ಬಂಟ್ವಾಳ : ಹಿಂದೂ ಜಾಗರಣ ವೇದಿಕೆಯ ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಅವರಿಗೆ ಬೀದರ್ ಜಿಲ್ಲೆಯ ಹುಲಸೂರು ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಆದೇಶ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ , ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದ ನಿಯೋಗ ನರಸಿಂಹ ಮಾಣಿ ಅವರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಧೈರ್ಯದರು.


ನರಸಿಂಹಮಾಣಿ ಅವರು ಗಡಿಪಾರು ಆದೇಶಕ್ಕೆ ಒಳಗಾಗಿರುವುದರಿಂದ ಕುಟುಂಬದವರು ಎದುರಿಸುತ್ತಿರುವ ಮಾನಸಿಕ ನೋವು ಮತ್ತು ಆತಂಕವನ್ನು ಆಲಿಸಿದ  ಮಾಜಿ ಸಂಸದ ನಳಿನ್ ಕುಮಾರ್ ಹಾಗೂ ಮುಖಂಡರು, ಯಾವುದೇ ಸಂದರ್ಭದಲ್ಲಿಯೂ ಧೃತಿಗೆಡದೆ ಧೈರ್ಯದಿಂದ ಇರುವಂತೆ ತಿಳಿಸಿದರಲ್ಲದೆ ಇಡೀ ಹಿಂದೂ ಸಮಾಜನಿಮ್ಮಜೊತೆಗಿದೆಯೆಂದು ಧೈರ್ಯ ತುಂಬಿದರು.


ಬಳಿಕ ಮಾತನಾಡಿದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಇಡೀ ಹಿಂದೂ ಸಮಾಜ ನರಸಿಂಹ ಮಾಣಿಯವರ ಜೊತೆಗಿದೆ. ಹಿಂದೂಗಳನ್ನು ಟಾರ್ಗೆಟ್ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಯಲಿದೆ.ಹಿಂದೂ ಕಾರ್ಯಕರ್ತರು ಹಾಗೂ ಹಿಂದೂಪರ ಸಂಘಟನೆಗಳ ನಾಯಕರನ್ನು ನಿರಂತರವಾಗಿ ಇಂತಹ ಕ್ರಮಗಳ ಮೂಲಕ  ಗುರಿಯಾಗಿಸಿಕೊಂಡು ಪೊಲೀಸ್ ಇಲಾಖೆ ಕೈಗೊಳ್ಳುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.


ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಪೊಲೀಸ್ ಇಲಾಖೆಯ ಈ ನಡೆ ಹಿಂದೂ ವಿರೋಧಿಯಾಗಿದ್ದು, ಕಾಂಗ್ರೆಸ್ ಕುಮ್ಮಕ್ಕು ಹೆಚ್ಚು ದಿನ ನಡೆಯಲಾರದು, ಕಾನೂನು ಸುವ್ಯವಸ್ಥೆ ಕಾಪಾಡುವುದು ಪೊಲೀಸ್ ಇಲಾಖೆಯ ಪ್ರಮುಖ ಜವಾಬ್ದಾರಿಯಾಗಿದ್ದು, ಯಾವುದೇ ಸಂಘಟನೆ ಅಥವಾ ವ್ಯಕ್ತಿಯ ವಿರುದ್ಧ ಪೂರ್ವಾಗ್ರಹದಿಂದ ವರ್ತಿಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು.


ಈ ಸಂದರ್ಭ ಉದ್ಯಮಿ ಉಜ್ವಲ್ ಪ್ರಭು,ಹಿಂದೂ ಮುಖಂಡ ಮುರಳಿಕೃಷ್ಣ ಹಸಂತಡ್ಕ, ಹಿಂ. ಜಾ. ವೇ.ಯ ಪ್ರಾಂತ ಕಾರ್ಯಕಾರಣಿ ಸದಸ್ಯರಾದ ಪ್ರಶಾಂತ್ ಕೆಂಪುಗುಡ್ಡೆ, ಪುತ್ತೂರು ಜಿಲ್ಲಾ ಸಂಯೋಜಕ ಮೋಹನ್ ದಾಸ್ ಕಾಣಿಯೂರು, ದಿನೇಶ್ ಪಂಜಿಗ, ಪುಷ್ಪರಾಜ್ ಕಮ್ಮಾಜಿ, ಅನುಪ್ ರಾಜ್ ಮಯ್ಯ ಮತ್ತಿತರರು ಉಪಸ್ಥಿತರಿದ್ದರು.


ಅಜಯ್ ಭೇಟಿ;


ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಅವರಿಗೆ ಗಡಿಪಾರು ಆದೇಶ ಜಾರಿಗೊಳಿಸುವ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಅಜಯ್ ದೀಕ್ಷಿತ್ ಶೆಟ್ಟಿ ಅವರು ನರಸಿಂಹ ಮಾಣಿ ಅವರ ಮನೆಗೆ ಭೇಟಿ ನೀಡಿ ಮನೆಯಲ್ಲಿದ್ದ ತಾಯಿ ಹಾಗೂ ತಂಗಿಯನ್ನು ಭೇಟಿಯಾಗಿ ಧೈರ್ಯ ತುಂಬಿದರು.

By Suddi9