ಕೈಕಂಬ : ರಾಷ್ತ್ರೀಯ ಹೆದ್ದಾರಿ ೧೬೯ರ ಗುರುಪುರ-ಪೊಳಲಿ ದ್ವಾರದ ಮಧ್ಯೆ ಬೆಳ್ಳಿಬೆಟ್ಟು ಬಸ್ ನಿಲ್ದಾಣದ ಎದುರು ಬುಧವಾರ ಮಧ್ಯಾಹ್ನ ಸಂಭವಿಸಿದ ಲಾರಿ ಮತ್ತು ಬಸ್ ಭೀಕರ ಮುಖಾಮುಖಿ ಅಪಘಾತದಲ್ಲಿ ಎರಡೂ ವಾಹನಗಳ ಚಾಲಕರು ಗಂಭೀರ ಗಾಯಗೊಂಡಿದ್ದಾರೆ.

ಮಂಗಳೂರಿನಿಂದ ಕಾರ್ಕಳದತ್ತ ಸಾಗುತ್ತಿದ್ದ ಬಸ್ ಮತ್ತು ಮಂಗಳೂರು ಕಡೆಗೆ ಹೋಗುತ್ತಿದ್ದ ೧೬ ವ್ಹೀಲ್ ಲಾರಿಯು ಬೆಳ್ಳಿಬೆಟ್ಟು ತಿರುವಿನಲ್ಲಿ ಅಪಘಾತಕ್ಕೀಡಾಗಿದೆ. ಬಸ್ ಮತ್ತು ಲಾರಿ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಅಪಘಾತದ ತೀವ್ರತೆಗೆ ಎರಡೂ ವಾಹನಗಳ ಚಾಲಕರು ಹೊರಬರಲಾಗದೆ ನರಳಾಡುತ್ತಿದ್ದು, ಸ್ಥಳೀಯರು ಗ್ಯಾಸ್ ಕಟ್ಟರ್ ಮೂಲಕ ಲಾರಿ ಮತ್ತು ಬಸ್ ಕೆಲವು ಭಾಗ ಕಟ್ ಮಾಡಿ ಹೊರಗೆ ತೆಗೆದಿದ್ದಾರೆ. ಇಬ್ಬರ ಕಾಲುಗಳು ಮುರಿತಕ್ಕೊಳಗಾಗಿದ್ದು, ತೀವ್ರ ರಕ್ತಸಿಕ್ತಗೊಂಡಿದ್ದರು. ಬಸ್ಸಿನಲ್ಲಿದ್ದ ಇತರ ಐದು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ನಗದು ಪತ್ತೆ :
ಚಾಲಕರನ್ನು ರಕ್ಷಿಸುವ ತುರ್ತು ಕಾರ್ಯಾಚರಣೆ ವೇಳೆ ಸ್ಥಳೀಯರು ಸಹಕರಿಸಿದ್ದಾರೆ. ಗುರುಪುರದ ಸೇವಾ ಬ್ರಿಗೇಡ್ ಆಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ. ಗ್ಯಾಸ್ ಕಟ್ಟರ್ ಮೂಲಕ ಬಸ್ನ ಒಂದು ಭಾಗ ಕಟ್ ಮಾಡುವಾಗ ಅಂದಾಜು ೬ ಲಕ್ಷ ರೂ ಮೊತ್ತದ ನಗದು ಬಂಡಲ್ ಪತ್ತೆಯಾಗಿದೆ. ರಫೀಕ್ ಗುರುಪುರ ಅವರು ಸ್ಥಳದಲ್ಲೇ ಇದ್ದ ಬಜ್ಪೆ ಪೊಲೀಸರಿಗೆ ನಗದು ಹಸ್ತಾಂತರಿಸಿದ್ದಾರೆ. ಬಜ್ಪೆ ವೃತ್ತ ನಿರೀಕ್ಷಕ ಬಾಲಕೃಷ್ಣ ಅವರು ಈ ವಿಷಯ ದೃಢಪಡಿಸಿದ್ದಾರೆ. ಬಜ್ಪೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
