Published On: Wed, Jun 26th, 2024

ಸವಾಲಿನ ಕಸ್ಟಮ್ಸ್ ನಲ್ಲಿ ಅತ್ಯುನ್ನತ ಅಧಿಕಾರಿ, ಸರ್ಕಾರದ ಮಾಜಿ ಕಾರ್ಯದರ್ಶಿ ಕನ್ನಡಿಗ ದೀಪಕ್ ಶೆಟ್ಟಿ

ದೇಶದ ನಾಗರಿಕ ಸೇವಾ ವಿಭಾಗದಲ್ಲಿ ೩೩ ವರ್ಷ ಸೇವೆ ಸಲ್ಲಿಸಿರುವ ಕನ್ನಡಿಗ ದೀಪಕ್ ಶೆಟ್ಟಿ ಈಗ ಮುಂಬೈಯಲ್ಲಿ ನಿವೃತ್ತಿ ಜೀವನ ಸಾಗಿಸುತ್ತಿದ್ದಾರೆ. ಕಾಸರಗೋಡಿನ ಕೃಷ್ಣ ಶೆಟ್ಟಿ ಮತ್ತು ವಿಟ್ಲದ ಶಶಿಕಲಾ ದಂಪತಿಯ ಪುತ್ರನಾಗಿರುವ ಇವರು ಯುಪಿಎಸ್‌ಸಿ ಪರೀಕ್ಷೆ ಬರೆದು ಐಆರ್‌ಎಸ್ ಪದವಿ ಮೂಲಕ(ಇಂಡಿಯನ್ ರೆವೆನ್ಯೂ ಸರ್ವಿಸಸ್-ಕಸ್ಟಮ್ಸ್ ಆ್ಯಂಡ್ ಸೆಂಟ್ರಲ್ ಎಕ್ಸೆÊಸ್) ದೇಶದ ವಿವಿಧ ಪ್ರದೇಶಗಳಲ್ಲಿ ಕಸ್ಟಮ್ಸ್ ಇಲಾಖೆಯ ಅತ್ಯುನ್ನತ ಹುದ್ದೆಗಳಲ್ಲಿ ಸದ್ದುಗದ್ದಲವಿಲ್ಲದೆ ಪ್ರಾಮಾಣಿಕ ಸೇವೆ ಸಲ್ಲಿಸಿ, ೨೦೧೬ರಲ್ಲಿ ಡೈರೆಕ್ಟರ್ ಜನರಲ್ ಆಫ್ ಶಿಪ್ಪಿಂಗ್ ಮತ್ತು ಭಾರತದ ಸರ್ಕಾರದ ಕಾರ್ಯದರ್ಶಿಯಾಗಿ ನಿವೃತ್ತಿ ಹೊಂದಿದ್ದಾರೆ.

ತಂದೆ ಕೃಷ್ಣ ಶೆಟ್ಟಿಯವರು ಸರ್ಕಾರಿ ಹುದ್ದೆಯಲ್ಲಿ ವರ್ಗಾವಣೆ ಹೊಂದುತ್ತಿದ್ದುದರಿಂದ ಪುತ್ರ ದೀಪಕ್ ಶೆಟ್ಟಿಯ ಶಿಕ್ಷಣ ದೇಶದ ಉದ್ದಗಲಕ್ಕೂ ನಡೆದಿದೆ. ರಾಜಸ್ತಾನದಲ್ಲಿ ಹುಟ್ಟಿರುವ ಇವರ ಬಾಲ್ಯದ ಶಿಕ್ಷಣ ಅಮೃತಸರದಲ್ಲಿ ನಡೆದಿದ್ದರೆ, ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು, ಮೈಸೂರು,ಹುಬ್ಬಳ್ಳಿಯಲ್ಲಿ ಕಾಲೇಜು ಪದವಿ ಶಿಕ್ಷಣ ಪಡೆದುಕೊಂಡಿದ್ದರು. ಬಳಿಕ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಎಕನಾಮಿಕ್ಸ್ನಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದರು.

ಉತ್ತರಾಖಂಡದ ಮಸ್ಸೂರಿನ ಐಎಎಸ್ ಅಕಾಡೆಮಿಯಲ್ಲಿ ೪ ತಿಂಗಳ ತರಬೇತಿ ಬಳಿಕ ಚೆನ್ನೆÊಯಲ್ಲಿ ೬ ತಿಂಗಳು ಕಸ್ಟಮ್ಸ್ ತರಬೇತಿ ಪಡೆದಿರುವ ಶೆಟ್ಟಿಯವರು ದಿಲ್ಲಿಯ ಕಸ್ಟಮ್ಸ್ನಲ್ಲಿ ೬ ತಿಂಗಳ ತರಬೇತಿ ಪಡೆದ ನಂತರ ೧೯೮೨ರಲ್ಲಿ ಮೊದಲ ಬಾರಿಗೆ ಹುಟ್ಟೂರು ರಾಜಸ್ತಾನದ ಕಸ್ಟಮ್ಸ್ ಇಲಾಖೆಗೆ ಸಹಾಯಕ ಆಯುಕ್ತರಾಗಿ ಪೋಸ್ಟಿಂಗ್ ಆಗಿದ್ದರು.

೧೯೮೬ರಲ್ಲಿ ಉಪಾಯುಕ್ತರಾಗಿ ಭಡ್ತಿ ಹೊಂದಿದರು. ಈ ವೇಳೆ ದೇಶದಲ್ಲೇ ಅತಿ ಹೆಚ್ಚು ಸ್ಮಗ್ಲಿಂಗ್ ದಂಧೆ ನಡೆಯುತ್ತಿದ್ದ ಮುಂಬೈಗೆ ವರ್ಗಾವಣೆಯಾಗಿ ಕಸ್ಟಮ್ಸ್ ವಿಭಾಗದ ಮುಂಬೈ ವಲಯದ ಉಪಾಯುಕ್ತರಾಗಿ ಅಧಿಕಾರ ಸ್ವೀಕರಿಸಿದರು. ೧೯೯೨ರಲ್ಲಿ ಜಂಟಿ ಆಯುಕ್ತರಾಗಿ ಬೆಳಗಾವಿಗೆ ವರ್ಗ. ಇಲ್ಲಿನ ೪ ವರ್ಷದ ಸೇವಾವಧಿಯೊಂದಿಗೆ ಮಂಗಳೂರಿನ ಕಸ್ಟಮ್ಸ್ ಆ್ಯಂಡ್ ಸೆಂಟ್ರಲ್ ಎಕ್ಸೆÊಸ್‌ನ ಜಂಟಿ ಆಯುಕ್ತರಾಗಿ ಹೆಚ್ಚುವರಿ ಕಾರ್ಯ ನಿರ್ವಹಿಸಿದ್ದರು. ೧೯೯೬ರಲ್ಲಿ ಸಹಾಯಕ ಅಡಿಷನಲ್ ಕಮಿಶನರ್ ಆಗಿ ಬಡ್ತಿ.

ಒಂದು ಅವಧಿಯ ಸೇವೆ ಸಲ್ಲಿಸಿದ ಬಳಿಕ ಐಎಎಸ್, ಐಪಿಎಸ್‌ನಂತಹ ಅಧಿಕಾರಿಗಳಿಗೆ ಭಾರತ ಸರ್ಕಾರದ ಸಚಿವಾಲಯದಲ್ಲಿ ೫ ವರ್ಷ ಸೇವೆ ಮಾಡುವ ಅವಕಾಶವಿರುತ್ತದೆ. ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳಿಗೆ ಇದು ಡೆಪ್ಯುಟೇಶನ್ ಆಗಿರುತ್ತದೆ. ಈ ಅವಕಾಶದಲ್ಲಿ ಶೆಟ್ಟಿಯವರು ಭಾರತ ಸರ್ಕಾರದ ಜವುಳಿ ಸಚಿವಾಲಯದಲ್ಲಿ ಕಸ್ಟಮ್ಸ್ ಇಲಾಖೆಗೆ ಸಂಬoಧಿಸಿದ ಹೆಚ್ಚುವರಿ ಆಯುಕ್ತ ಹುದ್ದೆ ಅಲಂಕರಿಸಿದ್ದರು. ಮುಂಬೈಯ ಸಹರಾ ಅಂತಾರಾಷ್ಟ್ರೀಯ  ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ವಿಭಾಗದ ಹೆಚ್ಚುವರಿ ಆಯುಕ್ತರಾಗಿದ್ದ ಇವರು ೨೦೦೨ರಲ್ಲಿ ಕಸ್ಟಮ್ಸ್ ಆಯುಕ್ತರಾಗಿ ಪದೋನ್ನತಿ ಹೊಂದಿದ್ದರು. ಸಿಇಐನ ಡಿಜಿಯಾಗಿ ಮಹಾರಾಷ್ಟç, ಗೋವಾ ಮತ್ತು ಮತ್ತು ಮಧ್ಯಪ್ರದೇಶದ ಜವಾಬ್ದಾರಿ ಹೊಂದಿದ್ದರು. ೨೦೦೫ರಲ್ಲಿ ಕಸ್ಟಮ್ಸ್ ಆಯುಕ್ತರಾಗಿ ಭುವನೇಶ್ವರಕ್ಕೆ ವರ್ಗ.

ಕಸ್ಟಮ್ಸ್ ಇಲಾಖೆಯ ಸೇವಾವಧಿಯಲ್ಲಿ ಮುಂಬೈ ವಿಶ್ವವಿದ್ಯಾಲಯದಿಂದ ಸೈಬರ್ ಲಾ ಮತ್ತು ಸೈಬರ್ ಫೊರೆನ್ಸಿಕ್ ಡಿಪ್ಲೋಮಾ ಪಡೆದಿದ್ದರು. ಮತ್ತೊಂದು ಪದೋನ್ನತಿ ಅವಕಾಶದಲ್ಲಿ ಶಿಪ್ಪಿಂಗ್ ಸಚಿವಾಲಯದಲ್ಲಿ ಅಡಿಷನಲ್ ಜನರಲ್ ಆಗಿದ್ದ ಇವರು ೨೦೧೪ರಲ್ಲಿ ಡೈರೆಕ್ಟರ್ ಜನರಲ್ ಆಫ್ ಶಿಪ್ಪಿಂಗ್ ಮತ್ತು ಭಾರತದ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿಯಾಗಿ, ೨೦೧೬ರಲ್ಲಿ ಪೂರ್ಣ ಪ್ರಮಾಣದಲ್ಲಿ ಸರ್ಕಾರದ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ೨೦೧೬ರಲ್ಲಿ ಸೆಕ್ರಟರಿ ಟು ಗವರ್ನಮೆಂಟ್ ಆಫ್ ಇಂಡಿಯಾ ಮತ್ತು ಡೈರೆಕ್ಟರ್ ಜನರಲ್ ಆಫ್ ಶಿಪ್ಪಿಂಗ್ ಹುದ್ದೆಯ ಗೌರವದೊಂದಿಗೆ ನಿವೃತ್ತರಾಗಿದ್ದಾರೆ.

“ಈ ಹುದ್ದೆಯಲ್ಲಿ ಅಪಾಯ, ಒತ್ತಡ ಸಾಕಷ್ಟಿದೆ. ಸೊಮಾಲಿಯಾ ಕಡಲ್ಗಳ್ಳರಿಂದ ಒತ್ತೆಸೆರೆಯಲ್ಲಿದ್ದ ೫೦ ಮಂದಿಯನ್ನು ಯಾವುದೇ ಒತ್ತೆಹಣ ನೀಡದೆ ಬಿಡಗಡೆಗೊಳಿಸಲಾಗಿತ್ತು. ಆಗ ಸೊಮಾಲಿಯಾದಲ್ಲಿ ಸರ್ಕಾರವೂ ಇರಲಿಲ್ಲ, ಅಲ್ಲಿ ಭಾರತೀಯ ರಾಯಭಾರಿಯೂ ಇರಲಿಲ್ಲ. ೧೯೮೬-೯೨ರವರೆಗೆ ಮುಂಬೈಯಲ್ಲಿ ಕಾರ್ಯ ನಿರ್ವಹಿಸಿದ ಅವಧಿ ಹೆಚ್ಚು ಚಾಲೆಂಜ್ ಆಗಿದ್ದು, ವಿಫುಲ ಸ್ಮಗ್ಲಿಂಗ್ ನಡೆಯುತ್ತಿದ್ದ ಕಾಲ ಅದಾಗಿತ್ತು” ಎಂದು ಶೆಟ್ಟಿಯವರು ತನ್ನ ಸೇವಾವಧಿಯ ಹಲವು ಮರೆಯಲಾಗದ ಕ್ಷಣಗಳಲ್ಲಿ ಕೆಲವನ್ನು ನೆನಪಿಸಿಕೊಂಡಿದ್ದಾರೆ.

ಗಣರಾಜ್ಯೋತ್ಸವದಂದು ರಾಷ್ಟ್ರಪತಿಯಿಂದ ವಿಶಿಷ್ಟ ಸೇವಾ ಪ್ರಮಾಣಪತ್ರ, ಅಂತಾರಾಷ್ಟ್ರೀಯ ಕಸ್ಟಮ್ಸ್ ದಿನದಂದು ಪ್ರಾಮಾಣಿಕ ಸೇವೆಗಾಗಿ ಮೆರಿಟೋರಿಸ್ ಪ್ರಮಾಣಪತ್ರದಂತಹ ಹತ್ತು ಹಲವು ಗೌರವಗಳಿಗೆ ಪಾತ್ರರಾಗಿರುವ ಶೆಟ್ಟಿಯವರು, `ಅಪರೇಶನ್ ರಾಹತ್’ನಡಿಯಲ್ಲಿ ೨೦೧೫ರಲ್ಲಿ ಯುದ್ಧಪೀಡಿತ ಯೆಮನ್‌ನಿಂದ ೫೦೦೦ ಭಾರತೀಯರು ಮತ್ತು ವಿದೇಶಿ ಪ್ರಜೆಗಳನ್ನು ಸಮುದ್ರ ಮಾರ್ಗವಾಗಿ ರಕ್ಷೀಸಿದ ಸಂದರ್ಭ ನೆನಪಿಸಿಕೊಳ್ಳುತ್ತಾರೆ. ಕಸ್ಟಮ್ಸ್, ಶಿಪ್ಪಿಂಗ್, ಕಡಲ್ಗಳ್ಳರ ಸಮಸ್ಯೆ, ಪೈರಸಿ, ಸ್ಮಗ್ಲಿಂಗ್ ತಡೆ ಕ್ಷೇತ್ರದಲ್ಲಿ ಆಳವಾದ ದೂರದೃಷ್ಟಿ ಹೊಂದಿರುವ ಇವರು ದೇಶ-ವಿದೇಶಗಲ್ಲಿ ನಡೆದಿದ್ದ ಅಂತಾರಾಷ್ಟ್ರೀಯ  ಮಟ್ಟದ ಹಲವು ವಿಚಾರಗೋಷ್ಠಿಗಳಲ್ಲಿ ಅಧಿಕೃತವಾಗಿ ಮಾತನಾಡಿದ್ದಾರೆ.

ಹಲವು ಸವಾಲುಗಳನ್ನು ಮೆಟ್ಟಿ ನಿಂತು ಸಿಕ್ಕ ಹುದ್ದೆಯಲ್ಲಿ ಯಶಸ್ವಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿರುವ ಕಸ್ಟಮ್ಸ್ ಅಧಿಕಾರಿ ದೀಪಕ್ ಶೆಟ್ಟಿ ಅವರ ಪತ್ನಿ ಸುಜಾತಾ(ದಂತ ವೈದ್ಯೆ) ಆಗಿದ್ದರೆ, ಓರ್ವ ಪುತ್ರ ಹಾಗೂ ಓರ್ವ ಪುತ್ರಿ ಉತ್ತಮ ಶಿಕ್ಷಣ ಪಡೆದು ಜೀವನದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಕರ್ತವ್ಯದಲ್ಲಿ ಸದಾ ಶುದ್ಧಹಸ್ತರಾಗಿರುವ ಕನ್ನಡಿಗ ಪ್ರಾಮಾಣಿಕ ಅಧಿಕಾರಿಯ ನಿವೃತ್ತ ಜೀವನ ಸುಖಮಯವಾಗಿರಲಿ.

  • ಧನಂಜಯ ಗುರುಪುರ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter