ಬಂಟ್ವಾಳ: ಅಟೋ ರಿಕ್ಷಾ ಡಿಕ್ಕಿ ಹೊಡೆದು ಬೈಕ್ ಸವಾರನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಸಜಿಪಮುನ್ನೂರು ಗ್ರಾಮದ ಮಾರ್ನಬೈಲು ಸಮೀಪದ ಕಂದೂರು- ಪೆಲತ್ತಕಟ್ಟೆ ಎಂಬಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.

ಮೃತ ಯುವಕನನ್ನು ಪಾಣೆಮಂಗಳೂರು ಸಮೀಪದ ನಂದಾವರ-ಸುನ್ನೀ ನಗರ ನಿವಾಸಿ ಮುಹಮ್ಮದ್ ರಶೀಕ್ (25) ಎಂದು ಗುರುತಿಸಲಾಗಿದೆ. ಅವಿವಾಹಿತನಾಗಿರುವ ರಶಿಕ್ ನಂದಾವರ ಶಾಲಾ ಸಮೀಪ ಗ್ಯಾರೇಜ್ ನಡೆಸುತ್ತಿದ್ದು, ಈತ ಭಾನುವಾರ ರಾತ್ರಿ ಸಜಿಪಕ್ಕೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದ ವೇಳೆ ಪೆಲತ್ತಕಟ್ಟೆಯಲ್ಲಿ ಅಟೋ ರಿಕ್ಷಾ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಪರಿಣಾಮ ಗಂಭೀರ ಗಾಯಗೊಂಡಿದ್ದ ರಶೀಕ್ ನನ್ನು ತಕ್ಷಣ ಸ್ಥಳೀಯರು ದೇರಳಕಟ್ಟೆಯ ಆಸ್ಪತ್ರೆಯೊಂದಕ್ಕೆ ಸಾಗಿಸಿದರಾದರೂ ತಲೆಗೆ ಗಂಭೀರ ಗಾಯಗೊಂಡಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಸ್ಥಳೀಯವಾಗಿ ಎಲ್ಲರೊಂದಿಗೂ ಉತ್ತಮ ಒಡನಾಟ ಹೊಂದಿದ್ದ ಯುವಕನಾಗಿದ್ದ ರಶೀಕ್ ತಂದೆ, ತಾಯಿ, ಸಹೋದರ-ಸಹೋದರಿ ಹಾಗೂ ಬಂಧು-ಬಳಗವನ್ನು ಅಗಲಿದ್ದಾರೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ,ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
