Published On: Mon, Mar 18th, 2024

ಬಂಟ್ವಾಳ ಕ್ಷೇತ್ರದಲ್ಲಿ 249 ಮತಗಟ್ಟೆಗಳು, 2,27,956 ಮತದಾರರು,ಮೂರು ಚೆಕ್ ಪೂಸ್ಟ್

ಬಂಟ್ವಾಳ: ದ.ಕ.ಜಿಲ್ಲಾ ಲೋಕಸಭಾ  ಕ್ಷೇತ್ರಕ್ಕೊಳಪಟ್ಟಂತೆ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ  ಚುನಾವಣೆಗೆ ಸಂಬಂಧಿಸಿ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಲಾಗಿದೆ.ಬಂಟ್ವಾಳ ಕ್ಷೇತ್ರದಲ್ಲಿ ಒಟ್ಟು 249 ಮತಗಟ್ಟೆಗಳಿದ್ದು, ಪ್ರಸ್ತುತ 2,27,956 ಮತದಾರರಿದ್ದಾರೆ ಎಂದು ದ.ಕ.ಲೋಕಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ, ಯೋಜನಾ ನಿರ್ದೇಶಕರು ಆದ ಡಾ.ಉದಯ ಶೆಟ್ಟಿ ತಿಳಿಸಿದ್ದಾರೆ.

ಭಾನುವಾರ ಬಂಟ್ವಾಳ ತಾಲೂಕಾಡಳಿತ ಕಚೇರಿಯಲ್ಲಿ ಚುನಾವಣಾ ಸಂಬಂಧ ತೆರೆಯಲಾದ ಚುನಾವಣಾ ಶಾಖಾ‌ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ‌ ಈ ಬಗ್ಗೆ ಮಾಹಿತಿ‌ ನೀಡಿದರು.

ಇದರಲ್ಲಿ 1,12,123 ಮಂದಿ ಪುರುಷರು, 1,15,833 ಮಂದಿ ಮಹಿಳಾ ಮತದಾರರನ್ನು ಹೊಂದಿದ್ದಾರೆ. ಯುವ ಮತದಾರರು 4,672 ಇದ್ದು, ಇವರ ಪೈಕಿ 2426 ಪುರುಷರು, 2246 ಮಹಿಳೆಯರು ಇದ್ದಾರೆ. 85ಕ್ಕೂ ಮೇಲ್ಪಟ್ಟವರ ಪೈಕಿ 1774 ಮಂದಿ ಇದ್ದು, ಇವರಲ್ಲಿ 100 ವರ್ಷ ದಾಟಿದವರು 17ಮಂದಿ 85 ರಿಂದ 89 ವರ್ಷದವರು 1160, 90ರಿಂದ 99ವರ್ಷದವರು 597 ಮಂದಿ ಇದ್ದಾರೆ,ಎ.24 ರವರೆಗೂ ಹೊಸ ಮತದಾರರ ಸೇರ್ಪಡೆ,ಮತದಾರರ ಪಟ್ಟೊಯಲ್ಲಿ‌ ತಿದ್ದುಪಡಿಗೆ ಅವಕಾಶವಿರುತ್ತದೆ  ಎಂದು  ಹೇಳಿದರು.

ಮಾದರಿ ನೀತಿ ಸಂಹಿತೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ತಂಡಗಳನ್ನು ರಚಿಸಲಾಗಿದ್ದು, ಸಭೆ, ಸಮಾರಂಭ, ಧಾರ್ಮಿಕ ಕಾರ್ಯಕ್ರಮ, ರಾಜಕೀಯ ಸಭೆ, ಪ್ರಚಾರ ಸಭೆ ಇತ್ಯಾದಿಗಳನ್ನು ನಡೆಸಲು ಸಾರ್ವಜನಿಕರು, ರಾಜಕೀಯ ಪಕ್ಷದವರು ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳಬೇಕಾಗಿದೆ. ಜಿಲ್ಲಾ ಮಟ್ಟದ ನೋಡಲ್‌ ಅಧಿಕಾರಿಗಳಾಗಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ ಕೆ. ಕಾರ್ಯನಿರ್ವಹಿಸಲಿದ್ದು, ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೋಡಲ್ ಅಧಿಕಾರಿಯಾಗಿ ಎಪಿಎಂಸಿಯ ಶಮಂತ್ ಕುಮಾರ್ ಇರಲಿದ್ದಾರೆ.

ಮೂರು ಚೆಕ್ ಪೋಸ್ಟ್:
ಬಂಟ್ವಾಳ ತಾಲೂಕಿನಲ್ಲಿ ಪ್ರಮುಖವಾಗಿ ಕೇರಳ ಗಡಿಭಾಗವಾದ ಆನೆಕಲ್ಲು,ಸಾಲೆತ್ತೂರಿನ ಮೆದು ಹಾಗೂ ನೆಲ್ಲಿಕಟ್ಟೆಲ್ಲಿ ಈಗಾಗಲೇ ವಿಶೇಷ ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದ್ದು,24 ತಾಸುಗಳು ಸಿಬ್ಬಂದಿಗಳು ಕಾರ್ಯಾಚರಿಸಲಿದ್ದಾರೆ ಎಂದ ಅವರು ಚುನಾವಣೆ ಸುಸೂತ್ರವಾಗಿ ನಡೆಯುವ ನಿಟ್ಟಿನಲ್ಲಿ 9 ಪ್ಲೈಯಿಂಗ್ ಸ್ಕಾಡ್,3 ವಿಡಿಯೋ ಸರ್ ವೈಲೆನ್ಸ್,25 ಮಂದಿ‌ಸೆಕ್ಟರ್ ಅಧಿಕಾರಿಗಳ ತಂಡ ಕಾರ್ಯನಿರ್ವಹಿಸಲಿದ್ದಾರೆ ಎಂದು ಡಾ.ಉದಯ ಶೆಟ್ಟಿ ವಿವರಿಸಿದರು.

ನೀತಿ ಸಂಹಿತೆ ಉಲ್ಲಂಘಿಸಿದರೆ ದೂರು ನೀಡಿ:
ಚುನಾವಣಾ ಸಂಬಂಧಿಸಿದಂತೆ ಬಂಟ್ವಾಳ ತಾಲೂಕಾಡಳಿತ ಸೌಧದಲ್ಲಿ ಕಂಟ್ರೋಲ್ ರೂಮ್ ತೆರೆಯಲಾಗಿದ್ದು, ಅದರ ದೂರವಾಣಿ ಸಂಖ್ಯೆ 08255-232500 ಆಗಿರುತ್ತದೆ.

ಇದು ದಿನದ 24 ತಾಸುಗಳೂ ಕಾರ್ಯಾಚರಣೆ ನಡೆಸುತ್ತಿವೆ. ನೀತಿ ಸಂಹಿತೆ ಉಲ್ಲಂಘನೆ ದೂರುಗಳನ್ನು ಇದಕ್ಕೆ ನೀಡಬಹುದು ಅಲ್ಲದೆ, ಸಿ-ವಿಝಿಲ್ ಮೊಬೈಲ್ ಆಪ್ ಮೂಲಕ ಜಿಲ್ಲೆಯಲ್ಲಿ ಚುನಾವಣಾ ಸಂಬಂಧಿಸಿದಂತೆ ಉಲ್ಲಂಘನೆ ಪ್ರಕರಣಗಳು ಕಂಡು ಬಂದಲ್ಲಿ ಸಾರ್ವಜನಿಕರು ಫೋಟೋ ಹಾಗೂ ವಿಡಿಯೋಗಳ ಮೂಲಕ ದೂರು ದಾಖಲಿಸಬಹುದಾಗಿದೆ.

ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಸುವಿಧಾ ಆಪ್ ಮೂಲಕ ಚುನಾವಣಾ ಪ್ರಚಾರ ಕಾರ್ಯಗಳಿಗೆ ಅನುಮತಿ ಪಡೆಯಬಹುದು ಎಂದರು.
ಚುನಾವಣೆಗೆ ಸಂಬಂಧಿಸಿದಂತೆ ಹಲವು ವಿಚಾರಗಳಿಗೆ ತಾಲೂಕು ಮಟ್ಟದಲ್ಲಿ 15 ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಉಪತಹಸೀಲ್ದಾ‌ರ್ ನವೀನ್ ಬೆಂಜನಪದವು, ಅಧಿಕಾರಿಗಳಾದ ಶಮಂತ್‌ ಕುಮಾ‌ರ್ ಮತ್ತಿತರರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter