ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ವಿ ಬಂಟ್ವಾಳಕ್ಕೆ
ಬಂಟ್ವಾಳ: ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಪ್ರಚಾರ ಬಿರುಸಿನಿಂದ ನಡೆಯುತ್ತಿದ್ದು, 249 ಬೂತ್ ಗಳಲ್ಲಿಯು ಪ್ರಥಮ ಸುತ್ತಿನ ಮನೆ ಸಂಪರ್ಕ ಕಾರ್ಯ ಮುಗಿದಿದೆ, ಕಾರ್ಯಕರ್ತರು ಎರಡನೇ ಹಂತದ ಪ್ರಚಾರದಲ್ಲಿ ನಿರತರಾಗಿದ್ದಾರೆ.
ಬಂಟ್ವಾಳದಾದ್ಯಂತ ಬಿಜೆಪಿ ಪರವಾದ ಅಲೆಯು ಇದೆ, ಎ.20 ರಂದು ಮಧ್ಯಾಹ್ನ 2.30 ಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಬಿ.ಸಿ.ರೋಡಿನ ಬ್ರಹ್ಮ ಶ್ರೀನಾರಾಯಣ ಗುರು ಮಂದಿರದಲ್ಲಿ ನಡೆಯುವ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಆರ್.ಕೋಟ್ಯಾನ್ ಅವರು ತಿಳಿಸಿದ್ದಾರೆ.
ಬಿ.ಸಿ.ರೋಡಿನಲ್ಲಿರುವ ಪಕ್ಷದ ಕಚೇರಿಯಲ್ಲಿ ಗುರುವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಅವರು ಬಂಟ್ವಾಳ ಕ್ಷೇತ್ರದಲ್ಲಿ ಈಗಾಗಲೇ 5 ಬಾರಿ ಮತಯಾಚನೆಯಲ್ಲಿ ಭಾಗಿಯಾಗಿದ್ದಾರೆ.ಎ. 22 ರಂದು ಮತ್ತೆ ಬಂಟ್ವಾಳ ಕ್ಷೇತ್ರದಲ್ಲಿ ವಿಭಿನ್ನ ರೀತಿಯಲ್ಲಿ ಮತಯಾಚನೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದರು.
ಅಂದು ಅಭ್ಯರ್ಥಿ ಬ್ರಿಜೇಶ್ ಚೌಟರವರು ಕುಲಾಲ, ವಿಶ್ವಕರ್ಮ ಸಮುದಾಯದ ಪ್ರಮುಖರ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಮಧ್ಯಾಹ್ನ ಬಿ.ಸಿ.ರೋಡ್ ಕೈಕಂಬದಿಂದ ರಿಕ್ಷಾ ಪಾರ್ಕ್ ಮತ್ತು ನಗರದಲ್ಲಿ ರೋಡು ಶೋ ಮೂಲಕ ಮತಯಾಚನೆ ಮಾಡಲಿದ್ದಾರೆ.ಬಳಿಕ ವಕೀಲರು,ವೈದ್ಯರು ಸಹಿತ ಪ್ರಬುದ್ಧರ ಜೊತೆ ಸಂವಾದ ನಡೆಸಲಿದ್ದಾರೆ.
ಸಂಜೆ ವಿಟ್ಲಪಡ್ನರು ಬಲಿಪಗುರಿ ಹಾಳೆ ತಟ್ಟೆ ಫ್ಯಾಕ್ಟರಿಗೆ ಭೇಟಿ ನೀಡಿ ಮತಯಾಚಿಸಲಿದ್ದಾರೆ. ನಂತರ ವಿಟ್ಲಪಡ್ನೂರು , ಅನಂತಾಡಿ ಗೋಳಿಕಟ್ಟೆಯಲ್ಲಿ ಸಾರ್ವಜನಿಕ ಸಭೆ, ಸಂಜೆ 6.30ಕ್ಕೆ ಸಾಲೆತ್ತೂರು ಜಂಕ್ಷನ್ , 7.30 ಕ್ಕೆ ಕಲ್ಲಡ್ಕ ಜಂಕ್ಷನ್ ನಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ ಎಂದು ಅವರು ವಿವರಿಸಿದರು.
ಎ. 21 ರಂದು ಇಡೀ ಕ್ಷೇತ್ರದಲ್ಲಿ ಶಾಸಕರು, ಮಾಜಿ ಶಾಸಕರು ಜನಪ್ರತಿನಿಧಿಗಳು, ಪ್ರಮುಖರು ಒಟ್ಟಾಗಿ ಅವರವರ ಬೂತ್ ನಲ್ಲಿ ಮನೆ, ಮನೆ ಸಂಪರ್ಕದ ಮಹಾಭಿಯಾನ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದರು.
ಶಾಸಕ ರಾಜೇಶ್ ನಾಯ್ಕ್ ಅವರು ಹಿರಿಯ ನಾಯಕರ ಜೊತೆಗೆ ಕ್ಷೇತ್ರದಲ್ಲಿ ಗ್ರಾಮ,ಮನೆ,ಮನ ಸಂಪರ್ಕ ಅಭಿಯಾನ ಎಂಬ ವಿಭಿನ್ನ ಶೈಲಿಯ ಕಾರ್ಯಕ್ರಮದ ಮೂಲಕ ಜನರ ಬಳಿಗೆ ತೆರಳಿ ಮತಯಾಚನೆಯಲ್ಲಿ ನಿರತರಾಗಿದ್ದು,ಇದು ಇಡೀ ಜಿಲ್ಲೆಯಲ್ಲಿ ಮಾದರಿಯಾಗಿದೆ ಎಂದು ತಿಳಿಸಿದರು.
ದೇಶಕ್ಕಾಗಿ ಚುನಾವಣೆ:
ಈ ಚುನಾವಣೆ ದೇಶದ ಹಿತಕ್ಕಾಗಿ ನಡೆಯುವ ಚುನಾವಣೆಯಾಗಿದ್ದು,ಕೆಲ ಸೋಕಾಲ್ಡ್ ಲೀಡರ್ ಗಳುಜಾತಿ ಮತ್ತು ಅಪಪ್ರಚಾರದ ಮೂಲಕ ಮತಯಾಚಿಸುವುದು ಗಮನಕ್ಕೆ ಬಂದಿದೆ.ಇದಕ್ಕೆ ಮತದಾರರು ಕಿವಿಗೊಡದೆ ದೇಶದ ರಕ್ಷಣೆ, ಅಭಿವೃದ್ದಿ, ಹಿಂದುತ್ವದ ಆಧಾರದಲ್ಲಿಭಾರತವನ್ನು ಪರಮವೈಭವ ಹಾಗೂ ರಾಮ ರಾಜ್ಯದ ಕನಸು, ವಿಕಸಿತ ಭಾರತದ ಕಲ್ಪನೆಯನ್ನು ಹೊಂದಿರುವ ಪ್ರಧಾನಿ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವ ನಿಟ್ಟಿನಲ್ಲಿ ಬಿಜೆಪಿಗೆ ಮತನೀಡಿ ಎಂದು ಈ ಸಂದರ್ಭ ಉಪಸ್ಥಿತರಿದ್ದ ಮಾಜಿ ಸಚಿವ ನಾಗರಾಜ ಶೆಟ್ಟಿ ಮನವಿ ಮಾಡಿದರು.
ದೇಶಕ್ಕೆ ಯಾರು ಯೋಗ್ಯರು, ಹಿಂದುತ್ವದ ಆಧಾರದಲ್ಲಿ ದೇಶವನ್ನು ಯಾರು ಮುನ್ನೆಡೆಸುತ್ತಾರೆ ಅಂತಹ ನಾಯಕರಿಗೆ ಮತದಾನ ಮಾಡಿ, ಅದು ಬಿಟ್ಟು ನೋಟಾ ಹಿಂದೆ ಹೋಗಬೇಡಿ.
ಜಿಲ್ಲೆಯ ಯಾವುದೇ ಸಮಸ್ಯೆಗಳಿದ್ದರೂ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಪರಿಹರಿಸುವ ವಿಶ್ವಾಸವಿದೆ ಎಂದು ಭರವಸೆ ನೀಡಿದ ನಾಗರಾಜ ಶೆಟ್ಟಿ ಅವರು ಕರ್ನಾಟಕ ಸರಕಾರದ ಗ್ಯಾರಂಟಿ ಯೋಜನೆಯಿಂದಾಗಿ ಪೊಲೀಸ್ ಸಹಿತ ಕೆಲ ಇಲಾಖೆಯ ಸಿಬ್ಬಂದಿಗಳಿಗೆ ಕಳೆದೆರಡು ತಿಂಗಳಿನಿಂದ ವೇತನ ಸಿಗದೆ ಕಂಗಾಲಾಗಿದ್ದು ರಾಜ್ಯದ ಆರ್ಥಿಕ ಪರಿಸ್ಥಿತಿಯಿಂದ ದಿವಾಳಿ ಅಂಚಿಗೆ ತಲುಪಿದೆ ಎಂದು ಟೀಕಿಸಿದರು.
ಕಳೆದ 10 ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಾಡಿರುವ ಸಾಧನೆ, ಯೋಜನೆಗಳು ಗ್ರಾಮೀಣ ಭಾಗದ ಪ್ರತಿಯೋರ್ವರಿಗೂ ತಲುಪಿದ್ದು,ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗಬೇಕೆಂಬುದನ್ನು ಬಯಸಿದ್ದಾರೆ.ದ.ಕ.ಮತ್ತು ಉಡುಪಿ- ಚಿಕ್ಜಮಗಳೂರು ಕ್ಷೇತ್ರದಲ್ಲೆರೆಡೆಲ್ಲು ಬಿಜೆಪಿ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಮಾತನಾಡಿ, ಬಿಜೆಪಿ ಮತ್ತೆ ಪ್ರಧಾನಿಯಾಗ ಬೇಕೆಂಬ ಜನರ ಕನಸು ನನಸಾಗುವುದರಲ್ಲಿ ಯಾವುದೇ ಸಂಶಯವಿಲ್ಲ, ಜಿಲ್ಲೆಯ ಅಭ್ಯರ್ಥಿ ಬ್ರಿಜೇಶ್ ಚೌಟ ಯುವ ನಾಯಕರಾಗಿದ್ದು, ಮೂರು ಲಕ್ಷಕ್ಕೂ ಅಧಿಕ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ದೇವಪ್ಪ ಪೂಜಾರಿ ಬಾಳಿಕೆ, ಹಿಂ. ವರ್ಗ ಮೋರ್ಛಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋನಪ್ಪ ದೇವಸ್ಯ, ಬಂಟ್ವಾಳ ಮಂಡಲದ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ಕಾರ್ಯದರ್ಶಿ ಪುರುಷೋತ್ತಮ ಶೆಟ್ಟಿ ವಾಮದಪದವು, ಉಪಾಧ್ಯಕ್ಷ ಚಿದಾನಂದ ರೈ ಕಕ್ಯ ಮತ್ತಿತರರು ಉಪಸ್ಥಿತರಿದ್ದರು.