ಬಂಟ್ವಾಳ: ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತವು 2025-26ನೇ ಸಾಲಿನಲ್ಲಿ 404.89 ಕೋಟಿ ರೂ.ವಿಗೂ ಅಧಿಕ ವ್ಯವಹಾರ ನಡೆಸಿ 57.04 ಲಕ್ಷ ರೂ. ನಿವ್ವಳ ಲಾಭ ಗಳಿಸುವ ಮೂಲಕ ಸಂಘದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದು ಅಧ್ಯಕ್ಷ ಕರುಣೇಂದ್ರ ಎಂ. ಹೇಳಿದರು. ಬಿ.ಸಿ.ರೋಡ್ ನ ಸ್ಪರ್ಶ ಕಲಾ ಮಂದಿರದಲ್ಲಿ ಮಂಗಳವಾರ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಘವು ಪ್ರಸ್ತುತ 4,686 ಸದಸ್ಯರನ್ನು ಹೊಂದಿದ್ದು, 3,75,41,220 ಪಾಲು ಬಂಡವಾಳ , 43.41 ಕೋ.ರೂ. ಠೇವಣಿ ಸಂಗ್ರಹಿಸಲಾಗಿದೆ. ಸದಸ್ಯರಿಗೆ 46.30 ಕೋಟಿ ರೂ. ಸಾಲ ನೀಡಿದ್ದು ,ಸದಸ್ಯರಿಂದ 39.01 ಕೋ. ರೂ. ಸಾಲ ಹೊರಬಾಕಿ ಇರುತ್ತದೆ.ಸಂಘವು ಇತರೆ ಸಂಸ್ಥೆಗಳಲ್ಲಿ 20.12 ಕೋ.ರೂ. ಪಾಲು ಹಣ ಹಾಗೂ ಠೇವಣಾತಿ ಹೊಂದಿದೆ ಎಂದರು.
ಲೆಕ್ಕಪರಿಶೋಧನೆಯಲ್ಲಿ ಸಂಘವು ‘ಎ’ ವರ್ಗೀಕರಣ ಪಡೆದಿದ್ದು, ಸದಸ್ಯರ ವಿಶ್ವಾಸ ಮತ್ತು ಸಹಕಾರದಿಂದಾಗಿ ಸಂಘವು ನಿರಂತರವಾಗಿ ಪ್ರಗತಿ ಸಾಧಿಸುತ್ತಿದೆ ಎಂದ ಅವರು ಸದಸ್ಯರಿಗೆ ಅಗತ್ಯವಿರುವ ಸಹಕಾರವನ್ನು ನೀಡುವುದರೊಂದಿಗೆ ಸಂಘವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಒಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ನಿರ್ದೇಶಕರಾದ ಬಿ. ಜಯ, ವಿಠಲ ಪೂಜಾರಿ, ಮುರಳೀಧರ ಭಟ್, ಚಂದ್ರಶೇಖರ ಭಂಡಾರಿ ಬಿ., ದಿವಾಕರ ಶೆಟ್ಟಿ, ಜಯಂತಿ, ಎ. ಲಕ್ಷ್ಮೀ ವಿ. ಪ್ರಭು, ಪದ್ಮನಾಭ ಗೌಡ, ಗಣೇಶ್, ಹರೀಶ್ ಉಪಸ್ಥಿತರಿದ್ದರು.ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.
ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಯಪ್ರಕಾಶ್ ಕಾಮತ್ ವಾರ್ಷಿಕ ವರದಿ ವಾಚಿಸಿದರು. ಉಪಾಧ್ಯಕ್ಷ ಆದಿರಾಜ್ ಕೆ. ಜೈನ್ ಸ್ವಾಗತಿಸಿ,ಬಿ. ಸದಾಶಿವ ಶೆಣೈ ಅವರು ವಂದಿಸಿದರು.ಬ್ಯಾಂಕ್ ನ ಸಿಬ್ಬಂದಿಗಳು ಸಹಕರಿಸಿದರು.ಕೀರ್ತನಾ ಕಾರ್ಯಕ್ರಮ ನಿರೂಪಿಸಿದರು.
