ಜಮ್ಮು: ಜಮ್ಮುವಿನ ಕಥುವಾ ಜಿಲ್ಲೆಯಲ್ಲಿ ಸೇನಾ ಶಿಬಿರದ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಓರ್ವ ನಾಗರಿಕರ ಹತನಾಗಿದ್ದಾನೆ. ಸೇನಾ ಯೂನಿಫಾರಂ ಧರಿಸಿ ಬಂದಿದ್ದ ಮೂರು ಉಗ್ರರು ಸೈನಿಕರು ಸಾಗುತ್ತಿದ್ದ ಎಸ್ ಯುವಿ ವಾಹನವನ್ನು ಕಥುವಾದ ತರ್ನಾ ನಾಲ ಸೇತುವೆ ಬಳಿ ಅಡ್ಡಗಟ್ಟಿ ಒಳಗಿದ್ದವರನ್ನು ಹೊರಗೆ ಬರುವಂತೆ ಸೂಚಿಸಿ ಯದ್ವಾತದ್ವಾ ಗುಂಡಿನ ಮಳೆಗರೆದರು. ಮುಂಜಾನೆ 5 ಗಂಟೆಯ ಸುಮಾರಿಗೆ ನಡೆದ ಈ ದಾಳಿಯಲ್ಲಿ ಸೈನಿಕರ ಜೊತೆಗಿದ್ದ ಒರ್ವ ನಾಗರಿಕ ಮೃತಪಟ್ಟಿದ್ದಾನೆ.
ಇದೇ ಜಿಲ್ಲೆಯ ಕಾಲ್ಬರಿ-ಜಾಂಗ್ಲೊಟ್ ಪ್ರದೇಶದಲ್ಲಿ ಉಗ್ರರನ್ನು ಕೊಂಡೊಯ್ಯುತ್ತಿದ್ದ ವಾಹನವೊಂದನ್ನು ಅಡ್ಡಗಟ್ಟಿದ ಸೈನಿಕರು ಭಯೋತ್ಪಾದಕ ಪಡೆಯ ಮೇಲೆ ಫೈರಿಂಗ್ ನಡೆಸಿದ್ದರು. ಇದೇ ಸಮಯಕ್ಕೆ ಸರಿಯಾಗಿ ಮತ್ತೊಂದು ಕಡೆ ಸೈನಿಕರ ಮೇಲೆ ಉಗ್ರರ ದಾಳಿ ನಡೆದಿದೆ. ಗಾಯಾಳುಗಳನ್ನು ಸ್ಥಳೀಯ ಸರಕಾರಿ ವೈದ್ಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಥುವಾ ಜಿಲ್ಲೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಕಟ್ಟುನಿಟ್ಟಿನ ಭದ್ರತೆ ನಿಯೋಜಿಸಲಾಗಿದೆ. ಉಗ್ರಗಾಮಿ ಸಂಘಟನೆ ಶೊಹದಾ ಬ್ರಿಗೇಡ್ ಘಟನೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಮಾರ್ಚ್ 26ರಂದು ಕಥುವಾ ಜಿಲ್ಲೆಗೆ ಭೇಟಿ ನೀಡಿದ್ದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಪಾಕಿಸ್ತಾನ ವಿರೋಧಿ ಹೇಳಿಕೆಗಳನ್ನು ನೀಡಿದ್ದರು.

