ಅಂತರ್ ರಾಷ್ಟ್ರೀಯ ಮಟ್ಟದ ಡೆಫ್ಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾಳೆ ಕಲ್ಲಡ್ಕ ಶ್ರೀರಾಮದ ವಿದ್ಯಾರ್ಥಿನಿ
ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪದವಿ ಮಹಾವಿದ್ಯಾಲಯದ ಅಂತಿಮ ಬಿ.ಸಿ.ಎ ವಿದ್ಯಾರ್ಥಿನಿ ಯಶಸ್ವಿ ಕುದುಮಾನ್ ಬಂಟ್ವಾಳ ತಾಲೂಕು, ಕೆದಿಲ ಗ್ರಾಮದ ಸತ್ತಿ ಕಲ್ಲು ನಿವಾಸಿಗಳಾದ ತಿಮ್ಮಪ್ಪ ಮೂಲ್ಯ ಹಾಗೂ ಯಶೋದಾ ಇವರ ದ್ವಿತೀಯ ಪುತ್ರಿಯಾದ ಈಕೆ ಅತ್ಯುತ್ತಮ ಚೆಸ್ ಆಟಗಾರ್ತಿಯಾಗಿದ್ದು, ಈಚೆಗೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದ ರಾಷ್ಟ್ರ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಭಾಗವಹಿಸಿ, ಮುಂದಿನ ಮಾರ್ಚ್ ನಲ್ಲಿ ಟರ್ಕಿಯಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಮಟ್ಟದ ಡೆಫ್ಲಿಂಪಿಕ್ಸ್ ಗೆ ಆಯ್ಕೆಯಾಗಿ ಭಾರತವನ್ನು ಪ್ರತಿನಿಧಿಸಲಿದ್ದಾಳೆ.

ಅಖಿಲ ಭಾರತ ಮಟ್ಟದ ವಿಕಲಚೇತನರ ಮಹಿಳಾ ವಿಭಾಗದ ಚೆಸ್ ಪಂದ್ಯ, ಅಖಿಲ ಭಾರತ ಮುಕ್ತ ಕ್ಷಿಪ್ರ ಚೆಸ್ ಪಂದ್ಯಾವಳಿ ಸೇರಿದಂತೆ ಇತರೆ ಚೆಸ್ ಪಂದ್ಯಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದು, ಉಡುಪಿ- ಮಣಿಪಾಲದಲ್ಲಿ ನಡೆದ ಅಖಿಲ ಭಾರತ ಮುಕ್ತ ಕ್ಷಿಪ್ರ ಚೆಸ್ ಪಂದ್ಯಾವಳಿಯಲ್ಲಿ ೬ನೆಯ ಬಹುಮಾನ, ಇನ್ನಿತರ ಚೆಸ್ ಸ್ಪರ್ಧೆಗಳಲ್ಲಿಯೂ ಬಹುಮಾನ ಪಡೆದುಕೊಂಡು ನಮ್ಮ ನಾಡಿಗೆ ಕೀರ್ತಿ ತಂದಿದ್ದಾಳೆ.

ಇದಲ್ಲದೆ ಈಕೆ ಕಲಿಕೆ ಹಾಗೂ ನೃತ್ಯದಲ್ಲಿಯೂ ಮುಂದಿದ್ದು ಪದವಿಯ ಸೆಮಿಸ್ಟರ್ ಪರೀಕ್ಷೆಗಳಲ್ಲಿ ಸರಾಸರಿ ೯೦ ಶೇಕಡಾ ಅಂಕಗಳನ್ನು ಪಡೆಯುತ್ತಾ ಬಂದಿರುತ್ತಾಳೆ. ಇವಳ ಈ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹಾಗೂ ಇತರ ಹಿರಿಯರು ಅಭಿನಂದನೆ ಸಲ್ಲಿಸಿದ್ದಾರೆ.