ಅಡಿಕೆ ಹಾಗೂ ತೆಂಗಿನ ಅಮದನ್ನು ನಿಷೇಧಿಸಬೇಕು ಸಹಿತ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮಾ. 7 ರಂದು ಪ್ರತಿಭಟನೆ
ಬಂಟ್ವಾಳ: ಅಡಿಕೆ ಹಾಗೂ ತೆಂಗಿನ ಅಮದನ್ನು ಸಂಪೂರ್ಣ ನಿಷೇಧಿಸಬೇಕು, ಎಲೆ ಚುಕ್ಕಿ ಹಾಗೂ ಹಳದಿ ಎಲೆ ರೋಗ ಭಾದಿತ ರೈತರಿಗೆ ಪ್ರತಿ ಎಕರೆಗೆ 25 ಸಾ.ರೂ.ಸಹಾಯಧನ ನೀಡಬೇಕು, ಬಂಟ್ವಾಳದ ಮೂಲಕ ಹಾದುಹೋಗುವ 400 ಕೆವಿ ವಿದ್ಯುತ್ ಮಾರ್ಗವನ್ನು ಸ್ಥಳಾಂತರಿಸಬೇಕು ಸಹಿತ ರೈತರ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ದ.ಕ.ಜಿಲ್ಲಾ ರೈತ ಸಂಘಗಳ ಒಕ್ಕೂಟದಿಂದ ಮಾ. 7 ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರಿತಭಟನಾ ಸಭೆ ಆಯೋಜಿಸಲಾಗಿದೆ ಎಂದು ಒಕ್ಕೂಟದ ಮುಖಂಡ ಓಸ್ವಾಲ್ಡ್ ಡಿಸೋಜ ತಿಳಿಸಿದ್ದಾರೆ.
ಮಂಗಳವಾರ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಅಂದು ಮಧ್ಯಾಹ್ನ 2 ಗಂಟೆಗೆ ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ವೃತ್ತದಿಂದ 200 ರಿಂದ 300 ರಷ್ಟು ರೈತರು ಟ್ರ್ಯಾಕ್ಟರ್ ಹಾಗೂ ವಿವಿಧ ವಾಹನಗಳ ಮೂಲಕ ಜಿಲ್ಲಾಧಿಕಾರಿ ಕಚೇರಿಯವರೆಗೆ ಸಾಗಲಿದ್ದಾರೆ .ಬಳಿಕ ಅಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ ಎಂದು ಹೇಳಿದರು.
ಅಡಿಕೆಯ ಅಮದಿನಿಂದಾಗಿ ದ.ಕ.ಜಿಲ್ಲೆಯಲ್ಲಿ ಅಡಿಕೆಯ ಬೆಲೆ ಕುಸಿದಿದ್ದು,ರೈತರು ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ.ಕಳೆದ ಕೆಲ ವರ್ಷದಿಂದ ಎಲೆಚುಕ್ಕಿ ಮತ್ತು ಹಳದಿ ರೋಗದಿಂದಾಗಿ ತೆಂಗಿನ ಬೆಲೆ ಕುಸಿತವಾಗಿ ಜಿಲ್ಲೆಯಲ್ಲು ರೈತರು ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿ ಉಂಟಾಗಿದೆ.ಈ ನಿಟ್ಟಿನಲ್ಲಿ ಅಧಿಕಾರಕ್ಕೆ ಬಂದಿದ್ದ ಸರಕಾರಗಳು ನೀಡಿರುವ ಭರವಸೆಯನ್ನು ಈಡೇರಿಸಿಲ್ಲ ಈ ರೋಗ ಬಾಧಿತ ರೈತರಿಗೆ ಪ್ರತಿ ಎಕರೆಗೆ 25 ಸಾ.ರೂ.ವಿನಂತೆ ಪರಿಹಾರ ನೀಡಬೇಕು ಎಂದುಒತ್ತಾಯಿಸಿದರು.
ಸರಕಾರದ ತಪ್ಪು ನೀತಿಯಿಂದಾಗಿ ರೈತ ಸಾಲಗಾರನಾಗಬೇಕಾಗಿದ್ದು,ರೈತನ ಸಾಲವನ್ನು ಮನ್ನಾ ಮಾಡಬೇಕು,ರೈತ ವಿರೋಧಿಯಾದ ಕಾನೂನನ್ನು ಹಿಂಪಡೆಯಬೇಕು,ಧಾರ್ಮಿಕ ಸಂಘರ್ಷದಲ್ಲಿ ಮೃತಪಟ್ಟವರಿಗೆ ಸರಕಾರ 25 ಲ.ರೂ.ಪರಿಹಾರ ನೀಡುವಂತೆ ಆತ್ಮಹತ್ಯೆಗೈದ ರೈತರಿಗೂ ಪರಿಹಾರ ನೀಡಬೇಕು ಹಾಗೆಯೇ ರೈತರ ಬೆಳೆಗಳಿಗೆ ಕನಿಷ್ಠಬೆಂಬಲ ಬೆಲೆಯನ್ನು ಕಾನೂನುಬದ್ದಗೊಳಿಸಬೇಕು,ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿ ಮಾಡಬೇಕೆಂದು ಅವರು ಒತ್ತಾಯಿಸಿದರು.
ಈ ಸಂದರ್ಭ ಒಕ್ಕೂಟದ ಇನ್ನೋರ್ವ ಮುಖಂಡ ಸನ್ನಿ ಡಿಸೋಜ ಮಾತನಾಡಿ ದ.ಕ.ಜಿಲ್ಲೆಯ ಅದರಲ್ಲು ವಿಟ್ಲ,ಪುತ್ತೂರು ಭಾಗದ ಅಡಿಕೆಗೆ ಸಾಕಷ್ಟು ಬೇಡಿಕೆಯಿದ್ದು,ಅಮದಾಗುವ ಅಡಿಕೆಯನ್ನು ಜಿಲ್ಲೆಯ ಅಡಿಕೆಯೊಂದಿಗೆ ಮಿಶ್ರಣಗೊಳಿಸಿಮಾರಾಟ ಮಾಡಲಾಗುತ್ತಿದ್ದು,ಈ ಮೂಲಕ ಜಿಲ್ಲೆಯ ಅಡಿಕೆಯ ಹೆಸರಿಗೆ ಕಳಂಕ ತರುವ ಹುನ್ನಾರ ನಡೆಯುತ್ತಿದೆ.ಈ ಹಿನ್ನಲೆಯಲ್ಲಿ ಕ್ಯಾಂಪ್ಕೋ ಸಂಸ್ಥೆ ಅಡಿಕೆಯನ್ನು ಬ್ರಾಂಡಿಂಗ್ ಮಾಡಬೇಕು ಎಂದು ಆಗ್ರಹಿಸಿದರು. ಸದಸ್ಯ ಸದಾನಂದ ಶೀತಲ್ ಹಾಜರಿದ್ದರು.
ReplyReply allForwardAdd reaction |