ಬಂಟ್ವಾಳ:ಕೇಂದ್ರದಲ್ಲಿ ಯುಪಿಎ ಸರಕಾರವಿದ್ದಾಗ ಬ್ರಹ್ಮರಕೊಟ್ಲು ಟೋಲ್ ಗೇಟ್ ಸ್ಥಾಪನೆಯಾಗಿದ್ದು, ಇದರ ಪಿತಾಮಹವೇ ಕಾಂಗ್ರೆಸ್ ಆಗಿದೆ.ಆಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜವಾಬ್ದಾರಿ ಸ್ಥಾನದಲ್ಲಿದ್ದು ವಿರೋಧಿಸದ ರಮಾನಾಥ ರೈ ಅವರು ಈಗ ಟೋಲ್ ಗೇಟ್ ತೆರವಾಗುವ ಅಂತಿಮಹಂತದ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ಟೋಲ್ ಗೇಟ್ ತೆರವಿಗಾಗಿ ಅಹೋರಾತ್ರಿ ಧರಣಿಯ ನಾಟಕ ಮಾಡಿರುವುದು ಹಾಸ್ಯಾಸ್ಪದವಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಟೀಕಿಸಿದ್ದಾರೆ.

ಬುಧವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬ್ರಹ್ಮರಕೊಟ್ಲು ಟೋಲ್ ತೆರವಿನ ಕುರಿತಂತೆ ಇದ್ದ ಕೆಲ ತಾಂತ್ರಿಕ ತೊಂದರೆಯನ್ನು ಸಂಸದರಾದ ಕ್ಯಾ.ಬ್ರಿಜೇಶ್ ಚೌಟ ಹಾಗೂ ಶಾಸಕ ರಾಜೇಶ್ ನಾಯ್ಕ್ ಶ್ರಮದ ಫಲವಾಗಿ ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿಅವರ ಸಹಕಾರದಿಂದ ಸಂಬಂಧಿತ ಹೆದ್ದಾರಿ ಅಧಿಕಾರಿಗಳೊಂದಿಗೆ ಚರ್ಚಿಸಿ ಬಗೆಹರಿದಿದ್ದು, ಅತೀ ಶೀಘ್ರದಲ್ಲಿ ನೂರಕ್ಕೆ ನೂರರಷ್ಟು ಬ್ರಹ್ಮರಕೊಟ್ಲು ಟೋಲ್ ಕೇಂದ್ರ ತೆರವಾಗಲಿದೆ.ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.
2013 ರಲ್ಲಿ ದಿ.ಆಸ್ಕರ್ ಫೆರ್ನಾಂಡೀಸ್ ಅವರು ಕೇಂದ್ರ ಸಾರಿಗೆ ಸಚಿವರಾಗಿದ್ದು,ಎನ್ ಎಂ ಪಿ ಟಿ ಮೂಲಕ ಈ ಟೋಲನ್ನು ನಿರ್ಮಿಸಲಾಗಿತ್ತು.ಆಗ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ರಮಾನಾಥ ರೈ ಅವರು,ಇದರ ವಿರುದ್ಧ ಮಾತನಾಡದವರು ಟೋಲ್ ಗೇಟ್ ತೆರವಾಗುವ ಮಾಹಿತಿ ಸಿಗುತ್ತಿದ್ದಂತೆ 24 ತಾಸುಗಳ ಧರಣಿಯ ನಾಟಕ ಮಾಡಿದ್ದಾರೆ.
ಈ ವಿಚಾರದಲ್ಲಿ ಅವರು ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ ಈಗಾಗಲೇ ತೆರವಿಗೆ ಸಂಬಂಧಿಸಿ ಇದ್ದಂತಹ ತಾಂತ್ರಿಕ ಸಮಸ್ಯೆಯನ್ನು ಸಂಸದರು ಬಗೆಹರಿಸಿದ್ದಾರೆ, ಪಣಕಜೆ,ವಳಾಲ್ ನಲ್ಲಿ ಟೋಲ್ ಆರಂಭವಾಗುತ್ತಿದ್ದಂತೆ ಬ್ರಹ್ಮರಕೊಟ್ಲು ಟೋಲ್ ತೆರವಾಗಲಿದೆ ಎಂದರು.
ಸಂಸದ ಕ್ಯಾ ಬ್ರಿಜೇಶ್ ಚೌಟ ಅವರು ದ.ಕ.ಜಿಲ್ಲೆಯನ್ನು ಕೇಂದ್ರ ಸರಕಾರದ ಅನುದಾನ ಬಳಸಿಕೊಂಡು ಅಭಿವೃದ್ಧಿಯಲ್ಲಿ ಮಾದರಿ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಜಿಲ್ಲೆಯ ಹಲವು ರಾ.ಹೆ. ರಸ್ತೆಗಳು ಅಭಿವೃದ್ಧಿಯಾಗಿದ್ದರೆ ,ಕೆಲ ರಸ್ತೆಗಳ ಅಭಿವೃದ್ದಿಯ ನಿಟ್ಟಿನಲ್ಲಿ ಡಿಪಿಆರ್ ಹಂತದಲ್ಲಿದೆ. ಆದರೆ ರಾಜ್ಯ ಸರಕಾರದಿಂದ ಬರಬೇಕಾದ ಅನುದಾನವೇ ಬಾರದೆ,ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದೆ ಎಂದರು.
ಗ್ಯಾರಂಟಿ ಯೋಜನೆಯ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ರಾಜ್ಯ ಸರಕಾರ ಅಭಿವೃದ್ಧಿಕಾರ್ಯಗಳಿಗೆ ಅನುದಾನ ನೀಡದೆ ದಿವಾಳಿಯಾಗಿದೆ ಎಂದು ಬಿಜೆಪಿ ಬಂಟ್ವಾಳ ಮಂಡಲದ ಪ್ರ.ಕಾರ್ಯದರ್ಶಿ ಸುದರ್ಶನ್ ಬಜ ವಾಗ್ದಾಳಿ ನಡೆಸಿದರು.
ಅರ್ಧ ವಾರ್ಷಿಕ ಕಳೆದರೂ ಶಾಲಾ ಮಕ್ಕಳಿಗೆ ಇನ್ನು ಸಮವಸ್ತ್ರ,ಶೂ ಲಭ್ಯವಾಗಿಲ್ಲ,ಬಂಟ್ವಾಳ ತಾಲೂಕಿನಲ್ಲಿ11 ಸಾವಿರ ಮಂದಿ ಆರ್ಹಫಲಾನುಭವಿಗಳು ಪಿಂಚಣಿಯಿಂದ ವಂಚಿತರಾಗಿದ್ದಾರೆ.ಶಿಕ್ಷಕರಿಗೆ ತಿಂಗಳ ವೇತನವು ಸಮರ್ಪಕವಾಗಿ ಸಿಗುತ್ತಿಲ್ಲ,ಆಸ್ಪತ್ರೆಯಲ್ಲಿಯು ರೋಗಿಗಳಿಗೆ ಔಷಧಿ ಸಿಗುತ್ತಿಲ್ಲ,ಸರಕಾರಿ ಬಸ್ ಗಳು ಶಕ್ತಿಯಿಲ್ಲದೆ ಅಲ್ಲಲ್ಲಿ ನಿಲುಗಡೆಯಾಗುತ್ತಿದೆ.
ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ ಕಚೇರಿಯಲ್ಲಿ ಲಂಚ ತಾಂಡವಾಡುತ್ತಿದ್ದು, ಇದರ ವಿರುದ್ಧ ಕಾಂಗ್ರೆಸ್ ನಾಯಕರು ಯಾವಾಗ ಹೋರಾಟ ಮಾಡುತ್ತಿರಿ ಎಂದು ಪ್ರಶ್ನಿಸಿದರು.
ಮಂಡಲದ ಪ್ರ.ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ,ಮಾಧ್ಯಮ ಪ್ರಮುಖರಾದ ಪುರುಷೋತ್ತಮ ಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.
