ಗುರುಪುರ : ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ(ನಿ) ಇದರ ೨೦೨೫-೨೬ನೇ ಸಾಲಿನ ವಾರ್ಷಿಕ ಮಹಾಸಭೆ ಸೆ. ೨೨ರಂದು ಗುರುಪುರ ಕುಕ್ಕುದಕಟ್ಟೆಯ ಶ್ರೀ ವೈದ್ಯನಾಥ ಸಮದಾಯ ಕಲ್ಯಾಣ ಭವನದಲ್ಲಿ ಸಂಘದ ಅಧ್ಯಕ್ಷ ಓಂ ಪ್ರಕಾಶ್ ಶೆಟ್ಟಿ ಅವರು ಅಧ್ಯಕ್ಷತೆಯಲ್ಲಿ ಜರುಗಿತು.

ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಿಶೋರ್ ಶೆಟ್ಟಿ ಅವರು ಹಿಂದಿನ ವರ್ಷದ ನಿರ್ಣಯಗಳು ೨೦೨೫-೨೬ನೇ ಸಾಲಿನ ಆಡಳಿತ ವರದಿ, ಲೆಕ್ಕಪತ್ರ ಅಂಗೀಕಾರ, ೨೦೨೬-೨೭ನೇ ವರ್ಷಕ್ಕೆ ಕೈಗೊಂಡ ಹೊಸ ಯೋಜನೆಗಳ ಮಂಜೂರಾತಿ ವರದಿ ಓದಿದರು. ಸಂಘದ ಸಿಬ್ಬಂದಿ ಶ್ರೀದೇವಿ ಸಹಕರಿಸಿದರೆ, ಬ್ಯಾಂಕ್‌ನ ಸಲಹೆಗಾರ ಚಿತ್ತರಂಜನ್‌ದಾಸ್ ಶೆಟ್ಟಿ ಅವರು ವರದಿ ಮೇಲಿನ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದರು.

ಸಂಘದ ಹಿಂದಿನ ಆಡಳಿತವಿದ್ದ ಅವಧಿಯಲ್ಲಿ ವಾಮಂಜೂರಿನಲ್ಲಿ ನಿರ್ಮಿಸಲಾದ ಕಟ್ಟಡ ಕಾಮಗಾರಿಯಲ್ಲಿ ನಡೆದಿರುವ ಅವ್ಯಹಾರಗಳ ತನಿಖೆ ಎಲ್ಲಿಗೆ ಬಂದು ನಿಂತಿದೆ ಎಂದು ಮಾಜಿ ಅಧ್ಯಕ್ಷ ವಿನೋದ್ ಮಾಡ, ಸನತ್ ಕುಮಾರ್ ರೈ ಮತ್ತಿತರ ಹಲವು ಸದಸ್ಯರು ಪ್ರಶ್ನಿಸಿದರು.

ಕಟ್ಟಡ ನಿರ್ಮಾಣದಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ಕಲಂ ನಂಬ್ರ `೬೪’ ತನಿಖೆ ನಡೆದಿದ್ದು, ಅಂದಾಜು ೪೮ ಲಕ್ಷ ರೂ ಅವ್ಯವಹಾರದ ನಡೆದಿರುವುದು ಸಾಬೀತಾಗಿದೆ. ಪ್ರತಿವಾದಿಗಳು ಬಡ್ಡಿ ಸಹಿತ ಈ ಮೊತ್ತ ಭರಿಸಬೇಕೆಂದು ಕೋರ್ಟ್ ಆದೇಶವಾಗಿದೆ. ಕಲಂ ನಂಬ್ರ ೬೯ರ ಪ್ರಕಾರ ಬಾಕಿ ಮೊತ್ತ ವಸೂಲಾತಿಗೆ ಅರ್ಜಿ ಸಲ್ಲಿಸಲಾಗಿದೆ. ಸಂಘಕ್ಕೆ ಬರಬೇಕಿರುವ ಮೊತ್ತ ವಸೂಲಾತಿಗೆ ಸಾಧ್ಯವಿರುವ ಎಲ್ಲ ಪ್ರಯತ್ನ ನಡೆಸುತ್ತಿದ್ದೇವೆ ಎಂದ ಸಂಘದ ಅಧ್ಯಕ್ಷ ಓಂ ಪ್ರಕಾಶ್ ಶೆಟ್ಟಿ, ಮೊತ್ತ ವಸೂಲಾತಿಗೆ ಲೋಕಾಯುಕ್ತ ತನಿಖೆ ಅಥವಾ ಹೈಕೋರ್ಟ್ ಅಥವಾ ಸಹಕಾರಿ ನಿಬಂಧನೆಗಳ ಅವಕಾಶಗಳಿದ್ದು, ಈ ನಿಟ್ಟಿನಲ್ಲಿ ಸಂಘ ತೆಗೆದುಕೊಳ್ಳುವ ನಿರ್ಣಯಗಳಿಗೆ ಸದಸ್ಯರ ಸಹಕಾರ ಕೋರಿದರು.

ವಾಮಂಜೂರು ಕಟ್ಟಡದಲ್ಲಿರುವ ಸಂಘದ ಕಚೇರಿಯ ನಿರ್ವಹಣೆ ಉತ್ತಮವಾಗಿಲ್ಲ. ಹಿರಿಯ ವ್ಯಕ್ತಿಗಳಿಗೆ ಅನುಕೂಲವಾಗುವಂತೆ ಕಟ್ಟಡ ಕಚೇರಿಯನ್ನು ಕೆಳ ಅಂತಸ್ತಿಗೆ ಸ್ಥಳಾಂತರಿಸಬೇಕು ಎಂದು ಸುಧಾಕರ ಕಾರಂತ ಮನವಿ ಮಾಡಿಕೊಂಡರು. ಮೂಡುಶೆಡ್ಡೆಯಲ್ಲಿ ಸಂಘದ ಹೊಸ ಕಚೇರಿ ಆರಂಭಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಕೆಲವೇ ಸಮಯದಲ್ಲಿ ಕಚೇರಿ ತೆರೆದುಕೊಳ್ಳಲಿದೆ ಎಂದು ಅಧ್ಯಕ್ಷರು ಭರವಸೆ ನೀಡಿದರು.

ಕಳೆದ ಆರ್ಥಿಕ ವರ್ಷದಲ್ಲಿ ಸಂಘವು ಅಂದಾಜು ೮೮ ಲಕ್ಷ ರೂ ನಿವ್ವಳ ಲಾಭದಲ್ಲಿತ್ತು. ಆಗ ಶೇ. ೧೨ ಡಿವಿಡೆಂಟ್ ಘೋಷಿಸಲಾಗಿತ್ತು. ಈ ಬಾರಿ ಸಂಘವು ಅಂದಾಜು ೮೯ ಲಕ್ಷ ರೂ ನಿವ್ವಳ ಲಾಭ ಗಳಿಸಿದ್ದು, ಶೇ. ೧೪ ಡಿವಿಡೆಂಟ್ ನೀಡಲು ತೀರ್ಮಾನಿಸಲಾಗಿತ್ತು. ಸದಸ್ಯರ ಒತ್ತಾಯದ ಮೇರೆಗೆ ಅಧ್ಯಕ್ಷರು ಈ ಬಾರಿ ಶೇ. ೧೫ ಡಿವಿಡೆಂಟ್ ನೀಡುವುದಾಗಿ ಘೋಷಿಸಿದರು.

ಹೊಸ ಆಡಳಿತಾವಧಿಯಲ್ಲಿ ಸಾಲ ವಸೂಲಾತಿಗೆ ಎಲ್ಲ ರೀತಿಯ ಪ್ರಯತ್ನ ಮುಂದುವರಿಸಿದ್ದೇವೆ. ಸಂಘದ ಅಭಿವೃದ್ಧಿಗಾಗಿ ಆಡಳಿತ ಮಂಡಳಿ ತೆಗೆದುಕೊಳ್ಳುವ ಕ್ರಮಗಳಿಗೆ ಸದಸ್ಯರ ಪೂರ್ಣ ಸಹಕಾರ ಅಗತ್ಯವಿದೆ. ಸಂಘದ ಸದಸ್ಯರಿಗೆ ವಿಮೆ ಮಾಡುವ ಯೋಜನೆ ಇದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ರೈತರಿಗೆ ಅನುಕೂಲದ ಯೋಜನೆಗಳ ಬಗ್ಗೆ ಸಂಘ ಗಮನಹರಿಸಲಿದೆ ಎಂದು ಅಧ್ಯಕ್ಷರು ಹೇಳಿದರು.

ಸಂಘದ ಅಧ್ಯಕ್ಷ ಓಂ ಪ್ರಕಾಶ್ ಶೆಟ್ಟಿ ಸ್ವಾಗತಿಸಿದರು. ಸಂಘದ ಸಿಬ್ಬಂದಿ ಶ್ರೀದೇವಿ ನಿರೂಪಿಸಿದರು. ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಉಪಾಧ್ಯಕ್ಷ ಜಿ. ಎಂ. ಉದಯ ಭಟ್, ನಿರ್ದೇಶಕರಾದ ಪದ್ಮನಾಭ ಆಳ್ವ ಕೆ, ದಿನೇಶ್ ಜೆ. ಕರ್ಕೇರ, ಶೀನ ಕೋಟ್ಯಾನ್, ಸಚಿನ್ ಅಡಪ, ನಳಿನಾಕ್ಷಿ ಶೆಟ್ಟಿ, ಲತಾ ಶೆಟ್ಟಿ, ನಾಗಪ್ಪ ಬಿ, ರಾಜೇಶ್, ಶ್ರೀನಿವಾಸ ಸುವರ್ಣ ಮಲ್ಲೂರು, ಸಹಕಾರಿ ಬ್ಯಾಂಕ್ ಪ್ರತಿನಿಧಿ ಸಂಜಯ್ ಅತಿಕಾರಿ ಉಪಸ್ಥಿತರಿದ್ದರು. ನಿರ್ದೇಶಕ ಕಿಶೋರ್ ಕುಮಾರ್ ವಂದಿಸಿದರು.

By Suddi9

Leave a Reply

Your email address will not be published. Required fields are marked *