ಕೈಕಂಬ : ಗುರುಪುರದ ಶ್ರೀ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನ-ಶ್ರೀ ಜಂಗಮ ಸಂಸ್ಥಾನ ಮಠದ ಜೀರ್ಣೋದ್ಧಾರ ಪ್ರಯುಕ್ತ ಆ. ೨೧ರಂದು ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಹಾಗೂ ಬೆಂಗಳೂರಿನ ಶ್ರೀಮದ್ ರಾಜಾಪುರ ಸಂಸ್ಥಾನ ಮಠದ ಪೀಠಾಧಿಪತಿ ಡಾ. ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಶ್ರೀ ದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು.

ಬೆಳಿಗ್ಗೆ ರುದ್ರಾಭಿಷೇಕ, ರುದ್ರ ಪಾರಾಯಣ, ರುದ್ರ ಹೋಮ, ಕಲಾರ್ಷಣೆ ಪೂಜಾ ಕಾರ್ಯಕ್ರಮಗಳ ಬಳಿಕ ಎರಡು ಹೋರಿಗಳ ಸಹಾಯದಿಂದ ಭಕ್ತಾದಿಗಳು ಗರ್ಭಗುಡಿಯ ಗುಮ್ಮಟದ ಮೇಲ್ಗಡೆಯ ತಾಮ್ರದ ಕಳಶ ಕಳಚಿದರು.


ನಂತರ ಗಣಪತಿ ದೇವರ ಮೂರ್ತಿ, ಗರ್ಭಗುಡಿಯ ಶಿವ ದೇವರ ಮೂರ್ತಿ ಹಾಗೂ ಗರ್ಭಗುಡಿಯ ಎದುರಿನ ನಂದಿ ಪ್ರತಿಮೆಯನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು.

ನೂತನ ಶಿಲಾಮಯ ದೇವಾಲಯದ ನಿರ್ಮಾಣ ಕಾರ್ಯಾರಂಭಕ್ಕೆ ಪೂರ್ವಭಾವಿಯಾಗಿ ಅಕ್ಟೋಬರ್ ೨೪ ಶುಕ್ರವಾರ ಬೆಳಿಗ್ಗೆ ಭೂಮಿಪೂಜೆ(ಶಿಲಾನ್ಯಾಸ) ನಡೆಯಲಿದೆ. ಪೂಜಾ ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಚಿನ್ ಕುಮಾರ್ ಅಡಪ, ಸಮಿತಿ ಪದಾಧಿಕಾರಿಗಳು, ಸದಸ್ಯರು ಹಾಗೂ ನೂರಾರು ಭಕ್ತರು ಪಾಲ್ಗೊಂಡಿದ್ದರು.
