ಬಂಟ್ವಾಳ: ಕಾವಳಪಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ)ವು 2025-26ನೇ ಸಾಲಿನಲ್ಲಿ ಒಟ್ಟು 392.97ಕೋ. ರೂ.ವ್ಯವಹಾರ ನಡೆಸಿ,1.64 ಕೋ.ರೂ.ನಿವ್ವಳ ಲಾಭ ಗಳಿಸಿದ್ದು ಸದಸ್ಯರಿಗೆ 25 ಶೇ.ಡಿವಿಡೆಂಟ್ ನ್ನು ಸಂಘದ ಅಧ್ಯಕ್ಷ ಕೆ.ಪ್ರಮೋದ್ ಕುಮಾರ್ ರೈ ಅವರು ಪ್ರಕಟಿಸಿದರು.
ಸಂಘದ ನೂತನ ಸಭಾಂಗಣದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಿಯೂ ಸಂಘ ಗರಿಷ್ಠ ಲಾಭವನ್ನು ಪಡೆದಿದೆ ಎಂದರು.

ಸಂಘವು 2.29 ಕೋ.ರೂ. ಪಾಲುಬಂಡವಾಳ, 57.77ಕೋ. ರೂ. ಠೇವಣಿ, 68 ಕೋ.ರೂ.ಸದಸ್ಯರ ಸಾಲ ಹೊರಬಾಕಿ ಇದ್ದು, ಬ್ಯಾಂಕ್ ಮತ್ತು ಇತರೆ ಸಹಕಾರಿ ಸಂಸ್ಥೆಯಲ್ಲಿ ಇಟ್ಟಿರುವ ಹೂಡಿಕೆ 15.48 ಕೋ.ರೂ., ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಪಡೆದ ಸಾಲ 15.14ಕೋ.ರೂ., ಸಂಘದ ದುಡಿಯುವ ಬಂಡವಾಳ 91.26ಕೋ.ರೂ ಆಗಿರುತ್ತದೆ ಎಂದ ಅವರು ಪ್ರಸ್ತುತ ಲೆಕ್ಕಪರಿಶೋಧನೆಯಲ್ಲು ‘ಎ’ ತರಗತಿಯನ್ನು ಪಡೆದಿದೆ ಎಂದರು.
ಸಂಘದ ಸಾಲಗಾರರು ಮೃತರಾದಲ್ಲಿ ಅವರ ಕುಟುಂಬಕ್ಕೆ 1 ಲಕ್ಷ ರೂ. ವರೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ “ಸದಸ್ಯರ ಮರಣ ಪರಿಹಾರ ನಿಧಿ ಯೋಜನೆ” ಯನ್ನು ಕಾರ್ಯರೂಪಕ್ಕೆ ತರಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದರು.
ಇದೇ ವೇಳೆ ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ಸಂಘದ ಸದಸ್ಯರ ಸುಮಾರು 83 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಅಭಿನಂದಿಸಲಾಯಿತು.ವಿಕಲಚೇತನರಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.
ಉಪಾಧ್ಯಕ್ಷರಾದ ಪಿ. ಅಮ್ಮು ರೈ,ನಿರ್ದೇಶಕರಾದ ಪಿ.ಜನರಾಜ ಆರಿಗ,ಕೆ. ಚಂದಪ್ಪ ಪೂಜಾರಿ,ಬೆನಡಿಕ್ಟ್ ಡಿ’ಸೋಜ, ಶಿವಪ್ರಸಾದ್ ಬಿ., ಸವಿತಾ ಬಿ.ಎಸ್., ಆಶಾ,ಪ್ರಕಾಶ್ ಶೆಟ್ಟಿ,ನವೀನ್ ಶೆಟ್ಟಿ,ಚಂದಪ್ಪ ಮೂಲ್ಯ,ಬಾಲಕೃಷ್ಣ ನಾಯ್ಕ,ರಾಜು, ವೃತ್ತಿಪರ ನಿರ್ದೇಶಕ ಗಂಗಾಧರ ಪೂಜಾರಿ ವೇದಿಕೆಯಲ್ಲಿದ್ದರು.
ಸಂಘದ ಸಿಇಒ ಶಿವಾನಂದ ಪಿ.ಸ್ವಾಗತಿಸಿ, ವರದಿವಾಚಿಸಿ,ಕೊನೆಯಲ್ಲಿ ವಂದಿಸಿದರು.
