ತುಂಬೆ: ಗ್ಯಾಸ್ ಟ್ಯಾಂಕರ್ ಉರುಳಿ ಬಿದ್ದು
ಡಿವೈಡರ್ ಗೆ ಹಾನಿ
ಬಂಟ್ವಾಳ:ಇಲ್ಲಿನ ತುಂಬೆ ಸಮೀಪದ ಕಡೆಗೋಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ಯಾಸ್ ಟ್ಯಾಂಕರ್ ಉರುಳಿ ಬಿದ್ದು ಡಿವೈಡರ್ ಗೆ ಹಾನಿ ಉಂಟಾದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ. ಮಂಗಳೂರಿನಿಂದ ಗ್ಯಾಸ್ ತುಂಬಿಕೊಂಡು ಬೆಂಗಳೂರು ಕಡೆಗೆ ಹೋಗುತ್ತಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಉರುಳಿ ಬಿದ್ದು ಬಳಿಕ ರಸ್ತೆ ಮಧ್ಯೆ ಅಳವಡಿಸಿದ್ದ ಡಿವೈಡರ್ ಗೆ ಡಿಕ್ಕಿಯಾಗಿದೆ. ಇದರಿಂದಾಗಿ ಕೆಲಹೊತ್ತು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು.

ಗ್ಯಾಸ್ ಸೋರಿಕೆಯಾಗದ ಪರಿಣಾಮ ಯಾವುದೇ ಹೆಚ್ಚಿನ ಹಾನಿ ಉಂಟಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಬಂಟ್ವಾಳ ಅಗ್ನಿಶಾಮಕ ದಳ, ಸಂಚಾರಿ ಠಾಣೆ ಪೊಲೀಸರು ಬಂದು ಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿದರು.