ಕೈಕಂಬ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಗುರುಪುರ ಸ್ಥಳೀಯ ಸಂಸ್ಥೆಯ ೨೦೨೪-೨೫ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಪುನಚ್ಚೇತನ ಶಿಬಿರವು ಆ. ೨೩ರಂದು ಮೂಡುಶೆಡ್ಡೆಯ ಶಾರದಾ ಶುಭೋದಯ ವಿದ್ಯಾಲಯದ ಸಭಾಗೃಹದಲ್ಲಿ ನಡೆಯಿತು.

ದಕ್ಷಿಣ ವಲಯ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಲಿಲ್ಲಿ ಪಾಯಸ್ ಮಾತನಾಡಿ, ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಉತ್ತಮ ಕೆಲಸ ಮಾಡುತ್ತಿದ್ದು, ಸಂಸ್ಥೆಯಿಂದ ಸ್ಥಳೀಯ ಮಟ್ಟದಲ್ಲಿ ಇನ್ನೂ ಹೆಚ್ಚಿನ ಕೆಲಸಗಳು ನಡೆಯುವಂತಾಗಲಿ ಎಂದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಗುರುಪುರ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಶೋಹನ್ ಅತಿಕಾರಿ ಮಾತನಾಡಿ, ನಾಡಿನಲ್ಲಿ ಉತ್ತಮ ಪ್ರಜೆಗಳ ರೂಪಿಸುವಲ್ಲಿ ಸಂಸ್ಥೆಯ ಪಾತ್ರ ಮಹತ್ತಾಗಿದೆ. ಇಲ್ಲೂ ಮೂಡುಬಿದ್ರೆಯಲ್ಲಿ ನಡೆದಂತಹ `ಜಾಂಬೂರಿ’ ಕಾರ್ಯಕ್ರಮ ಆಯೋಜಿಸುವ ಸಲಹೆ ಉತ್ತಮವಾಗಿದೆ. ಆ ಬಗ್ಗೆ ಎಲ್ಲರೂ ಸೇರಿ ಚರ್ಚಿಸೋಣ ಎಂದರು.

ಸಂಸ್ಥೆಯ ಉಪಾಧ್ಯಕ್ಷ ಸುನಿಲ್ ಜಿ. ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಜಗತ್ತಿನಲ್ಲೇ ಅತ್ಯಂತ ಶಿಸ್ತಿನ ಸಂಸ್ಥೆಯಾಗಿದೆ. ಸ್ಥಳೀಯ ಸಂಸ್ಥೆಯು ವರ್ಷಪೂರ್ತಿ ಉತ್ತಮ ಕಾರ್ಯಕ್ರಮ ಆಯೋಜಿಸುತ್ತ ಬಂದಿದ್ದು, ಇಲ್ಲೊಂದು ಜಾಂಬೂರಿ ಆಯೋಜಿಸಬೇಕು ಎಂದರು.
ದಕ್ಷಿಣ ಕನ್ನಡ ಜಿಲ್ಲಾ ತರಬೇತಿ ಆಯುಕ್ತೆ ಗೈಡ್ ಜಯಶ್ರೀ, ಶುಭೋದಯ ವಿದ್ಯಾಲಯದ ಉಪ-ಪ್ರಾಂಶುಪಾಲ ಗೋಪಾಲಕೃಷ್ಣ ಭಟ್ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಬಗ್ಗೆ ಮಾತನಾಡಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಕೋಶಾಧಿಕಾರಿ ಸುನಿಲ್ ಕುಮಾರ್ ಶೆಟ್ಟಿ ಸ್ವಾಗತಿಸಿ, ವಾರ್ಷಿಕ ವರದಿ ಮಂಡಿಸಿದರು. ಸ್ವರ್ಣಲತಾ ಅವರು ಸ್ಥಳೀಯ ಸಂಸ್ಥೆಯ ವತಿಯಿಂದ ೨೦೨೫-೨೬ನೇ ಸಾಲಿನಲ್ಲಿ ಯೋಜಿತ ಕಾರ್ಯಕ್ರಮಗಳ ಪಟ್ಟಿ ವಾಚಿಸಿದರು. ಶಿಕ್ಷಕಿ ಭವ್ಯಾ ಜಿ., ನಿರೂಪಿಸಿದರು. ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಹಾಗೂ ಗುರುಪುರ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಜಯಲಕ್ಷ್ಮೀ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಪ್ರತಿನಿಧಿಗಳು ಉಪಸ್ಥಿತರಿದ್ದರು. ಸ್ಥಳೀಯ ಸಂಸ್ಥೆಯ ಜೊತೆ ಕಾರ್ಯದರ್ಶಿ ದೈಹಿಕ ಶಿಕ್ಷಣ ಶಿಕ್ಷಕಿ ಪೂರ್ಣಿಮಾ ವಂದಿಸಿದರು
