ಸೇವಾ ಭದ್ರತೆಯೊಂದಿಗೆ ಗೌರವಧನ ಹೆಚ್ಚಿಸುವಂತೆ ಆಗ್ರಹ
ಬಂಟ್ವಾಳ: ಸಂಜೀವಿನಿ ಯೋಜನೆಯ ಎಂ.ಬಿ.ಕೆ.ಎಲ್.ಸಿ.ಆರ್.ಪಿಗಳಿಗೆ ಸೇವಾ ಭದ್ರತೆಯೊಂದಿಗೆ ಗೌರವಧನವನ್ನು ಹೆಚ್ಚಿಸುವಂತೆ ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅವರು ರಾಜ್ಯದ ಕೌಶಲ್ಯ ಅಭಿವೃದ್ದಿ ಸಚಿವ ಶರಣ್ ಪ್ರಕಾಶ್ ಪಾಟೀಲ್ ಅವರನ್ನು ಮನವಿ ಮೂಲಕ ಒತ್ತಾಯಿಸಿದ್ದಾರೆ.

ರಾಷ್ಟ್ರೀಯ ಜೀವನೋಪಾಯ ಅಭಿಯಾನದಡಿ ಸಂಜೀವಿನಿ ಯೋಜನೆಯಲ್ಲಿ ರಾಜ್ಯದಾದ್ಯಂತ ಸುಮಾರು 60 ಸಾವಿರ ಮುಖ್ಯ ಪುಸ್ತಕ ಬರಹಗಾರರು ಹಾಗೂ 12 ಸಾವಿರಕ್ಕೂ ಹೆಚ್ಚು ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಕಾರ್ಯನಿರ್ವಹಿಸುತ್ತಿದ್ದು, ಗ್ರಾಮ ಪಂಚಾಯತ್ ಮಟ್ಟದಲ್ಲಿ ಸ್ತ್ರೀಶಕ್ತಿ, ಸಂಜೀವಿನಿ ಸೇರಿದಂತೆ ಹಲವು ಸ್ವಸಹಾಯ ಸಂಘಗಳನ್ನು ರಚಿಸಿಕೊಂಡು ಅಗತ್ಯವುಳ್ಳವರಿಗೆ ಬ್ಯಾಂಕುಗಳಿಂದ ನೆರವು ಕೊಡಿಸುವುದು ಸೇರಿದಂತೆ ಸದಸ್ಯರು ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು ನೆರವಾಗುವುದರೊಂದಿಗೆ ವಿವಿಧ ತರಬೇತಿ ನೀಡುತ್ತಿದ್ದಾರೆ.
ಗ್ರಾಮ ಪಂಚಾಯತ್ ಗಳಲ್ಲಿನ ಉದ್ಯೋಗ ಖಾತರಿ ಯೋಜನೆ ಸೌಲಭ್ಯವನ್ನು ಅರ್ಹರಿಗೆ ತಲುಪಿಸುವುದರ ಜೊತೆಗೆ ಸರಕಾರದ ವಿವಿಧ 40 ಕ್ಕೂ ಹೆಚ್ಚು ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳ್ಳಲು ಶ್ರಮಿಸುತ್ತಿರುವ ಮುಖ್ಯ ಪುಸ್ತಕ ಬರಹಗಾರರು ಹಾಗೂ ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ಸೇವಾ ಭದ್ರತೆಯೊಂದಿಗೆ ಕ್ರಮವಾಗಿ 20 ಸಾವಿರ ಹಾಗೂ 15 ಸಾವಿರ ಗೌರವಧನ ಹೆಚ್ಚಿಸಬೇಕೇಂದು ಪ್ರಭು ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ.