ಮುಂಬೈ: ಇದುವರೆಗೂ ಇ ಮೇಲ್ ಹಾಗೂ ಟ್ವೀಟರ್ ಮೂಲಕ ಬೆದರಿಕೆ ಸಂದೇಶಗಳು ಕೇಳಿ ಬರುತ್ತಿದ್ದ ಮಧ್ಯೆ ಮುಂಬೈನ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪುರುಷರ ಶೌಚಾಲಯದಲ್ಲಿನ ಗೋಡೆ ಮೇಲೆ ಐಸಿಸ್ ‘ಉಗ್ರ’ ರು ಬರೆದಿರುವರೆನ್ನಲಾದ ಸಂದೇಶದಲ್ಲಿ ಜನವರಿ 10 ರಂದು ದಾಳಿ ಮಾಡುವ ಬೆದರಿಕೆ ಹಾಕಲಾಗಿದೆ.
ಈ ಸಂದೇಶವನ್ನು ಶೌಚಾಲಯ ಶುಚಿಗೊಳಿಸಲು ರಾತ್ರಿ ವೇಳೆ ತೆರಳಿದ್ದ ಸಿಬ್ಬಂದಿ ಗಮನಿಸಿ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದು, ಅವರು ಬಂದು ಪರಿಶೀಲಿಸಿದ ವೇಳೆ ತಪ್ಪು ತಪ್ಪು ಇಂಗ್ಲೀಷಿನಲ್ಲಿ ‘ATTECK BY ISIS DATE 10/01/15’ ಎಂದು ಬರೆಯಲಾಗಿತ್ತು. ಇದನ್ನು ಶೌಚಾಲಯದಲ್ಲಿ ಬರೆದಿದ್ದರೂ ವಿಮಾನ ನಿಲ್ದಾಣದ ಭದ್ರತಾಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.
ರಾತ್ರಿ ವೇಳೆ ಶೌಚಾಲಯಕ್ಕೆ ಬಂದ ಪುರುಷರ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿರುವ ಪೊಲೀಸರು ಇದನ್ನು ಯಾರಾದರೂ ಕುಚೋದ್ಯಕ್ಕೆ ಬರೆದಿದ್ದಾರೆಯೋ ಅಥವಾ ಶೌಚಾಲಯಕ್ಕೆ ಅವಸರದಿಂದ ಬಂದಿದ್ದ ಉಗ್ರರು ಅವಸರ ಅವಸರವಾಗಿ ಇದನ್ನು ಬರೆದು ಹೋಗಿದ್ದಾರೆಯೋ ಎಂಬುದನ್ನು ಪರಿಶೀಲಿಸುತ್ತಿದ್ದಾರೆ.

