ಬೆಳೆ ಸಮೀಕ್ಷೆ ಮಾಡದ ರೈತರ ಜಮೀನಿಗೂ ಅವಕಾಶ ಮಾಡುವಂತೆ ಪ್ರಭು ಆಗ್ರಹ
ಬಂಟ್ವಾಳ: 2024-25 ನೇ ಸಾಲಿನ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯ ಪ್ರಯೋಜನವನ್ನು ಎಲ್ಲಾ ಅಡಿಕೆ ಬೆಳೆಯುವ ರೈತರು ಪಡೆಯುವಂತಾಗಲೂ ಬೆಳೆ ಸಮೀಕ್ಷೆ ಮಾಡದಿರುವ ರೈತರ ಜಮೀನಿಗೂ ಅವಕಾಶ ಮಾಡಿಕೋಡಬೇಕು ಹಾಗೂ ಇಲಾಖಾ ವತಿಯಿಂದಲೇ ಈ ವರ್ಷ ಬೆಳೆ ಸಮೀಕ್ಷೆಯನ್ನು ತಕ್ಷಣ ಆರಂಭಿಸಿ ರೈತರಿಗೆ ಅವಕಾಶ ಮಾಡಿಕೊಡುವಂತೆ ಬಂಟ್ವಾಳ ತಾ.ನ ಸಿ.ಎ.ಬ್ಯಾಂಕ್ ಅಧ್ಯಕ್ಷ ಪ್ರಭಾಕರ ಪ್ರಭು ಅವರು ರಾಜ್ಯ ತೋಟಗಾರಿಕಾ ಸಚಿವರನ್ನು ಮನವಿ ಮೂಲಕ ಒತ್ತಾಯಿಸಿದ್ದಾರೆ.
ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಅಡಿಕೆ ಮತ್ತು ಕರಿಮೆಣಸು , ಬೆಳೆಗಳಿಗೆ 2024-25 ನೇ ಸಾಲಿಗೆ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಗೆ ಪ್ರಿಮಿಯಂ ಮೊತ್ತ ಪಾವತಿಸಿ ನೋಂದಾವಣೆ ಮಾಡಲು ಜುಲೈ ತಿಂಗಳಅಂತ್ಯದವರೆಗೆ ಅವಕಾಶ ಕಲ್ಪಿಸಲಾಗಿದೆ . ಈ ಮಹತ್ವಾಕಾಂಕ್ಷೆ ಯೋಜನೆಯ ಪ್ರಯೋಜನ ಪಡೆಯಲು ಅಡಿಕೆ ಬೆಳೆಗಾರರು ಮತ್ತು ಕರಿಮೆಣಸು ಬೆಳೆಗಾರರು , ಪ್ರಿಮಿಯಂ ಮೊತ್ತ ಪಾವತಿಸಲು ಸ್ಥಳೀಯ ಪ್ರಾಥಮಿಕ ಸಹಕಾರ ಸಂಘಗಳ ಕಛೇರಿಗಳಿಗೆ ಬಂದು ಅಗತ್ಯ ದಾಖಲೆಗಳನ್ನು ನೀಡುತ್ತಿದ್ದಾರೆ .
ಆದರೆ ಬೆಳೆ ಸಮೀಕ್ಷೆ ತಂತ್ರಾಂಶದಲ್ಲಿ 2023-24 ನೇ ಸಾಲಿನಲ್ಲಿ ಬೆಳೆ ಸಮೀಕ್ಷೆ ಮಾಡದ ರೈತರ ಜಮೀನಿನ ವಿವರ ತೋರಿಸದೇ ಇರುವುದರಿಂದ ಕಳೆದ ಬಾರಿ ಬೆಳೆ ಸಮೀಕ್ಷೆ ಮಾಡದ ಹಲವಾರು ಮಂದಿ ಅಡಿಕೆ , ಕರಿಮೆಣಸು ಬೆಳೆಯುವ ರೈತರು ಈ ಯೋಜನೆಯಿಂದ ವಂಚಿತರಾಗಿದ್ದಾರೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಎಷ್ಟೋ ಮಂದಿ ರೈತರ ಮನೆಯಲ್ಲಿ ಸ್ಮಾರ್ಟ್ ಪೋನ್ ಇರುವುದಿಲ್ಲ, ಕೆಲವೊಂದು ಕಡೆಗಳಲ್ಲಿ ನೆಟ್ವರ್ಕ್ ಸಮಸ್ಯೆ , ಇನ್ನೂ ಕೆಲವು ರೈತರಿಗೆ ಸ್ಮಾರ್ಟ್ ಪೋನ್ ಇದ್ದರೂ ಬೆಳೆ ಸಮೀಕ್ಷೆ ಮಾಡಲು ಮಾಹಿತಿ ಇರುವುದಿಲ್ಲ,ಈ ಹಿನ್ನಲೆಯಲ್ಲಿ 2024-25 ನೇ ಸಾಲಿನ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯ ಪ್ರಯೋಜನವನ್ನು ಎಲ್ಲಾ ಅಡಿಕೆ ಬೆಳೆಯುವ ರೈತರು ಪಡೆಯುವಂತಾಗಲೂ ಬೆಳೆ ಸಮೀಕ್ಷೆ ಮಾಡದಿರುವ ರೈತರ ಜಮೀನಿಗೆ ಸಹ ಅವಕಾಶ ಮಾಡಿಕೋಡಬೇಕು ಹಾಗೂ ಇಲಾಖಾ ವತಿಯಿಂದಲೇ ಈ ವರ್ಷ ಬೆಳೆ ಸಮೀಕ್ಷೆ ಮಾಡಿಸಿ ರೈತರಿಗೆ ಅವಕಾಶ ಮಾಡಿಕೊಡಬೇಕಂದು ಆಗ್ರಹಿಸಿದ್ದಾರೆ.
ಪ್ರತಿಯನ್ನು ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಅಭಿವೃದ್ದಿ ಆಯುಕ್ತರು,ತೋಟಗಾರಿಕಾ ಇಲಾಖಾ ನಿರ್ದೇಶಕರಿಗೂರವಾನಿಸಿದ್ದಾರೆ.