ಜಾರ್ಖಂಡ್: ದೇಶದಲ್ಲಿ ಆಡಳಿತ ವ್ಯವಸ್ಥೆಯ ವಿರುದ್ಧ ಸಮರ ಸಾರಿರುವ ಮಾವೋವಾದಿಗಳ ಕೈಗೆ ಗನ್ ನೀಡಿವುದಲ್ಲ ಬದಲಿಗೆ ಕೃಷಿ ಮಾಡಲು ಸಾಧನಗಳನ್ನು ಮತ್ತು ಪೆನ್ ಮತ್ತು ಪುಸ್ತಕ ನೀಡುವ ಮೂಲಕ ಇತರರಿಗೆ ನೆರವಾಗಲು ಸ್ಫೂರ್ತಿ ತುಂಬಬೇಕೆಂದು ನರೇಂದ್ರ ಮೋದಿ ತಿಳಿಸಿದರು. ಜಾರ್ಖಂಡ್ ನ ಗುಲ್ಮಾ ಜಿಲ್ಲೆಯಲ್ಲಿ ನೆರೆದಿದ್ದ ಬೃಹತ್ ಜನಸಮೂಹವನ್ನುದ್ದೇಶಿಸಿ ಮಾತನಾಡಿದ ಅವರು ಮಾವೋಗಳು ಜನರು ಮತದಾನದಲ್ಲಿ ಭಾಗವಹಿಸದಂತೆ ಸೂಚನೆ ನೀಡಿದ್ದರು ಆದರೆ ಇಲ್ಲಿ ಸೇರಿರುವ ಜನಸಮೂಹವನ್ನು ಕಂಡಾಗ ಬಹಳ ಸಂತೋಷವಾಗುತ್ತದೆ ಎಂದು ಹೇಳಿದರು.
ಮಾವೋ ತತ್ವಗಳಿಂದ ಸ್ಪೂರ್ತಿ ಪಡೆದ ಯುವಕರು ಕೈಯಲ್ಲಿ ಗನ್ ಹಿಡಿದು ರಸ್ತೆಗಳಲ್ಲಿ ರಕ್ತ ಚೆಲ್ಲಾಡುತ್ತಿದ್ದಾರೆ. ನಮ್ಮ ಭೂಮಿಗೆ ಬೇಕಾಗಿರುವುದು ಹಸಿರು ಬಣ್ಣ ರಕ್ತದಿಂದ ಕೂಡಿದ ಕೆಂಪು ಬಣ್ಣವಲ್ಲ ಕೃಷಿಕರು ಈ ಭೂಮಿಯನ್ನು ಹಸಿರುಮಯಗೊಳಿಸಲಿ ಎಂದು ಮೋದಿ ಹೇಳಿದರು. ಗುಜರಾತ್ ನಲ್ಲಿ ಮಾಡಿದ ಸಾಧನೆಗಳಿಗಾಗಿ ಕೇಂದ್ರ ಸರಕಾರವೇ ನಮಗೆ ಪ್ರಶಸ್ತಿ ನೀಡಿದೆ ಮತ್ತು ಗುಜರಾತ್ ಮಾದರಿಯನ್ನು ಅನುಸರಿಸಲು ಇತರ ರಾಜ್ಯಗಳಿಗೆ ಸೂಚನೆ ನೀಡಿತ್ತು ಎಂದು ಮೋದಿ ಹೇಳಿದರು. ಕೆಲವರು ನೈಸರ್ಗಿಕ ಸಂಪತ್ತು ಭ್ರಷ್ಟಾಚಾರ ನಡೆಸಲು ಹೇಳಿಮಾಡಿಸಿದ ಕ್ಷೇತ್ರವೆಂದು ಭಾವಿಸಿದ್ದಾರೆ ಆದರೆ ದೇಶದ ಸಂಪತ್ತನ್ನು ಉಳಿಸಿ ಬೆಳೆಸುವುದು ನಮ್ಮ ಧ್ಯೇಯ ಎಂದು ಮೋದಿ ತಿಳಿಸಿದರು.

