ಹೋರಾಟಗಾರ ಬಿ.ಎಂ.ಪ್ರಭಾಕರ ದೈವಗುಡ್ಡೆ ಅವರಿಗೆ ಸಾರ್ವಜನಿಕ ಗೌರವಾರ್ಪಣೆ
ಬಂಟ್ವಾಳ:ದ.ಕ.ಜಿಲ್ಲಾ ಕಾರು ಮತ್ತು ವ್ಯಾನ್ ಚಾಲಕ,ಮಾಲಕರ ಸಂಘದ ಮಾಜಿ ಅಧ್ಯಕ್ಷರು,ಬಂಟ್ಚಾಳ ಸಾಮಾಜಿಕ ನ್ಯಾಯಪರ ಸಮಿತಿಯ ಸ್ಥಾಪಕ, ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ನಿಕಟಪೂರ್ವಾಧ್ಯಕ್ಷರೂ, ಹುಟ್ಟು ಹೋರಾಟಗಾರರಾದ ಬಿ.ಎಂ.ಪ್ರಭಾಕರ ದೈವಗುಡ್ಡೆ ಅವರಿಗೆ ಸಾರ್ವಜನಿಕ ಗೌರವಾರ್ಪಣಾ ಕಾರ್ಯಕ್ರಮ ಭಾನುಬಾರ ಬಿ.ಸಿ.ರೋಡಿನ ರೋಟರಿ ಕ್ಲಬ್ ಸಭಾ ಭವನದಲ್ಲಿ ನಡೆಯಿತು.
ಮಾಜಿ ಸಚಿವ ಬಿ.ರಮಾನಾಥ ರೈ ಅವರು ಸಾರ್ವಜನಿಕರ ಪರವಾಗಿ ಹೋರಾಟಗಾರ ಪ್ರಭಾಕರ ದೈವಗುಡ್ಡೆ ಅವರನ್ನು ಸನ್ಮಾನಿಸಿ ಮಾತನಾಡಿ,ಜೀವನದುದ್ದಕ್ಕು ಬಡವರ, ಶ್ರಮಿಕರ ಪರ ಹಾಗೂ ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ತನ್ನ ಶಕ್ತಿಮೀರಿ ಪ್ರಯತ್ನಿಸಿದವರನ್ನು ಗುರುತಿಸಿ ಗೌರವಾರ್ಪಣೆ ಮಾಡುವ ಕಾರ್ಯ ಅರ್ಥಪೂರ್ಣವಾದ ಆಚರಣೆಯಾಗಿದೆ ಎಂದರು.
ಆರ್ಥಿಕ ಶಕ್ತಿವಂತರನ್ನು ಗುರುತಿಸಿ ಸನ್ಮಾನಿಸುತ್ತಿರುವ ಈ ಕಾಲಘಟ್ಟದಲ್ಲಿ ಅಧಿಕಾರ,ಅಂತಸ್ತು ಇಲ್ಲದವರನ್ನು ಕೂಡ ಸಮಾಜ ಗುರುತಿಸಿ ಗೌರವಿಸುತ್ತದೆ ಎಂಬುದಕ್ಕೆ ಪ್ರಭಾಕರ ದೈವಗುಡ್ಡೆ ಅವರೇ ಉದಾಹರಣೆಯಾಗಿದೆ ಎಂದ ಅವರುಜನಪರ ಹೋರಾಟಗಳಲ್ಲಿ ಬಂಟ್ವಾಳ ತಾಲೂಕು ಸದಾ ಮುಂಚೂಣಿಯಲ್ಲಿದ್ದು,
ಸಾಮಾಜಿಕ ಅಸಮಾನತೆ,ವ್ಯವಸ್ಥೆಯ ವಿರುದ್ಧ ಸದಾ ಜನಜಾಗೃತಿ,ಬಡವರ ಕಣ್ಣೀರೊರೆಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಪ್ರಭಾಕರ ದೈವಗುಡ್ಡೆ ಅವರು ಸಾಮಾಜಕ್ಕಾಗಿ ಮಾಡಿರುವ ಸೇವೆ ಅಪಾರವಾಗಿದೆ ಎಂದರು.
ಬ್ರಹ್ಮಕೊಟ್ಲುವಿನ ಅವೈಜ್ಞಾನಿಕ ಟೋಲ್ ನಿಂದ ಜನಸಾಮಾನ್ಯರಿಗಾಗುವ ಅನ್ಯಾಯ,ತೊಂದರೆಯ ಬಗ್ಗೆ ತನ್ನ ಜೊತೆ ಹಲವು ಚರ್ಚಿಸಿದ್ದರು. ಜಗತ್ತಿನ ಎಲ್ಲಿಯು ಇಲ್ಲದ ಬ್ರಹ್ಮರಕೊಟ್ಲು ಟೋಲ್ ಗೇಟ್ ಅವ್ಯವಸ್ಥೆಯ ವಿರುದ್ಧ ಒಗ್ಗಟ್ಟಿನ ಹೋರಾಟದ ಅಗತ್ಯವಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಭಾಕರ ದೈವಗುಡ್ಡೆ ಅವರು ಸಾರ್ವಜನಿಕರೇ ನನ್ನ ಆಸ್ತಿಯಾಗಿದ್ದು,ಜೀವನದಲ್ಲಿ ಬೇರೇನನ್ನು ಬಯಸಿಲ್ಲ,ತನ್ನ ಸುದೀರ್ಘಕಾಲದ ಹೋರಾಟದಲ್ಲಿ ಸಹಕರಿಸಿದ ಎಲ್ಲರಿಗೂ ತಾನು ಕೃತಜ್ಞನಾಗಿದ್ದೆನೆ ಎಂದರು.
ಬಂಟ್ವಾಳ ತಾಲೂಕು ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿಯ ಅಧ್ಯಕ್ಷ
ಮೋಹನ್ ಶೆಟ್ಟಿ ಪಂಜಿಕಲ್ಲು ಸಭಾಧ್ಯಕ್ಷತೆ ವಹಿಸಿದ್ದರು.ಮಾನವ ಬಂಧತ್ವ ವೇದಿಕೆಯ ಮಂಗಳೂರು ವಿಭಾಗದ ಸಂಚಾಲಕ ಕೆ. ಎಸ್.ಸತೀಶ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಕಾರ್ಯನಿರತ ಪತ್ರಕರ್ತರ ಸಂಘ ಬಂಟ್ವಾಳದ ಮಾಜಿ ಅಧ್ಯಕ್ಷ ಸಂದೀಪ್ ಸಾಲ್ಯಾನ್ ಪತ್ರಕರ್ತರೊಂದಿಗೆ ಪ್ರಭಾಕರ ದೈವಗುಡ್ಡೆ ಅವರ ಒಡನಾಟಗಳನ್ನು ವಿವರಿಸಿದರು. ಪತ್ರಕರ್ತ ಹರೀಶ್ ಮಾಂಬಾಡಿ ಹಾಗೂ ಸಾಮಾಜಿಕ ನ್ಯಾಯಪರ ಹೋರಾಟ ಸಮಿತಿಯ ಕೃಷ್ಣ ಅಲ್ಲಿಪಾದೆ ಮಾತನಾಡಿದರು. ಸಮಾನ ಮನಸ್ಕ ಸಮನ್ವಯ ಸಮಿತಿ ಗೌರವಾಧ್ಯಕ್ಷ ರಾಜ ಚಂಡ್ತಿಮಾರ್ ಉಪಸ್ಥಿತರಿದ್ದರು. ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಬಂಟ್ವಾಳ್ ಸ್ವಾಗತಿಸಿದರು. ಕಾರ್ಮಿಕ ಮುಖಂಡ ಬಿ.ಶೇಖರ್ ಪ್ರಾಸ್ತಾವನೆಗೈದರು. ಪತ್ರಕರ್ತ ಸಲೀಂ ಬೋಳಂಗಡಿ ಸನ್ಮಾನಪತ್ರ ವಾಚಿಸಿದರು. ಎಂ.ಎಚ್.ಮುಸ್ತಫಾ ಬೋಳಂಗಡಿ ವಂದಿಸಿದರು. ರಂಗಕರ್ಮಿ ಎಚ್.ಕೆ.ನಯನಾಡು ಕಾರ್ಯಕ್ರಮ ನಿರ್ವಹಿಸಿದರು.