ಗುರುಪುರ : ಮೂಡುಪೆರಾರ ಗ್ರಾಮದ ಬಜ್ಪೆ-ಕೈಕಂಬ ರಾಜ್ಯ ಹೆದ್ದಾರಿಯಲ್ಲಿ ಸ್ಥಳೀಯ ಕಾಯರಣೆಯ ನವರಂಗ್ ಫ್ರೆಂಡ್ಸ್‌ ನ ವತಿಯಿಂದ ತಮ್ಮ ಆತ್ಮೀಯ ಗೆಳೆಯ, ಪಡುಪೆರಾರ ಗ್ರಾಮ ಪಂಚಾಯತ್ ಸಿಬ್ಬಂದಿ ದಿ. ಪ್ರದೀಪ್ ಪೂಜಾರಿ ಅವರ ಸ್ಮರಣಾರ್ಥ ಸುಸಜ್ಜಿತ ಪ್ರಯಾಣಿಕರ ತಂಗುದಾಣ ನಿರ್ಮಿಸುತ್ತಿದ್ದು, ಅ. ೨೫ರಂದು ಉದ್ಘಾಟನೆಗೊಳ್ಳಲಿದೆ.

ಮೂಡುಪೆರಾರ ಮುಂಡಬೆಟ್ಟು ಶಾಲೆಪದವು ನಿವಾಸಿ, ಅವಿವಾಹಿತ ಪ್ರದೀಪ್(೩೧) ಅವರು ೨ ವರ್ಷಗಳ ಹಿಂದೆ ಸೆಪ್ಟೆಂಬರ್‌ನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದರು. ಪಂಚಾಯತ್ ಕರ್ತವ್ಯದ ಮೂಲಕ ಗ್ರಾಮಸ್ಥರ ಪ್ರೀತಿ ಗಳಿಸುವುದರೊಂದಿಗೆ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಇವರು ನವರಂಗ್ ಫ್ರೆಂಡ್ಸ್ನ ಕಾರ್ಯದರ್ಶಿ ಹಾಗೂ ಜವನೆರ್ ಪೆರಾರ(ರಿ) ಇದರ ಸಕ್ರಿಯ ಸದಸ್ಯರಾಗಿ ಜನಾನುರಾಗಿಯಾದ್ದರು.

ನವರಂಗ್ ಫ್ರೆಂಡ್ಸ್ನ ಮುಂದಾಳತ್ವದಲ್ಲಿ ಅಂದಾಜು ೨ ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿರುವ ನೂತನ ಪ್ರಯಾಣಿಕರ ತಂಗುದಾಣಕ್ಕೆ ಊರ ಹಾಗೂ ಪರವೂರ ಗಣ್ಯರ ನೆರವು, ಪಡುಪೆರಾರ ಗ್ರಾಪಂ ಆಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳ ಸಂಪೂರ್ಣ ಸಹಕಾರ ಸಿಕ್ಕಿದೆ. ತಂಗುದಾಣದ ಕಾಮಗಾರಿ ಶೇ. ೯೫ರಷ್ಟು ಪೂರ್ಣಗೊಂಡಿದ್ದು, ಮುಂದಿನ ಭಾನುವಾರ ಲೋಕಾರ್ಪಣೆಗೊಳ್ಳಲಿದೆ ಎಂದು ಫ್ರೆಂಡ್ಸ್÷ ಪದಾಧಿಕಾರಿಗಳು ತಿಳಿಸಿದರು.

ಪ್ರದೀಪ್ ಸ್ಮರಣೆ, ಮಳೆಗಾಲ ಮತ್ತು ಬೇಸಗೆಯಲ್ಲಿ ಸ್ಥಳೀಯವಾಗಿ ಶಾಲಾ ಮಕ್ಕಳು ಮತ್ತು ವಯೋವೃದ್ಧರಿಗೆ ಅನುಕೂಲವಾಗಲೆಂದು ಕಾಯರಣೆಯಲ್ಲಿ ಹೊಸದಾಗಿ ಪ್ರಯಾಣಿಕರ ತಂಗುದಾಣ ನಿರ್ಮಾಣವಾಗುತ್ತಿದೆ. ಅ. ೨೫ರಂದು ಬೆಳಿಗ್ಗೆ ೯:೩೦ಕ್ಕೆ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅವರು ನೂತನ ತಂಗುದಾಣ ಉದ್ಘಾಟಿಸಲಿದ್ದಾರೆ.

ಸಮಾರಂಭದಲ್ಲಿ ಫ್ರೆಂಡ್ಸ್ ಅಧ್ಯಕ್ಷ ಯೋಗೀಶ್ ಆಳ್ವ ಹಾಗೂ ಪದಾಧಿಕಾರಿಗಳು, ಶ್ರೀ ಕ್ಷೇತ್ರ ಬಲವಾಂಡಿ ಮುಕ್ಕಾಲ್ದಿ ಬಾಲಕೃಷ್ಣ ಶೆಟ್ಟಿ ಅಳಿಕೆ, ಬಜ್ಪೆ ಪಟ್ಟಣ ಪಂಚಾಯತ್ ಅಧ್ಯಕ್ಷ ಲೋಕೇಶ್ ಪೂಜಾರಿ, ಪಡುಪೆರಾರ ಗ್ರಾಪಂ ಪಿಡಿಒ ಅನಿತಾ ಕ್ಯಾಥರಿನ್, ಪಂಚಾಯತ್ ಸಿಬ್ಬಂದಿ ವರ್ಗ, ನಿವೃತ್ತ ಯೋಧ ಶಶಿಕಿರಣ್ ಶೆಟ್ಟಿ, ಉದ್ಯಮಿಗಳಾದ ಪ್ರತಾಪ್ ಭಂಡಾರಿ, ಜಯ ಕೋಟ್ಯಾನ್, ಶ್ರೀನಿವಾಸ ಶೆಟ್ಟಿ ನಾರ್ಯ, ಜಿಪಂ ಮಾಜಿ ಸದಸ್ಯ ಕೃಷ್ಣ ಅಮೀನ್ ಮತ್ತಿತರ ಗಣ್ಯರು ಉಪಸ್ಥಿತರಿರುವರು.

ನವರಂಗ್ ಫ್ರೆಂಡ್ಸ್ :

ಸಮಾಜಮುಖಿ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವ ನವರಂಗ್ ಫ್ರೆಂಡ್ಸ್, ಕಳೆದ ೧೦ ವರ್ಷಗಳಲ್ಲಿ ಹಲವು ಅಶಕ್ತರಿಗೆ ನೆರವಾಗಿರುವುದಲ್ಲದೆ, ಕಷ್ಟದಲ್ಲಿರುವ ಕುಟುಂಬಗಳ ಕಣ್ಣೊರಸುವ ಕೆಲಸ ಮಾಡುತ್ತ ಬಂದಿದೆ. ಸದಾ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಗಳ ಮೂಲಕ ಹೆಸರು ಮಾಡುತ್ತಿರುವ ಫ್ರೆಂಡ್ಸ್, ಗ್ರಾಮಸ್ಥರ ಪ್ರೀತಿಗೆ ಪಾತ್ರವಾಗಿದೆ.

 

By Suddi9

Leave a Reply

Your email address will not be published. Required fields are marked *