ವಾಮಂಜೂರು : ದುರ್ವಾಸನೆ ಬೀರುವ ಅಣಬೆ ಉತ್ಪಾದನಾ ಘಟಕದ ವಿರುದ್ಧ ನಾಗರಿಕರಿಂದ ಭಾರೀ ಪ್ರತಿಭಟನೆ
ಕೈಕಂಬ: ವಾಮಂಜೂರಿನ ಆಶ್ರಯನಗರ ಹಾಗೂ ಸುತ್ತಮುತ್ತಲ ವಸತಿ ಪ್ರದೇಶದ ಬಡ ಜನರ ಆರೋಗ್ಯ ಮತ್ತು ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿರುವ ಅಣಬೆ ಉತ್ಪಾದನಾ ಘಟಕ ಸ್ಥಳಾಂತರಗೊಳಿಸಬೇಕು, ಇಲ್ಲವೇ ಬಂದ್ ಮಾಡಬೇಕು. ಅಲ್ಲಿಯವರೆಗೆ ಹೋರಾಟ ಜಾರಿಯಲ್ಲಿರುತ್ತದೆ ಎಂದು ವಾಮಂಜೂರು ತಿರುವೈಲು ವಾರ್ಡ್ ನ ಮನಪಾ ಕಾರ್ಪೊರೇಟರ್ ಹೇಮಲತಾ ರಘು ಸಾಲ್ಯಾನ್ ಎಚ್ಚರಿಸಿದರು.

ಅಣಬೆ ಉತ್ಪಾದನಾ ಘಟಕಕ್ಕೆ ಸಂಪರ್ಕಿಸುವ ಪ್ರದೇಶದಲ್ಲಿ ವಾಮಂಜೂರು ನಾಗರಿಕರು ಡಿ. ೧೧ರಂದು ಆಯೋಜಿಸಿದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು ಅವರು ಮಾತನಾಡಿ, ಅಣಬೆ ಉತ್ಪಾದನಾ ಘಟಕದಿಂದ ಹೊರಸೂಸುವ ದುರ್ವಾಸನೆಯಿಂದ ಪರಿಸರದ ಮಾಲಿನ್ಯ ಉಂಟಾಗಿದ್ದು, ಜನರ ರಕ್ಷಣೆಗೋಸ್ಕರ ನಾವು ಹೋರಾಟ ನಡೆಸುತ್ತಿದ್ದೇವೆ. ವಾಮಂಜೂರು ನಾಗರಿಕರಿಗೆ ಆಗುತ್ತಿರುವ ತೊಂದರೆ ಬಗೆಹರಿಸುವ ನಿಟ್ಟಿನಲ್ಲಿ ನಾವು ತಾಳ್ಮೆಯಿಂದ ಹೋರಾಟ ನಡೆಸುತ್ತಿದ್ದು, ಸರ್ಕಾರದ ಮಟ್ಟದಲ್ಲೂ ಮಾತನಾಡುತ್ತಿದ್ದೇವೆ ಎಂದರು.

ಸಾಮಾಜಿಕ ಕಾರ್ಯಕರ್ತ ಲಕ್ಷ್ಮಣ್ ಶೆಟ್ಟಿಗಾರ ಮಾತನಾಡಿ, ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿ ಅಣಬೆ ಉತ್ಪಾದನಾ ಘಟಕ ಕಾರ್ಯ ನಿರ್ವಹಿಸುತ್ತಿದೆ. ಘಟಕದಿಂದ ಈಗ ಅಧಿಕ ಪ್ರಮಾಣದಲ್ಲಿ ದುರ್ವಾಸನೆ ಹೊರಸೂಸುತ್ತಿದೆ. ಸ್ಥಳೀಯರ ನೆಮ್ಮದಿಯ ಬದುಕಿಗಾಗಿ ಹೋರಾಟ ನಡೆಸುತ್ತಿದ್ದೇವೆ ಎಂದರು.

ಸಾಮಾಜಿಕ ಕಾರ್ಯಕರ್ತ ಆಕಿಬ್ ವಾಮಂಜೂರು ಮಾತನಾಡಿ, ಅಭಿವೃದ್ಧಿ ಹೊಂದುತ್ತಿರುವ ವಾಮಂಜೂರಿಗೆ ಅಣಬೆ ಉತ್ಪಾದನಾ ಘಟಕ ಕಪ್ಪು ಚುಕ್ಕೆಯಾಗಿದೆ. ಘಟಕದಿಂದ ಇಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಷಾನಿಲ ಹರಡುತ್ತಿದೆ. ಇಲ್ಲಿಗೆ ಆಗಮಿಸಿ ಘಟಕ ಪರಿಶೀಲನೆ ನಡೆಸಿದ ಸಮಿತಿಯಲ್ಲಿದ್ದ ೫ ಇಲಾಖೆಗಳ ಅಧಿಕಾರಿಗಳು ಘಟಕದ ಮಾಲಕರ ಪರ ಜಿಲ್ಲಾಡಳಿತಕ್ಕೆ ವರದಿ ಒಪ್ಪಿಸಿದ್ದಾರೆ.
ಆದ್ದರಿಂದ ಸಮಸ್ಯೆಯ ಆಮೂಲಾಗ್ರ ಪರಿಶೀಲನೆಗೆ ಜಿಲ್ಲಾಡಳಿತ ಮರು ಮಧ್ಯಪ್ರವೇಶಿಸಬೇಕು. ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಬೇಡಿ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ವಾಮಂಜೂರು ಮತದಾರರು ಮುಂದಿನ ಲೋಕಸಭೆ ಚುನಾವಣೆ ಬಹಿಷ್ಕರಿಸುವುದರಲ್ಲಿ ಸಂದೇಹವೇ ಇಲ್ಲ ಎಂದು ಎಚ್ಚರಿಸಿದರು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಸ್ಥಳೀಯರಾದ ಜಯಂತಿ ಡಿ, ನಿಷಾ ಮೂಡುಶೆಡ್ಡೆ, ಕಾವ್ಯಾ ಆಶ್ರಯನಗರ, ವಾಮಂಜೂರು ಇಸ್ಲಾವುಲ್ ಇಸ್ಲಾಂ ಮಸೀದಿಯ ಆಡಳಿ ಸಮಿತಿ ಅಧ್ಯಕ್ಷ ಇಬ್ರಾಹಿಂ ಮತ್ತು ಉಳಾಯಿಬೆಟ್ಟು ಗ್ರಾಮ ಪಂಚಾಯತ್‌ನ ಸದಸ್ಯ ಅಝರುದ್ದೀನ್ ಅವರು ಮಾತನಾಡಿ, ಸ್ಥಳೀಯರಿಗೆ ಯಾವುದೇ ರೀತಿಯ ತೊಂದರೆ ಕೊಡಬೇಡಿ.
ಕಳೆದ ೨ ವರ್ಷಗಳಿಂದ ಜನರಿಗೆ ಶಾರೀರಿಕ ಮತ್ತು ಮಾನಸಿಕ ಹಿಂಸೆಯಾಗಿ ಕಾಡುತ್ತಿರುವ ಅಣಬೆ ಉತ್ಪಾದನಾ ಘಟಕ ಬಂದ್ ಅಥವಾ ಸ್ಥಳಾಂತರಿಸಬೇಕು. ಇಲ್ಲವೇ, ದುರ್ವಾಸನೆಗೆ ಕಾರಣವಾಗಿರುವ ಅಣಬೆ ಉತ್ಪಾದನಾ ಫ್ಯಾಕ್ಟರಿಯೊಳಗಿನ ಗೊಬ್ಬರ(ಕಾಂಪೋಸ್ಟ್) ಘಟಕ ಬೇರೆಡೆಗೆ ಸ್ಥಳಾಂತರಿಸಬೇಕು ಎಂಬ ಆಗ್ರಹ ಕೇಳಿ ಬಂತು.
ಪ್ರತಿಭಟನಾಕಾರರು ವಾಮಂಜೂರು ಜಂಕ್ಷನ್‌ನವರೆಗೆ ಮೆರವಣಿಗೆಯಲ್ಲಿ ಸಾಗಿದ ವೇಳೆ ಅಣಬೆ ಉತ್ಪಾದನಾ ಘಟಕ ದುರ್ವಾಸನೆ ಮತ್ತು ಮಾಲಕರ ವಿರುದ್ಧ ಘೋಷಣೆಗಳು ಕೇಳಿ ಬಂತು. ಘಟಕದ ಸಂತ್ರಸ್ತರು, ವಾಮಂಜೂರಿನ ನೂರಾರು ಮಂದಿ ನಾಗರಿಕರು ಇದ್ದರು