ಎಡಪದವು ೨೦೨೪-೨೫ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ
ಕೈಕಂಬ: ಎಡಪದವು ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಪಂಚಾಯತ್ ಅಧ್ಯಕ್ಷೆ ಅನಸೂಯ ಭಂಡಾರಿ ಅಧ್ಯಕ್ಷತೆಯಲ್ಲಿ ನಡೆದ ತೆಂಕ ಎಡಪದವು ಪಂಚಾಯತ್ ನ ೨೦೨೪-೨೫ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಪ್ರಾರಂಭದಲ್ಲಿಯೇ ಗದ್ದಲ ಗೊಂದಲದ ಗೂಡಾಗಿ,ಅಧಿಕಾರಿಗಳ ಗೈರು ಹಾಜರಿಗೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಗ್ರಾಮಸಭೆ ಮುಂದೂಡಲು ಅಗ್ರಹಿಸಿದ ಘಟನೆ ನಡೆದಿದ್ದು, ಕೊನೆಗೆ ನೋಡಲ್ ಅಧಿಕಾರಿಯಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್ ಅವರ ಭರವಸೆಯಂತೆ ಗ್ರಾಮಸಭೆ ನಡೆಯಲು ಗ್ರಾಮಸ್ಥರು ಅವಕಾಶ ಮಾಡಿಕೊಟ್ಟರು.
ಶುಕ್ರವಾರ ಬೆಳಿಗ್ಗೆ ೧೧ಗಂಟೆಗೆ ಗ್ರಾಮಸಭೆ ಪ್ರಾರಂಭವಾಗಬೇಕಿತ್ತು. ಆದರೆ ನೋಡಲ್ ಅಧಿಕಾರಿ ಬಂದಿರಲಿಲ್ಲ ನೋಡಲ್ ಅಧಿಕಾರಿ ಬರದೇ ಸಭೆ ಪ್ರಾರಂಭಕ್ಕೆ ಗ್ರಾಮಸ್ಥರು ಅವಕಾಶ ನೀಡಲಿಲ್ಲ. ತಡವಾಗಿ ಆಗಮಿಸಿದ ನೋಡಲ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರಿಗೆ ತಾನು ತಡವಾಗಿ ಬರಲು ಕಾರಣ ತಿಳಿಸಿದ ಬಳಿಕ ಲೋಕೋಪಯೋಗಿ ಸಹಿತ ಕೆಲವು ಅಧಿಕಾರಿಗಳು ಗೈರು ಆಗಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಸಭೆಯನ್ನು ಮುಂದೂಡಿ ಎಂದು ಅಗ್ರಹಿಸಿದರು.
ಈ ವೇಳೆ ಸಭೆಯಲ್ಲಿ ಭಾರೀ ಮಾತಿನ ಚಕಮಕಿ ನಡೆಯಿತು. ಪಂಚಾಯತ್ ಉಪಾಧ್ಯಕ್ಷರು ಮತ್ತು ಗ್ರಾಮಸ್ಥರ ನಡುವೆ ಭಾರೀ ವಾಗ್ವಾದ ನಡೆಯಿತು. ಗ್ರಾಮದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಅಧಿಕಾರಿಗಳೇ ಇಲ್ಲವಾದರೆ ಗ್ರಾಮಸಭೆ ಯಾಕೆ? ಗ್ರಾಮಸ್ಥರು ಅಧಿಕಾರಿಗಳಿಗೆ ಕಾಯಬೇಕೆ? ನಮಗೆ ಬೇರೆ ಕೆಲಸ ಇಲ್ಲವೇ ಎಂದು ಗ್ರಾಮಸ್ಥರು ಸಭೆಯಲ್ಲಿ ಧಿಕ್ಕಾರ ಕೂಗಿ ಸಭೆಯಿಂದ ಹೊರ ನಡೆಯಲು ಸಿದ್ಧತೆ ನಡೆಸಿದಾಗ ನೋಡಲ್ ಅಧಿಕಾರಿಯವರು ಗೈರು ಹಾಜರಾಗಿದ್ದ ಅಧಿಕಾರಿಗಳಿಗೆ ಮೊಬೈಲ್ ಕರೆ ಮಾಡಿ ಸಭೆಗೆ ಬರುವಂತೆ ಕೋರಿದ ಬಳಿಕ ಗ್ರಾಮಸಭೆ ಸುಸೂತ್ರವಾಗಿ ನಡೆಯಿತು.
ಬಳಿಕ ಲೋಕೋಪಯೋಗಿ, ಅರಣ್ಯ ಸಹಿತ ಅಧಿಕಾರಿಗಳು ಸಭೆಗೆ ಹಾಜರಾದರು.
ಎಡಪದವು ಅಂಗನವಾಡಿ ಕೇಂದ್ರ ತೆರೆಯುವಾಗ ತಡವಾಗುತ್ತದೆ. ಸಣ್ಣ ಮಕ್ಕಳನ್ನು ಅಂಗನವಾಡಿಗೆ ಕರೆತಂದಾಗ ಯಾರೂ ಇರುವುದಿಲ್ಲ ನಾವು ಯಾವ ಧೈರ್ಯದಿಂದ ಮಕ್ಕಳನ್ನು ಅಲ್ಲಿ ಬಿಟ್ಟು ಬರಲು ಸಾಧ್ಯ ಎಂದು ಗ್ರಾಮಸ್ಥರು ದೂರಿದಾಗ ಉತ್ತರಿಸಿದ ಅಂಗನವಾಡಿಗಳ ಮೇಲ್ವಿಚಾರಕಿ ಮಾಲಿನಿ, ಅಂಗನವಾಡಿ ಸಹಾಯಕಿ ಹುದ್ದೆ ಒಂದು ವರ್ಷದಿಂದ ಖಾಲಿ ಇದೆ ಅಲ್ಲದೇ ಅಂಗನವಾಡಿ ಕಾರ್ಯಕರ್ತೆಗೆ ಅಸೌಖ್ಯದ ಕಾರಣ ಒಂದೆರಡು ದಿನ ಸಮಸ್ಯೆಯಾಗಿದೆ ಮುಂದೆ ಸಮಸ್ಯೆಯಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದರು.
ಎಡಪದವಿನಲ್ಲಿ ಸರಕಾರಿ ಆಸ್ಪತ್ರೆ ಸ್ಥಾಪನೆಯ ಬೇಡಿಕೆ ಈ ಗ್ರಾಮಸಭೆಯಲ್ಲೂ ಮತ್ತೆ ಕೇಳಿಬಂದಿದ್ದು, ಈ ಬಗ್ಗೆ ಜಾಗ ಗುರುತಿಸಿಕೊಡುತ್ತೇವೆ. ಆದರೆ ಆಸ್ಪತ್ರೆ ಸ್ಥಾಪನೆಗೆ ಕೆಲವು ನಿಯಮಗಳಿದ್ದು ನಾಲ್ಕು ಕಿಲೋಮೀಟರ್ ಸುತ್ತಮುತ್ತ ಬೇರೆ ಸರಕಾರಿ ಆಸ್ಪತ್ರೆ ಇರಬಾರದು ಮತ್ತು ೨೦ ಸಾವಿರ ಜನಸಂಖ್ಯೆ ಇದ್ದರೆ ಮಾತ್ರ ಆಸ್ಪತ್ರೆ ಸ್ಥಾಪನೆ ಸಾಧ್ಯ ಈ ಬಗ್ಗೆ ಕೃಮ ಕೈಗೊಲ್ಲುವುದಾಗಿ ಉಪಾಧ್ಯಕ್ಷರು ಭರವಸೆ ನೀಡಿದರು.
ಅರಣ್ಯ ಇಲಾಖೆಯ ದಿನೇಶ್ ಕುಮಾರ್, ಎಡಪದವು ಮೆಸ್ಕಾಂ ಶಾಖಾಧಿಕಾರಿ ವೀರಭದ್ರಪ್ಪ, ಸಮಾಜ ಕಲ್ಯಾಣ ಇಲಾಖೆಯ ಭಾಗ್ಯವತಿ, ಕೃಷಿ ಇಲಾಖೆಯ ಚಿದಂಬರ ಮೂರ್ತಿ ಮತ್ತು ಆರೋಗ್ಯ, ಶಿಕ್ಷಣ, ಪೊಲೀಸ್, ಕಾರ್ಮಿಕ ಇಲಾಖೆ, ಜಿಲ್ಲಾಪಂಚಾಯತ್ ಇಂಜಿನಿಯರಿAಗ್ ಇಲಾಖೆ ಸಹಿತ ಇತರ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗಳ ಯೋಜನೆಗಳ ಬಗ್ಗೆ ಸಭೆಯಲ್ಲಿ ಮಾತನಾಡಿದರು.ಪಂಚಾಯತ್ ನ ಎಲ್ಲಾ ಸದಸ್ಯರುಗಳು, ಪಂ.ಅಭಿವೃದ್ಧಿ ಅಧಿಕಾರಿ ರಾಜೀವಿ ನಾಯ್ಕ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಇಸ್ಮಾಯಿಲ್ ಸ್ವಾಗತಿಸಿ, ವರದಿ ಮಂಡಿಸಿ ಸಭೆಯನ್ನು ನಡೆಸಿಕೊಟ್ಟರು.
ಸಿಬ್ಬಂದಿ ಸಹಕರಿಸಿದರು.