ಬಗ್ಗೆ ತಕ್ಷಣವೇ ಬಜ್ಪೆ ಪೊಲೀಸರಿಗೆ ಮಾಹಿತಿ ದೊರೆತಿದ್ದು ಅವರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಉಳಿದವರು ಪರಾರಿಯಾದರೆ ಇಬ್ಬರು ಬೈಕ್ ಸಮೇತ ಸೆರೆಸಿಕ್ಕಿದ್ದರು.
ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇನ್ನುಳಿದವರಿಗೆ ಶೋಧ ಕಾರ್ಯ ಕೈಗೊಂಡಿದ್ದಾರೆ. ಕೆಲದಿನಗಳ ಹಿಂದೆ ಇಲ್ಲಿ ಬೈಕ್ ಸವಾರನೊಬ್ಬ ಅತೀವೇಗವಾಗಿ ಸಾಗಿದ್ದನ್ನು ಕ್ರಿಕೆಟ್ ಆಡುತ್ತಿದ್ದ ಯುವಕರು ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಆತ ಬಡಕಬೈಲು ಪರಿಸರದಿಂದ ಯುವಕರನ್ನು ಕರೆದುಕೊಂಡು ದಾಳಿ ನಡೆಸಿದ್ದಾನೆ ಎನ್ನಲಾಗಿದೆ
