ಇಸ್ಲಾಮಾಬಾದ್ : ಮುಂಬೈ ದಾಳಿ ಪ್ರಕರಣದ ಆರೋಪಿ, ಲಷ್ಕರ್–ಎ ತಯಬಾ (ಎಲ್‌ಇಟಿ) ಮುಖ್ಯಸ್ಥ ಝಕಿವುರ್ ರೆಹಮಾನ್ ಲಖ್ವಿ ಬಂಧನ ಅನೂರ್ಜಿತ ಎಂದು ಹೇಳಿರುವ ಇಸ್ಲಾಮಾಬಾದ್ ಹೈಕೋರ್ಟ್ ಲಖ್ವಿ ಬಿಡುಗಡೆಗೆ ಆದೇಶಿಸಿದೆ.
ಬಿಡುಗಡೆ ಕೋರಿ ಲಖ್ವಿ ಸಲ್ಲಿಸಿದ್ದ ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನೂರುಲ್ಲಾ ಹಖ್ ಅವರು ಕೂಡಲೇ ಲಖ್ವಿ ಬಿಡುಗಡೆ ಮಾಡುವಂತೆ ಆದೇಶಿಸಿದ್ದಾರೆ ಎಂದು ‘ಡಾನ್’ ವರದಿ ಮಾಡಿದೆ. ಹೈಕೋರ್ಟ್ ಈ ಹಿಂದೆ ಲಖ್ವಿ ಮೇಲ್ಮನವಿ ಅರ್ಜಿಯ ತೀರ್ಪನ್ನು ಕಾಯ್ದಿರಿಸಿತ್ತು.
ಲಖ್ವಿ ಜತೆ ಇತರೆ ಆರು ಮಂದಿ ಸಹ ಆರೋಪಿಗಳ ವಿರುದ್ಧ 2008 ರಲ್ಲಿ ಮುಂಬೈ ಮೇಲೆ ನಡೆದ ಉಗ್ರರ ದಾಳಿಯ ಸಂಚು ರೂಪಿಸಿದ ಗಂಭೀರ ಆರೋಪವಿದೆ.
2008ರ ನವೆಂಬರ್ 26ರಂದು ನಡೆದ ಮುಂಬೈ ದಾಳಿಯಲ್ಲಿ ವಿದೇಶೀಯರೂ ಸೇರಿದಂತೆ 166 ಮಂದಿ ಸಾವನ್ನಪ್ಪಿದ್ದರು. 2009ರ ನವೆಂಬರ್ 25ರಂದು ಲಖ್ವಿ ಸೇರಿದಂತೆ ಒಟ್ಟು ಏಳು ಮಂದಿಯ ಮೇಲೆ ಮುಂಬೈ ದಾಳಿಯ ಸಂಚು ರೂಪಿಸಿದ ದೋಷಾರೋಷ ಹೊರಿಸಲಾಗಿತ್ತು.
2009ರಿಂದ ಈ ಪ್ರಕರಣದ ವಿಚಾರಣೆ ನಡೆಸಲಾಗುತ್ತಿದ್ದು, ಲಖ್ವಿಯನ್ನು ಕಳೆದ ಐದು ವರ್ಷದಿಂದ ರಾವಲ್ಪಿಂಡಿಯ ಅಡಿಯಾಲಾ ಕಾರಾಗೃಹದಲ್ಲಿ ಇರಿಸಲಾಗಿದೆ.

